ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಓದುಗರ ಅಭಿಮತ » ನಿಮಗೂ ಹೀಗಾಗಿದೆಯೇ?: ನಿಮ್ಮ ಗ್ಯಾಸ್ ಸಂಪರ್ಕ ಅನಧಿಕೃತ! (Illegal LPG connection | Karnataka | Shobha Karandlaje)
PTI
10 ದಿನಗಳೊಳಗೆ ಅಕ್ರಮ ಗ್ಯಾಸ್ ಸಕ್ರಮ ಮಾಡಿಕೊಳ್ಳದಿದ್ದರೆ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ ಎಂದು ಕರ್ನಾಟಕದ ಜನತೆಗೆ ಇಂಧನ ಸಚಿವೆ ಶೋಭಾ ಕರಂದ್ಲಾಜೆಯವರು ಮಾಧ್ಯಮಗಳಲ್ಲಿ ನೀಡಿದ ಎಚ್ಚರಿಕೆಗೆ ಈ ಬಹಿರಂಗ ಉತ್ತರ.

ಗ್ಯಾಸ್ ಕನೆಕ್ಷನ್ ಉಳ್ಳ ಪ್ರತಿಯೊಬ್ಬರೂ ತಮ್ಮ ಕನೆಕ್ಷನ್ ಅಧಿಕೃತವೆಂದು ಸಾಬೀತು ಪಡಿಸತಕ್ಕ ಎಲ್ಲಾ ದಾಖಲೆ ಪತ್ರಗಳನ್ನು ಸಮೀಪದ ಗ್ಯಾಸ್ ಡೀಲರ್‌ಗಳಿಗೆ ಕೂಡಲೇ ತಲುಪಿಸತಕ್ಕದ್ದು ಎಂಬ ಪ್ರಕಟಣೆ ಮಾಧ್ಯಮಗಳಲ್ಲಿ ಪ್ರಕಟವಾದ ಮರುದಿನವೇ ಪ್ರಕಟಣೆಯಲ್ಲಿ ಪ್ರಸ್ತಾಪಿಸಿದ ಎಲ್ಲಾ ದಾಖಲೆಪತ್ರಗಳನ್ನು ನಮಗೆ ಗ್ಯಾಸ್ ವಿತರಿಸುತ್ತಿರುವ ಏಜೆಂಟ್ ಕಚೇರಿಯಲ್ಲಿ ಕೊಟ್ಟು ಇನ್ನು ಯಾವ ತೊಂದರೆಯೂ ಇರಲಿಕ್ಕಿಲ್ಲ ಎಂಬ ನಿರಾಳ ಮನಸ್ಸಿನಲ್ಲಿದ್ದಾಗಲೇ, ಪತ್ರಿಕೆಯಲ್ಲಿ "ನಿಮ್ಮ ಗ್ಯಾಸ್ ಅಕ್ರಮವೇ, ವಾಪಾಸ್ ಕೊಡಿ" ಎಂಬ ಸುದ್ದಿ ಓದಿ ಗಾಬರಿಯಿಂದ ಅದರಲ್ಲಿ ಸೂಚಿಸಿದ್ದ ವೆಬ್‌ಸೈಟನ್ನು ಸಂಪರ್ಕಿಸಿ ನೋಡುವಾಗ ಹೆಸರಿನೊಂದಿಗೆ "Your LPG connection is suspended and ration card is suspended” ಎಂದು ಹೊಳೆಯುತ್ತಿರುವುದನ್ನು ಕಂಡು ನಮ್ಮ ಸ್ವಂತ ಕೈಯೇ ನಮ್ಮ ಮುಖಕ್ಕೆ ರಾಚುವಂತೆ ಹೊಡೆದ ಅನುಭವ. ಬೇಕಾಗುವ ಎಲ್ಲಾ ದಾಖಲೆ ಪತ್ರಗಳನ್ನು ನೀಡಿ ಕನೆಕ್ಷನ್ ಪಡೆದಿದ್ದು ಅದೆಷ್ಟೊ ವರ್ಷಗಳಿಂದ ಉಪಯೋಗಿಸಿಕೊಂಡು ಬರುತ್ತಿರುವ ಎಂತವರಿಗೂ ಈ ಅನಪೇಕ್ಷಿತ ಪ್ರಕಟಣೆ ಕಂಡು ಆಶ್ಚರ್ಯದೊಂದಿಗೆ ಸಖತ್ ಆಘಾತ ನೀಡಿದ ಅನುಭವವಾಗಿರುವುದು ಸಹಜ.

