ಪ್ರಸಕ್ತ ಚಾಲ್ತಿಯಲ್ಲಿರುವ ರೀಟೇಲ್ ವಲಯದ ಎಫ್‌ಡಿಐ ನೀತಿಯನ್ನು ಬದಲಾಯಿಸುವ ಯೋಜನೆ ಇಲ್ಲ ಎಂದು ಸರ್ಕಾರ ಹೇಳಿದೆ. ವಿಶ್ವದ ಬೃಹತ್ ರಿಟೇಲರ್ ಆಗಿರುವ ವಾಲ್-ಮಾರ್ಟ್ ಇಂಕ್ ಪ್ರಧಾನಿಯವರನ್ನು ಭೇಟಿಯಾಗಿ ರೀಟೇಲ್ ವಲಯವನ್ನು ಮುಕ್ತವಾಗಿಸಲು ಒತ್ತಡ ಹೇರಿರುವ ಒಂದು ದಿನದ ಬಳಿಕ ಸರ್ಕಾರದ ಈ ಹೇಳಿಕೆ ಹೊರಬಿದ್ದಿದೆ.
"ಈ ವಿಚಾರದ ಕುರಿತ ಪುನರ್‌ಪರಿಶೀಲನೆ ಇದು ಮೊದಲಲ್ಲ. ಈ ವಲಯದಲ್ಲಿ ಹೂಡಿಕೆ ಮಾಡಿದವರು ಮತ್ತು ಈ ವಲಯಕ್ಕೆ ಆಗಮಿಸಿರುವವರು ಸಂತಸದಿಂದಿದ್ದು, ಭವಿಷ್ಯದಲ್ಲಿ ಹೂಡಿಕೆಯನ್ನು ವಿಸ್ತರಿಸಲಿದ್ದಾರೆ" ಎಂದು ವಾಣಿಜ್ಯ ಮತ್ತು ಉದ್ಯಮ ಸಚಿವ ಆನಂದ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.
ವಾಲ್ ಮಾರ್ಟ್ ಮುಖ್ಯಸ್ಥ ಎಸ್. ರಾಬ್ಸನ್ ವಾಲ್ಟನ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ರಾಷ್ಟ್ರದ ರಿಟೇಲ್ ವಲಯದಲ್ಲಿ ವಿದೇಶಿ ಹೂಡಿಕೆ ದಾರರಿಗೆ ಇರುವ ನೀತಿಯನ್ನು ಸಡಿಲಿಸುವಂತೆ ಒತ್ತಾಯಿಸಿರುವ ವರದಿಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡುತ್ತಿದ್ದರು.
ಪ್ರಸಕ್ತ ಸರ್ಕಾರವು ಏಕ ಬ್ರಾಂಡ್ ರಖಂ ವ್ಯವಹಾರದಲ್ಲಿ ಶೇ.51ರಷ್ಟು ಹೂಡಿಕೆ ಮಾಡಲು ಅವಕಾಶ ನೀಡುತ್ತದೆ. ಇದೇ ವೇಳೆ ವಿದೇಶಿ ಹೂಡಿಕೆದಾರರಿಗೆ ಹಲವು ಬ್ರಾಂಡ್‌ಗಳಲ್ಲಿ ಹೂಡಿಕೆ ನೀಡಲು ಅವಕಾಶ ನೀಡಲಾಗುತ್ತಿಲ್ಲ.