ಮುಂಬಯಿ ಮಾರುಕಟ್ಟೆಯ ಶೇರು ಸೂಚ್ಯಂಕ ಮತ್ತು ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯು ಗಣನೀಯ ಕುಸಿತದಲ್ಲಿ ವಹಿವಾಟನ್ನು ಅಂತ್ಯಗೊಳಿಸಿದ್ದು, ಎರಡೂ ಶೇರುಪೇಟೆಗಳು ಕ್ರಮವಾಗಿ 13,000 ಹಾಗೂ 3900 ಗಡಿಗಿಂತ ಕೆಳಮಟ್ಟದಲ್ಲಿ ವಹಿವಾಟನ್ನು ಪೂರ್ಣಗೊಳಿಸಿದೆ.
ಸ್ಥಿರಾಸ್ಥಿ, ಮೆಟಲ್ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಶೇರಿನ ಮೌಲ್ಯಗಳ ಕುಸಿತದಿಂದಾಗಿ ಶೇರುಪೇಟೆಯು ಏಪ್ರಿಲ್ 5,2008ರ ನಂತರ ಮೊದಲ ಬಾರಿಗೆ ಸುಮಾರು 500 ಅಂಕಗಳಷ್ಟು ಕುಸಿತ ದಾಖಲಿಸುವ ಮೂಲಕ 12,961 ಅಂಕಗಳಿಗೆ ತಲುಪಿದೆ.
ಅದೇ ರೀತಿ ನಿಫ್ಟಿಯು ಕೂಡಾ 3900 ಗಡಿಯಿಂದ ಕೆಳಮಟ್ಟಕ್ಕಿಳಿದಿದ್ದು, ಶೇ.3.6ರಷ್ಟು ಇಳಿಕೆಗೊಳ್ಳುವ ಮೂಲಕ 12,961 ಅಂಕಗಳಿಗೆ ತಲುಪಿದೆ.
ಸ್ಥಿರಾಸ್ಥಿ, ಬ್ಯಾಂಕಿಂಗ್, ಮೆಟಲ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿನ ಶೇರುಗಳ ಮೌಲ್ಯವು ಇಳಿಕೆಗೊಂಡ ಹಿನ್ನೆಲೆಯಲ್ಲಿ ಮಾರಾಟ ಭರಾಟೆಯು ಶೇರುಪೇಟೆಯಲ್ಲಿ ವರ್ಧನೆಗೊಂಡಿತ್ತು. ಇದು ಶೇರುಪೇಟೆಯ ಗಣನೀಯ ಕುಸಿತಕ್ಕೆ ಪುಷ್ಠಿ ನೀಡಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಶೇರುಗಳು ಶೇ.11ರಷ್ಟು ಕುಸಿಯುವ ಶೇರುಪೇಟೆಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕುಸಿತಗೊಂಡ ಶೇರಾಗಿದೆ. ಉಳಿದಂತೆ, ರಿಲಾಯನ್ಸ್ ಕಮ್ಯುನಿಕೇಶನ್ಸ್, ಎಂಆಂಡ್ಎಂ ಮತ್ತು ಮಾರುತಿ ಸುಜುಕಿ ಶೇರುಪೇಟೆಯಲ್ಲಿ ಕುಸಿತ ಕಂಡ ಪ್ರಮುಖ ಶೇರುಗಳಾಗಿವೆ.
|