ಅದೇ ತಕ್ಷಣ ಪುನಃ ಎಲ್ಲಾ ದಾಖಲೆ ಪತ್ರಗಳೊಂದಿಗೆ ಅದೇ ಏಜೆನ್ಸಿಗೆ ತಲುಪಿ ವಿಷಯ ವಿವರಿಸಿದಾಗ "ನಮ್ಮ ಸಿಸ್ಟಮ್‌ನಲ್ಲಿ ನಿಮ್ಮ ಪ್ರತಿಯೊಂದು ದಾಖಲೆಗಳೂ ಇವೆ. ಜನತೆ ಪೂರೈಸಿರುವ ದಾಖಲೆ ಪತ್ರಗಳೆಲ್ಲವನ್ನೂ ನಮ್ಮ ಸಿಸ್ಟಮ್‌ನಲ್ಲಿ ಎಂಟ್ರಿ ಮಾಡುವರೇ ಸಾಕಷ್ಟು ಸಮಯಾವಕಾಶ ಸರಕಾರ ನೀಡದಿದ್ದ ಕಾರಣ ನಮಗೆ ತಲುಪಿರುವ ಪ್ರತಿಯೊಂದು ದಾಖಲೆ ಪತ್ರಗಳನ್ನು ಸಂಬಂಧಪಟ್ಟ ಸರಕಾರೀ ಕಚೇರಿಗೆ ನಾವು ಕಳುಹಿಸಿದ್ದೇವೆ ಎಂಬ ಉತ್ತರ ಸಿಕ್ಕಿತು.

ಸೂಚಿಸಿರುವ ಸಮಯದಲ್ಲಿ ನಮ್ಮೆಲ್ಲ ದಾಖಲೆಗಳನ್ನೂ ಸಂಬಂಧಪಟ್ಟ ಕಚೇರಿಗೆ ಪೂರೈಸಿದ್ದರೂ ಅಕ್ರಮ ಗ್ಯಾಸ್ ಸಕ್ರಮ ಮಾಡಿಕೊಳ್ಳದಿದ್ದಲ್ಲಿ ಸಮೀಪದ ಕೋರ್ಟಿನಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಇಂಧನ ಸಚಿವೆಯರಲ್ಲಿ ಕೆಲವು ಪ್ರಶ್ನೆಗಳು...

