ಯಾವುದೇ ಮೊಬೈಲ್ ಸೇವಾ ಸಂಸ್ಥೆ ಬದಲಿಸಿದರೂ, ಮೊಬೈಲ್ ಸಂಖ್ಯೆ ಬದಲಿಸುವ ಅಗತ್ಯ ಇರದಂತಹ (ಎಂಎನ್‌ಪಿ) ಸೌಲಭ್ಯ ಪಡೆಯಲು 19 ರೂಪಾಯಿ ಶುಲ್ಕವನ್ನು ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್) ನಿಗದಿ ಮಾಡಿದೆ.
ಮೊಬೈಲ್ ಸೇವಾ ಸಂಸ್ಥೆಗಳು ಟ್ರಾಯ್ ನಿಗದಿಪಡಿಸಿದ ಶುಲ್ಕದಷ್ಟೇ ಅಥವಾ ಅದಕ್ಕಿಂತ ಕಡಿಮೆ ದರ ನಿಗದಿಪಡಿಸಬಹುದು. ಗ್ರಾಹಕರು ತಮ್ಮ ಮೊಬೈಲ್ ಸೇವಾ ಸಂಸ್ಥೆ ಅಥವಾ ತಂತ್ರಜ್ಞಾನ ಅಂದರೆ ಜಿಎಸ್‌ಎಂ ಅಥವಾ ಸಿಡಿಎಂಎ ಮಾದರಿಯನ್ನು ಬದಲಿಸಿದರೂ ತಮ್ಮ ಮೊಬೈಲ್ ಸಂಖ್ಯೆ ಬದಲಿಸದ ಸೌಲಭ್ಯವಾದ ನಂಬರ್ ಪೊರ್ಟೆಬಿಲಿಟಿ (ಎಂಎನ್‌ಪಿ) ಪಡೆಯಬಹುದಾಗಿದೆ.
ಎಂಎನ್‌ಪಿ ಸೌಲಭ್ಯ ಜಾರಿಗೊಳಿಸಲು ಕೇಂದ್ರ ಸರ್ಕಾರ ಡಿಸೆಂಬರ್ 31ರ ಗಡುವು ನಿಗದಿ ಮಾಡಿದ್ದು, ಮೊಬೈಲ್ ಸಂಖ್ಯೆ ಉಳಿಸಿಕೊಂಡು, ಸೇವಾ ಸಂಸ್ಥೆ ಬದಲಿಸಲು ಮುಂದಾಗುವ ಗ್ರಾಹಕರು, ಈ ಸಂಬಂಧ ಹೊಸ ಸಂಸ್ಥೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಗ್ರಾಹಕರು ತಾವು ಆಯ್ದುಕೊಂಡ ಹೊಸ ಮೊಬೈಲ್ ಸೇವಾ ಸಂಸ್ಥೆಗೆ ಸಂಸ್ಥೆ ಸೂಚಿಸುವ ಶುಲ್ಕ ಪಾವತಿಸಬೇಕಾಗುತ್ತದೆ.