ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ನೂತನ ಮಂತ್ರಿಮಂಡಲದ ಹಳೆಬೇರು, ಹೊಸಚಿಗುರು
ಮತಸಮರ
ಐವತ್ತೊಂಬತ್ತು ಹೊಸ ಸಚಿವರ ಸೇರ್ಪಡೆಯಿಂದ ಸಂಪೂರ್ಣ ಸಜ್ಜಾಗಿರುವ ಮನಮೋಹನ್ ಸಿಂಗ್ ಪಡೆಯು ಅನುಭವಿ ಹಾಗೂ ಯುವ ನಾಯಕರ ಸಂಗಮವಾಗಿದೆ. ಈ ಸಂಪುಟದಲ್ಲಿ ಅತ್ಯಂತ ಹಿರಿಯ ಹಾಗೂ ಅತ್ಯಂತ ಕಿರಿಯ ಸಚಿವರ ನಡುವಿನ ವ್ಯತ್ಯಾಸ 50 ವರ್ಷಗಳು!

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಹಾಲಿ ವಿದೇಶಾಂಗ ಸಚಿವ ಎಸ್ಸೆಂ ಕೃಷ್ಣ ಅವರು ಯುಪಿಎ ಸರ್ಕಾರದ ಅತ್ಯಂತ ಹಿರಿಯ ಸಚಿವರು. ಅವರ ವಯಸ್ಸು 77 ವರ್ಷ. ಹೊಸ ಸರ್ಕಾರದ ಅತಿ ಕಿರಿಯ ಸಚಿವೆ ಅಗಾತ ಸಂಗ್ಮಾ. ಎನ್‌ಸಿಪಿ ಪಕ್ಷದ ನಾಯಕಿಯಾಗಿರುವ ಈಕೆ ಮಾಜಿ ಲೋಕಸಭಾ ಸ್ಪೀಕರ್ ಪಿ.ಎ. ಸಂಗ್ಮಾ ಅವರ ಪುತ್ರಿ. ಇವರ ವಯಸ್ಸು 27 ವರ್ಷ.

ಪ್ರಧಾನಿ ಸೇರಿದಂತೆ 79 ಸದಸ್ಯತ್ವದ ಮಂತ್ರಿ ಮಂಡಲದಲ್ಲಿ 33 ಸಂಪುಟ ದರ್ಜೆ, 7 ಸ್ವತಂತ್ರ ನಿರ್ವಹಣೆಯ ರಾಜ್ಯಖಾತೆ ಹಾಗೂ 38 ಮಂದಿ ರಾಜ್ಯಖಾತೆಯನ್ನು ಹೊಂದಿದ್ದಾರೆ.

ಹಲವು ಸುತ್ತುಗಳ ಮಾತುಕತೆಯ ನಂತರ ಅನುಭವಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಜೊಳ್ಳುಗಳಿಗಿಂತ ಹೆಚ್ಚು ಕಾಳುಗಳಿರಬೇಕೆಂಬ ಹಿನ್ನೆಲೆಯಲ್ಲಿ ಅಳೆದೂ ಸುರಿದೂ ತಯಾರಿಸಿದ ಮಂತ್ರಿಮಂಡಲವು ಹಳೆಬೇರು ಹಾಗೂ ಹೊಸಚಿಗುರುಗಳನ್ನು ಹೊಂದಿದೆ.

ಕಾನೂನು ಪದವೀಧರೆಯಾಗಿರುವ ಅಗಾತಾ, ವೃತ್ತಿಯಿಂದ ವಕೀಲೆ. ಇವರು ಮೇಘಾಲಯದ ತುರಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಅವರು, ಪ್ರಮಾಣವಚನ ಸ್ವೀಕಾರಕ್ಕೆ ಮುನ್ನ ಪ್ರಥಮ ಸಾಲಿನಲ್ಲಿ ಕುಳಿತಿದ್ದ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರಿಗೆ ಕೈಮುಗಿದು ವಂದನೆ ಸಲ್ಲಿಸಿದರು.

ಅತ್ಯಂತ ಕಿರಿಯ ಸಚಿವೆಯಾಗಿರುವ ಇವರು ಪ್ರಮಾಣ ವಚನ ಸ್ವೀಕರಿಸುತ್ತಿರುವಂತೆ ಮೆಚ್ಚುಗೆಯ ಸೂಚನೆಯಾಗಿ ಸಭಾಂಗಣದ ತುಂಬ ಚಪ್ಪಾಳೆ ಮೊಳಗಿತು. ಸೋನಿಯಾಗಾಂಧಿ ಅವರು ಪ್ರತಿಜ್ಞಾವಿಧಿಯುದ್ದಕ್ಕೂ ಮಂದಹಾಸದ ಮುಖದೊಂದಿಗೆ ಚಪ್ಪಾಳೆ ತಟ್ಟುತ್ತಲೇ ಇದ್ದರು. ಪ್ರತಿಜ್ಞಾವಿಧಿ ಸ್ವೀಕರಿಸುವ ವೇಳೆ ಒಂದಕ್ಕಿಂತ ಹೆಚ್ಚುಬಾರಿ ಅಗಾತ ತಡವರಿಸಿದರು.

ಸಹಿಹಾಕಿ ತನ್ನ ಸ್ಥಾನಕ್ಕೆ ತೆರಳುವ ಮುನ್ನ ಹೆಚ್ಚಿನ ಸಚಿವರು ಈಕೆಗೆ ನಮಸ್ತೆ ಹೇಳುವ ಹಾಗೂ ಕೈ ಕುಲುಕುವ ಮೂಲಕ ಅಭಿನಂದನೆ ಸಲ್ಲಿಸಿದರು. ಒಟ್ಟಿನಲ್ಲಿ ಅತ್ಯಂತ ಕಿರಿಯ ಸಚಿವೆ ಎಂಬ ಖ್ಯಾತಿಗೆ ಭಾಜನವಾದ ಅಗಾತ ಸಭಾಂಗಣದಲ್ಲೊಂದು ಮಿಂಚು ಹರಿಸಿದರು.