1 ) ಕ್ಲಪ್ತ ಸಮಯದಲ್ಲಿ ತಾವು ಸೂಚಿಸಿದ್ದ ಕಚೇರಿಗೆ ಜನತೆ ಪೂರೈಸಿದ ಅಧಿಕೃತ ದಾಖಲೆ ಪತ್ರಗಳು ತಮ್ಮ ಇಲಾಖೆಯ ಸಿಸ್ಟಮ್‌ನಲ್ಲಿ ಯಾಕೆ ಸಮರ್ಪಕವಾಗಿ ಎಂಟ್ರಿಯಾಗಿಲ್ಲ? ಅವುಗಳು ಹೋದದ್ದಾದರೂ ಎಲ್ಲಿಗೆ?
2 ) ಜನತೆ ಗ್ಯಾಸ್ ಕನೆಕ್ಷನ್‌ಗೆ ಅವಶ್ಯಕವಿರುವ ದಾಖಲೆ ಪತ್ರಗಳನ್ನು ತಂದು ಒಪ್ಪಿಸಿದಾಗ ಸ್ವೀಕೃತಿ ಸೂಚಿತ ರಸೀದಿಯನ್ನು ಕೊಡುವ ಅತ್ಯಗತ್ಯ ವ್ಯವಸ್ಥೆಯನ್ನು ಇಲಾಖೆ ಯಾಕೆ ಮಾಡಿರಲಿಲ್ಲ?
3 ) ನಮ್ಮ ಅಧಿಕೃತ ಗ್ಯಾಸ್ ಕನೆಕ್ಷನ್ ಇಂದು ನಿಮ್ಮ ವೆಬ್‌ಸೈಟಿನಲ್ಲಿ ಅನಧಿಕೃತವೆಂದು ಸೂಚಿಸುತ್ತಿರುವಂತೆ ಅನಧಿಕೃತವಾಗಿ ಗ್ಯಾಸ್ ಉಪಯೋಗಿಸುತ್ತಿರುವ ಅದೆಷ್ಟು ಮಂದಿಯ ಗ್ಯಾಸ್ ಕನೆಕ್ಷನ್ ಇಂದು ಅಧಿಕೃತವಾಗಿ ಪರಿವರ್ತಿತವಾಗಿರುವ ಸಾಧ್ಯತೆ ಇಲ್ಲದಿಲ್ಲ?
4 ) ಇಂಟರ್ನೆಟ್ಟಿನಲ್ಲಿ ಗ್ರಾಹಕರೇ ಮಾಹಿತಿ ತುಂಬಬಹುದು ಅಥವಾ ತಾಲೂಕು ಕಚೇರಿಗೆ ಹೋಗಿ ದಾಖಲೆ ಪತ್ರಗಳನ್ನು ಕೊಡಬಹುದು ಎಂಬುದಾಗಿ ಇಲಾಖೆಯ ಪ್ರಕಟಣೆ ಸೂಚಿಸುತ್ತಿದೆ. ನಮ್ಮ ರಾಜ್ಯದಲ್ಲಿ ಇಂದು ಅದೆಷ್ಟು ಮನೆಗಳಲ್ಲಿ ಇಂಟರ್ನೆಟ್ ಸೌಲಭ್ಯಗಳಿವೆಂದು ಊಹಿಸಲಾರದಂತಹ ಜ್ಞಾನಹೀನ ಸಚಿವೆ ತಾವು ಖಂಡಿತಾ ಅಲ್ಲ. ಅದು ಮಾತ್ರವಲ್ಲದೆ ಈಗ ಮಳೆಗಾಲ, ಗ್ರಾಮೀಣ ಪ್ರದೇಶದಲ್ಲಿ ಇಂದು ನಾಟಿ ಇತ್ಯಾದಿ ಕೃಷಿಕಾರ್ಯದ ಕೆಲಸಗಳು ರಭಸದಿಂದ ಸಾಗುತ್ತಿದೆ. ಇಂಟರ್ನೆಟ್ ಸೌಲಭ್ಯ ಇಲ್ಲದವರು ತಮ್ಮೆಲ್ಲ ಕಾರ್ಯಗಳನ್ನು ಪಕ್ಕಕ್ಕಿರಿಸಿ ಸೂಚಿಸಿರುವ ಸರಕಾರಿ ಕಚೇರಿ ತಲುಪಿದರೂ ಯಾವ ಸರಕಾರಿ ಕಚೇರಿಯಲ್ಲಿ ಒಂದೇ ದಿನದಲ್ಲಿ ಜನತೆ ಅಪೇಕ್ಷಿಸುವ ಕೆಲಸ ಕಾರ್ಯಗತವಾಗುತ್ತಿವೆ ಅದೂ ತಿಳಿದಿಲ್ಲವೇ?
5 ) ಸಚಿವೆಯ ಹೇಳಿಕೆಯಂತೆ ರಾಜ್ಯದಲ್ಲಿ ಶೇಕಡಾ 40ರಷ್ಟು ಅನಧಿಕೃತ ಗ್ಯಾಸ್ ಕನೆಕ್ಷನ್‌ಗಳಿವೆ. ಹಾಗಾದರೆ ಇಷ್ಟೊಂದು ಕನೆಕ್ಷನ್‌ಗಳನ್ನು ಅನಧಿಕೃತವಾಗಿ ನೀಡುತ್ತಿರುವಾಗ ಸಂಬಂಧಪಟ್ಟ ಇಲಾಖೆ ಏನು ಮಾಡುತ್ತಿತ್ತು? ರಾಜ್ಯ ಸೂರೆಯಾದ ಬಳಿಕ ಕೋಟೆ ಬಾಗಿಲು ಹಾಕಿದಂತೆ ಈಗ ಇಲಾಖೆ ಎಚ್ಚೆತ್ತು ಬೊಬ್ಬಿರಿದರೆ ಅದರ ಪ್ರಯೋಜನವಾದರೂ ಏನು?
6) ಯಾವ ತಪ್ಪನ್ನೂ ಮಾಡದ, ಇಲಾಖೆ ಬಯಸಿದ್ದ ಪ್ರತಿಯೊಂದು ದಾಖಲೆ ಪತ್ರಗಳನ್ನು ಪೂರೈಸಿ ಅಧಿಕೃತವಾಗಿ ಗ್ಯಾಸ್ ಪಡೆದು ಉಪಯೋಗಿಸುತ್ತಿರುವ ಜನತೆಗೆ ‘ನೀವು ಉಪಯೋಗಿಸುತ್ತಿರುವ ಗ್ಯಾಸ್ ಅನಧಿಕೃತ, ನಿಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ’ ಎಂದು ಏಕ ಮುಖವಾಗಿ ಆಜ್ಞೆ ಹೊರಡಿಸುವಾಗ, ನಿರಪರಾಧಿಯಾದ ಜನತೆ ತಮಗಾದ ಈ ಅವಮಾನಕ್ಕಾಗಿ ಯಾರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬೇಕು? ಲಕ್ಷಾಂತರ ಅನಧಿಕೃತ ಕನೆಕ್ಷನ್ ನೀಡುತ್ತಿದ್ದಾಗ ಕಣ್ಮುಚ್ಚಿ ಕುಳಿತಿದ್ದ ಆಹಾರ ಇಲಾಖೆಯ ಮೇಲೋ... ಕನೆಕ್ಷನ್ ನೀಡುತ್ತಿದ್ದ ಗ್ಯಾಸ್ ಏಜೆನ್ಸಿಗಳ ಮೇಲೋ ಅಥವಾ ನೇರವಾಗಿ ಇಂಧನ ಸಚಿವೆಯ ಮೇಲೋ?

