ವಿಶ್ವದಾದ್ಯಂತ ಮೈಕ್ರೋಬ್ಲಾಗಿಂಗ್ ಅಥವಾ ಸಾಮಾಜಿಕ ಸಂಪರ್ಕ ತಾಣಗಳು ಪ್ರಸಿದ್ಧಿಗೆ ಬರುತ್ತಿದ್ದು, ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಟ್ವಿಟ್ಟರ್ ಅತಿ ಹೆಚ್ಚಾಗಿ ಬಳಕೆಯಾಗುತ್ತಿರುವುದು ಸುದ್ದಿ ಮಾಹಿತಿಗಳಿಗಾಗಿ ಎಂಬುದು ಬಹಿರಂಗಗೊಂಡಿದೆ.
ಪ್ಲಗ್‌ಜಿಡಿ.ಇನ್ ಎಂಬ ವೆಬ್‌ಸೈಟ್ ನಡೆಸಿದ ಸಮೀಕ್ಷೆ ಪ್ರಕಾರ ಭಾರತದ ಶೇ.16ರಷ್ಟು ಮಂದಿ ತಾಜಾ ಸುದ್ದಿಗಳನ್ನು ಪಡೆಯಲು ಟ್ವಿಟ್ಟರ್ ಬಳಸುತ್ತಾರಂತೆ.
ಶೇ.11ರಷ್ಟು ಮಂದಿ ತಮ್ಮ ಗೆಳೆಯರ ಜತೆ ಸದಾ ಸಂಪರ್ಕದಲ್ಲಿರಲು ಬಳಸಿದರೆ, ಅಧ್ಯಯನ ವಿಚಾರಗಳಿಗಾಗಿ ಬಳಸುವವರು ಶೇ.10ರಷ್ಟು ಮಂದಿ ಎಂದು ಸಮೀಕ್ಷೆ ತಿಳಿಸಿದೆ.
ಇತ್ತೀಚೆಗಷ್ಟೇ 'ದನಗಳ ದೊಡ್ಡಿ' ಎಂಬ ವಿವಾದಕ್ಕೆ ಕಾರಣವಾಗಿದ್ದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಶಿ ತರೂರ್ ಟ್ವೀಟ್ ರಾಷ್ಟ್ರೀಯ ಸುದ್ದಿಯಾಗಿ ಮಾರ್ಪಟ್ಟಿತ್ತು. ಟ್ವಿಟ್ಟರ್ ಜನಪ್ರಿಯತೆಗೆ ಇದೂ ಕೂಡ ಕಾರಣವಾಗಿದೆ ಎಂದು ಹೇಳಲಾಗಿದೆ.
ಪ್ರತೀ ಕ್ಷಣವೂ ಟ್ವಿಟ್ಟರ್ ಸಂಪರ್ಕದಲ್ಲಿರುವ ತರೂರ್ ಈಗ ಮೂರು ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಈ ತಾಣದಲ್ಲಿ ಹೊಂದಿದ್ದಾರೆ. ಅಲ್ಲದೆ ಹಲವು ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾ ನಟಿಯರು, ಪತ್ರಕರ್ತರು, ಐಟಿ ಉದ್ಯೋಗಿಗಳು ಸೇರಿದಂತೆ ಬಹುತೇಕ ಮಂದಿ ಟ್ವೀಟ್‌ಗಳನ್ನು ಕಳುಹಿಸುವ ಮೂಲಕ ವಿದ್ಯಮಾನಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
2006ರಲ್ಲಿ ಚಾಲನೆ ದೊರೆತಿದ್ದ ಈ ಸಾಮಾಜಿಕ ಸಂಪರ್ಕ ತಾಣವು ಕಳೆದ ವರ್ಷದ ಮುಂಬೈ ದಾಳಿ ಸಂದರ್ಭದಲ್ಲಿ ಜನ-ಮನದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿತ್ತು. ಘಟನೆ ನಡೆದ ಕೇವಲ ಐದು ಸೆಕುಂಡುಗಳಲ್ಲಿ 80 ಟ್ವೀಟುಗಳು ಬಂದಿರುವುದೇ ಇದಕ್ಕೆ ಸಿಕ್ಕಿರುವ ಪುರಾವೆ. ಇದರಿಂದ ಗಾಯಾಳುಗಳು ಹಾಗೂ ಸಂತ್ರಸ್ತರ ಕುಟುಂಬಗಳಿಗೂ ಸಹಾಯವಾಗಿತ್ತು.
ಟ್ವಿಟ್ಟರ್‌ಗೆ ಪ್ರಬಲ ಪೈಪೋಟಿ ನೀಡುತ್ತಿರುವುದು ಸರ್ಚ್ ಇಂಜಿನ್ ದೈತ್ಯ ಗೂಗಲ್‌ನ ಆರ್ಕುಟ್ ಮತ್ತು ಫೇಸ್‌ಬುಕ್‌ಗಳಿಂದ. ಫೇಸ್‌ಬುಕ್ 80 ಲಕ್ಷ ಬಳಕೆದಾರರನ್ನು ಹೊಂದಿದ್ದರೆ, ಆರ್ಕುಟ್ 16 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಟ್ವಿಟ್ಟರ್ ಭಾರತದಲ್ಲಿ 14 ಲಕ್ಷ ಜನರ ಸಂಪರ್ಕದಲ್ಲಿದ್ದು, ಜರ್ಮನಿ ಮತ್ತು ಅಮೆರಿಕಾ ನಂತರದ ಮೂರನೇ ಸ್ಥಾನದಲ್ಲಿದೆ.