ರಿಲಾಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಟೆಕ್ನಾಲಜಿ ಮುಂತಾದ ಪ್ರಬಲ ಶೇರುಗಳ ಖರೀದಿ ಭರಾಟೆಯಿಂದಾಗಿ ಮುಂಬಯಿ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು ಶುಕ್ರವಾರ ಪ್ರಾರಂಭದ ವಹಿವಾಟಿನಲ್ಲಿ 104 ಅಂಕಗಳ ಚೇತರಿಕೆ ಕಂಡಿದೆ.
ಕಳೆದ ವಹಿವಾಟಿನಲ್ಲಿ 570 ಅಂಕಗಳಷ್ಟು ಕುಸಿತ ಕಂಡಿದ್ದ ಶೇರುಪೇಟೆಯು, ಶುಕ್ರವಾರ ಮುಂಜಾನೆ ವಹಿವಾಟು ಪ್ರಾರಂಭಗೊಂಡ ಐದು ನಿಮಿಷಗಳಲ್ಲೇ 104.31 ಅಂಕಗಳಷ್ಟು ಏರಿಕಗೊಳ್ಳುವ ಮೂಲಕ 13,198.42 ಅಂಕಗಳಿಗೆ ತಲುಪಿದೆ.
ಅದೇ ರೀತಿ, ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು ಕೂಡಾ 21.35ರಷ್ಟು ಏರಿಕೆಗೊಂಡಿದ್ದು, 3,947.10 ಅಂಕಗಳಿಗೆ ತಲುಪಿದೆ.
ಇಂದು ಹೊರಬೀಳಲಿರುವ ಹಣದುಬ್ಬರ ಅಂಕಿಅಂಶದ ಮುಂದಾಗಿ ಮಾರುಕಟ್ಟೆಯ ಪ್ರವೃತ್ತಿಯು ಚಂಚಲವಾಗಿದೆ ಎಂದು ಶೇರು ದಲ್ಲಾಳಿಗಳು ತಿಳಿಸಿದ್ದಾರೆ.
ಅಲ್ಲದೆ, ಅಮೆರಿಕ ಮಾರುಕಟ್ಟೆಯ ತ್ವರಿತ ಏರಿಕೆಯು ಮತ್ತು ಏಶಿಯನ್ ಮಾರುಕಟ್ಟೆಗಳ ಮಿಶ್ರ ಪ್ರವೃತ್ತಿಗಳು ಕೂಡಾ ಶೇರುಪೇಟೆ ವರ್ಧನೆಗೆ ಪುಷ್ಠಿ ನೀಡಿದೆ ಎಂದು ಹೇಳಿದ್ದಾರೆ.
ರಿಲಾಯನ್ಸ್ ಇಂಡಸ್ಟ್ರೀಸ್, ರಿಲಾಯನ್ಸ್ ಕಮ್ಯುನಿಕೇಶನ್ಸ್, ರಿಲಾಯನ್ಸ್ ಇನ್ಫ್ರಾ, ಇನ್ಫೋಸಿಸ್ ಟೆಕ್ನಾಲಜಿ, ಬಿಎಚ್ಇಎಲ್ ಮತ್ತು ಲಾರ್ಸನ್ ಆಂಡ್ ಟರ್ಬೋ ಇಂದಿನ ವಹಿವಾಟಿನಲ್ಲಿ ಏರಿಕೆ ಕಂಡ ಶೇರುಗಳಾಗಿವೆ.
|