ನೆರೆದೇಶಗಳಿಂದ ನಮ್ಮ ದೇಶದೊಳಗೆ ಸುಳಿವಿಲ್ಲದೇ ನುಸುಳಿ ಪರ್ಮನೆಂಟ್ ಬಿಡಾರ ಮಾಡಿಕೊಂಡು ಸಂಪೂರ್ಣ ಕುಟುಂಬ, ಸಂಸಾರದೊಂದಿಗೆ ನೆಲೆಸಿರುವ ಅಕ್ರಮ ವಲಸೆಗಾರರಲ್ಲಿ ಇಂದು ರೇಶನ್ ಕಾರ್ಡ್, ಪಾನ್ ಕಾರ್ಡ್, ಪಾಸ್‌ಪೋರ್ಟ್, ಗ್ಯಾಸ್ ಕನೆಕ್ಷನ್, ಲ್ಯಾಂಡ್‌ಲೈನ್/ಮೊಬೈಲ್ ಫೋನ್‌ಗಳ ಕನೆಕ್ಷನ್ ಪ್ರತಿಯೊಂದು ಅನುಕೂಲತೆಗಳೂ ಇದ್ದು ಅವರುಗಳು ಬಿಂದಾಸ್ ಜೀವನ ನಡೆಸುತ್ತಿರುವಾಗ ತಾತ, ಮುತ್ತಾತನ ಕಾಲದಿಂದಲೂ ಪರಂಪಾರಗತವಾಗಿ ಇದೇ ಸ್ಥಳದಲ್ಲಿ ನೆಲೆಸಿದ್ದು ಹಕ್ಕಿನಿಂದ ಪಡೆದಿರುವ ನಮ್ಮ ರೇಶನ್ ಕಾರ್ಡ್, ಗ್ಯಾಸ್ ಕನೆಕ್ಷನ್‌ಗಳು ಅನಧಿಕೃತ... ಸಸ್ಪೆಂಡ್ ಮಾಡಲಾಗಿದೆ ಎಂದು ಘೋಷಿಸುವಾಗ ಈ ದೇಶವಾಸಿಗಳಾದ ನಮಗೆ ಈ ದೇಶದಲ್ಲಿರುವ ಅಸ್ತಿತ್ವವಾದರೂ ಏನು ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾದ ಪರಿಸ್ಥಿತಿಯುಂಟಾಗಿದ್ದು ವಿಪರ್ಯಾಸವೆನಿಸುತ್ತಿದೆ.

ಪಡಿತರ ಚೀಟಿಯ ಗೊಂದಲಕ್ಕೆ ಈತನಕವೂ ನಮ್ಮಲ್ಲಿ ಮುಕ್ತಿ ಸಿಕ್ಕಿಲ್ಲ. ಅದಾಗಲೇ ಅಡುಗೆ ಅನಿಲದ ಅಧಿಕೃತ, ಅನಧಿಕೃತಗಳ ಗೊಂದಲ ಪರ್ವ ಆರಂಭವಾಗಿದೆ. ಒಟ್ಟಾರೆ ನೆಮ್ಮದಿಯ ಜೀವನವೆಂಬ ಮಾತು ನಾಡಿನ ಜನತೆಗೆ ಮರೀಚಿಕೆಯಾಗಿಯೇ ಉಳಿದಿದೆ. ಇವುಗಳಿಗೆ ಮುಖ್ಯವಾಗಿ ಯಾವುದೇ ಪೂರ್ವಾಪರ ಯೋಚನೆ, ಯೋಜನೆಗಳಿಲ್ಲದೇ ಹೊರಡಿಸುವ ಕಾನೂನುಗಳು ಹಾಗೂ ಅದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೇ ಕಾರಣವೆನ್ನದೇ ಅನ್ಯವಿಧಿಯಿಲ್ಲ.

- ವಿಜಯ್ ಬಾರಕೂರು, ಖತಾರ

ಇವನ್ನೂ ಓದಿ