ವಿಂಡೋಸ್ 7ನತ್ತ ಗ್ರಾಹಕರು ಭಾರೀ ಸಂಖ್ಯೆಯಲ್ಲಿ ಆಕರ್ಷಿತರಾಗಿದ್ದು, ಮೈಕ್ರೋಸಾಫ್ಟ್‌ನ ಈ ಹಿಂದಿನ ಆಪರೇಟಿಂಗ್ ಸಿಸ್ಟಂಗಳಾದ ವಿಂಡೋಸ್ ವಿಸ್ತಾ ಮತ್ತು ವಿಂಡೋಸ್ ಎಕ್ಸ್‌ಪಿಗಳಿಂದ ಮಾರ್ಪಾಡು ಹೊಂದುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.
ಎನ್‌ಪಿಡಿ ಸಮೂಹ ನಡೆಸಿರುವ ಸಮೀಕ್ಷೆ ಪ್ರಕಾರ 2007ರ ಜನವರಿಯಲ್ಲಿ ಬಿಡುಗಡೆಯಾಗಿದ್ದ ವಿಂಡೋಸ್ ವಿಸ್ತಾಕ್ಕಿಂತ ಶೇ.234ರಷ್ಟು ಹೆಚ್ಚು ವಿಂಡೋಸ್ 7 ಆಪರೇಟಿಂಗ್ ಸಿಸ್ಟಂ ಅಮೆರಿಕಾದಲ್ಲಿ ಮಾರಾಟವಾಗಿದೆ.
ವಿಂಡೋಸ್ ವಿಸ್ತಾದ ವೈಫಲ್ಯತೆಯಿಂದಾಗಿ ವಿಂಡೋಸ್ 7ನತ್ತ ಬಳಕೆದಾರರು ಆರಂಭದಲ್ಲಿ ಮುಗಿ ಬೀಳದಿದ್ದರೂ, ನಂತರ ಬೃಹತ್ ಸಂಖ್ಯೆಯಲ್ಲಿ ನೂತನ ಆಪರೇಟಿಂಗ್ ಸಿಸ್ಟಂ ಕೊಳ್ಳಲು ಮುಂದಾಗಿದ್ದಾರೆ ಎಂದು ಎನ್‌ಪಿಡಿಯ ಉಪಾಧ್ಯಕ್ಷ ಸ್ಟೀಫನ್ ಬೇಕರ್ ಹೇಳಿದ್ದಾರೆ.
ವಿಸ್ತಾ ಬಿಡುಗಡೆಯಾಗುವ ಮೊದಲೇ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಉಂಟು ಮಾಡಿತ್ತು. ಅದಕ್ಕಿರುವ ಮತ್ತೊಂದು ಕಾರಣ ಸಾಂಪ್ರದಾಯಿಕವಾಗಿ ಮಾರಾಟದಲ್ಲಿ ಪ್ರಗತಿ ಸಾಧಿಸುವ ಜನವರಿ ತಿಂಗಳು ಎಂದು ಸಂಸ್ಥೆ ಹೇಳಿದೆ.
ಅಕ್ಟೋಬರ್ 22ರಂದು ಬಿಡುಗಡೆಯಾಗಿದ್ದ ವಿಂಡೋಸ್ 7 ಇದೀಗ ಮಾರಾಟದಲ್ಲಿ ದಾಖಲೆಯನ್ನೇ ನಿರ್ಮಿಸುತ್ತಿದೆ. ಅಮೆಜಾನ್ ಯುಕೆ ಪ್ರಕಾರ ಪ್ರಿ-ಆರ್ಡರ್ ದಾಖಲೆಗಳನ್ನು ಪರಿಶೀಲಿಸಿದಾಗ ಹ್ಯಾರಿ ಪಾಟರ್ ಮತ್ತು ಡಾನ್ ಬ್ರೌನ್ ಪುಸ್ತಕಗಳ ಮಾರಾಟವನ್ನು ಕೂಡ ನೂತನ ಆಪರೇಟಿಂಗ್ ಸಿಸ್ಟಂ ಹಿಂದಿಕ್ಕಿದೆ.
ವಿಂಡೋಸ್ 7 ಮಾರಾಟದಿಂದ ಹೆಚ್ಚಿನ ಲಾಭವಾಗಿರುವುದು ಕಂಪ್ಯೂಟರ್ ತಯಾರಿಕಾ ಕಂಪನಿಗಳಿಗೆ. ಹಳೆಯ ಕಂಪ್ಯೂಟರುಗಳಿಗೆ ಹೊಂದಾಣಿಕೆಯಾಗದೆ ಕೆಲವರು ವಿಂಡೋಸ್ 7ಗೆ ಹೊಂದಿಕೆಯಾಗುವ ನೂತನ ಕಂಪ್ಯೂಟರ್ ಖರೀಸುವುದು ಅನಿವಾರ್ಯ. ಅದರಲ್ಲೂ ಬಹುತೇಕ ಮಂದಿ ತಮ್ಮಲ್ಲಿ ಅದಕ್ಕೆ ಬೇಕಾದ ಕಂಪ್ಯೂಟರ್ ಹೊಂದಿದ್ದರೂ, ನೂತನ ಕಂಪ್ಯೂಟರ್‌ನೊಂದಿಗೆ ಬರುವ ವಿಂಡೋಸ್ 7ಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ ಎಂದು ಜಪಾನ್‌ನ ವ್ಯಕ್ತಿಯೊಬ್ಬರು ಹೇಳಿದ್ದಾರೆ.