ಚೀನಾ ಮತ್ತು ಪೂರ್ವ ಐರೋಪ್ಯ ರಾಷ್ಟ್ರಗಳು ಭಾರೀ ಪ್ರಮಾಣದಲ್ಲಿ ಉಕ್ಕನ್ನು ಭಾರತದೊಳಕ್ಕೆ ಡಂಪ್ ಮಾಡುತ್ತಿವೆಯೆಂದು ಪ್ರಮುಖ ಸ್ಥಳೀಯ ಉಕ್ಕು ಸಂಸ್ಥೆಗಳು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಉಕ್ಕು ಸಚಿವಾಲಯವು ಭಾರತದೊಳಕ್ಕೆ ಉಕ್ಕಿನ ಆಮದುಗಳನ್ನು ಕುರಿತು ನಿಗಾವಹಿಸಿದೆ.
ನಾವು ದೇಶಕ್ಕೆ ಆಮದಾಗುತ್ತಿರುವ ಉಕ್ಕಿನ ಬಗ್ಗೆ ಸೂಕ್ಷ್ಮವಾಗಿ ನಿಗಾವಹಿಸಿದ್ದು, ಉಕ್ಕನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಉಕ್ಕು ಸಚಿವ ವೀರಭದ್ರ ಸಿಂಗ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.ಉಕ್ಕಿನ ಬೇಡಿಕೆ ಶೇ.9ರಷ್ಟು ಹೆಚ್ಚಾಗಿದ್ದರೂ, ಬೆಲೆಗಳಲ್ಲಿ ಯಾವುದೇ ಸುಧಾರಣೆಯಾಗಿಲ್ಲವೆಂದು ಉಕ್ಕಿನ ಕಂಪೆನಿಗಳು ಗಮನಸೆಳೆದಿವೆ.
ಚೀನಾ ಮತ್ತು ಪೂರ್ವ ಐರೋಪ್ಯ ರಾಷ್ಟ್ರಗಳು ಉಕ್ಕನ್ನು ಭಾರತದೊಳಕ್ಕೆ ಸುರಿಯುತ್ತಿರುವುದರಿಂದ ಅದರ ದಾಸ್ತಾನು ಹೆಚ್ಚಿ ಉಕ್ಕಿನ ಬೆಲೆಗಳು ಕುಸಿದಿವೆಯೆಂದು ಇಸ್ಪಾಟ್ ಕೈಗಾರಿಕೆ ನಿರ್ವಾಹಕ ನಿರ್ದೇಶಕ ಅನಿಲ್ ಸುರೇಖ ತಿಳಿಸಿದ್ದಾರೆ. ಜಾಗತಿಕವಾಗಿ ಉಕ್ಕಿನ ದಾಸ್ತಾನು ಹೆಚ್ಚಿದ್ದು, ಭಾರತದಲ್ಲಿ ಉಕ್ಕಿನ ಬೆಲೆ ಹೆಚ್ಚಳವಾದಾಗಲೆಲ್ಲ ವಿದೇಶಿ ಉಕ್ಕನ್ನು ಸುರಿಯಲಾಗುತ್ತಿದೆಯೆಂದು ಟಾಟಾ ಸ್ಟೀಲ್ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ. ನೆರುರ್‌ಕರ್ ತಿಳಿಸಿದ್ದಾರೆ.