ಸುಂದರ ಕೊಡಗನ್ನು ಕಸದ ತೊಟ್ಟಿ ಮಾಡ್ಬೇಡಿ ಪ್ಲೀಸ್...

ಮಡಿಕೇರಿ, ಮಂಗಳವಾರ, 22 ನವೆಂಬರ್ 2011 (15:23 IST)

Widgets Magazine

Lava kumar
PR
ಕೊಡಗು ಪ್ರವಾಸಿಗರಿಗೆ ಸ್ವರ್ಗವಾಗುತ್ತಿದೆ. ವೀಕೆಂಡ್ ಹಾಗೂ ಸರ್ಕಾರಿ ರಜಾ ದಿನಗಳನ್ನು ಸವಿಯಲು ಇಲ್ಲಿಗೆ ಸಾವಿರಾರು ಮಂದಿ ಬರುತ್ತಾರೆ. ಸಾಮಾನ್ಯವಾಗಿ ಮಂಗಳೂರು ಹಾಗೂ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿಗೆ ಆಗಮಿಸದೆ ತೆರಳುವುದಿಲ್ಲ ಹೀಗಾಗಿ ದೇಶ ವಿದೇಶಗಳ ಪ್ರವಾಸಿಗರು ಕೊಡಗಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ.

ಸುಂದರ ವಾತಾವರಣ, ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ ಪ್ರವಾಸಿಗರನ್ನು ಕೊಡಗಿನತ್ತ ಸೆಳೆಯುತ್ತದೆ. ಕೆಲವು ಮಂದಿ ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬಂದರೆ ಮತ್ತೆ ಕೆಲವರು ಚಾರಣಕ್ಕಾಗಿಯೇ ಬರುತ್ತಾರೆ. ಈಗ ಎಲ್ಲೆಡೆಯೂ ಹೋಂ ಸ್ಟೇ ಇರುವುದರಿಂದ ಪ್ರವಾಸಿಗರ ವಾಸ್ತವ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆದ್ದರಿಂದ ದೂರದಿಂದ ಬರುವ ಪ್ರವಾಸಿಗರು ಹಲವು ದಿನಗಳ ಕಾಲ ಹೋಂಸ್ಟೇಗಳಲ್ಲಿ ತಂಗುವುದರೊಂದಿಗೆ ಕಾಡುಮೇಡು ಅಲೆದು ಖುಷಿಯಾಗಿ ತಮ್ಮೂರಿಗೆ ತೆರಳುತ್ತಾರೆ.

ಕೊಡಗಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕೆಲವರಿಂದ ಸಮಸ್ಯೆಗಳು ಕೂಡ ಹೆಚ್ಚಾಗುತ್ತಿವೆ ಎಂಬ ಆರೋಪ ಕೇಳಿ ಬರುತ್ತಿವೆ.

ಈಗಾಗಲೇ ಜಿಲ್ಲೆಯಲ್ಲಿರುವ ಕೆಲವು ಪಂಚಾಯಿತಿಗಳು ಕಸ ವಿಲೇವಾರಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕೂಡ ಗುಟ್ಟಾಗಿ ಉಳಿದಿಲ್ಲ. ಹಲವು ಗ್ರಾಮ ಪಂಚಾಯಿತಿಗಳು ಪಟ್ಟಣದಲ್ಲಿ ಶೇಖರವಾಗುವ ಕಸಗಳನ್ನು ಎಲ್ಲಿ ಎಸೆಯೋದು ಎಂಬುದರ ಬಗ್ಗೆ ಗೊಂದಲದಲ್ಲಿವೆ. ಕೆಲವು ಪಂಚಾಯಿತಿಗಳಿಗೆ ಕಸವಿಲೇವಾರಿಗೆ ಸೂಕ್ತ ಸ್ಥಳಗಳು ಲಭ್ಯವಿಲ್ಲದೆ ಪರದಾಡುತ್ತಾ ರಸ್ತೆ ಬದಿಯಲ್ಲಿಯೇ ಸುರಿದು ಕೈತೊಳೆದುಕೊಳ್ಳುತ್ತಿವೆ.

ಹೀಗಿರುವಾಗ ಬಸ್ಸು, ಕಾರು, ವ್ಯಾನ್ ಮುಂತಾದ ವಾಹನಗಳಲ್ಲಿ ಆಗಮಿಸುವ ಪ್ರವಾಸಿಗರು ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅಲ್ಲೊಂದಷ್ಟು ಹೊತ್ತು ಕಳೆದು ತಾವು ತಂದ ತಿನಿಸುಗಳನ್ನೆಲ್ಲಾ ತಿಂದು ಹೋಗುವಾಗ ಪ್ಲಾಸ್ಟಿಕ್ ಕವರ್, ಬಾಟಲಿಗಳು ಸೇರಿದಂತೆ ಕಸಗಳನ್ನು ಅಲ್ಲಿಯೇ ಎಸೆದು ಹೋಗುತ್ತಾರೆ. ಇನ್ನು ಕೆಲವರು ರಸ್ತೆ ಬದಿಯಲ್ಲಿ ಅಡುಗೆ ತಯಾರಿಸಿ ಊಟ ಮಾಡಿ ವ್ಯರ್ಥ ಪದಾರ್ಥಗಳನ್ನೆಲ್ಲಾ ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಹೀಗೆ ಎಸೆದು ಹೋದ ಪ್ಲಾಸ್ಟಿಕ್ ಕವರ್‌ಗಳು, ಬಾಟಲಿಗಳು ಎಲ್ಲೆಂದರಲ್ಲಿ ಹರಡಿ ಅಸಹ್ಯ ಹುಟ್ಟಿಸುತ್ತಿವೆ.

ಕೆಲವು ವರ್ಷಗಳ ಹಿಂದೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯು ಕಸವನ್ನೆಲ್ಲಾ ಮುಖ್ಯರಸ್ತೆಯಲ್ಲಿಯೇ ಸುರಿಯುತ್ತಿದ್ದರು. ಆ ಸಂದರ್ಭ ಮುಖ್ಯ ರಸ್ತೆಯಲ್ಲಿ ತೆರಳುವವರೆಲ್ಲಾ ಮೂಗು ಮುಚ್ಚಿಕೊಂಡು ಹೋಗಬೇಕಾಗಿತ್ತು. ಬೆಟ್ಟದೆತ್ತರಕ್ಕೆ ಬೆಳೆದು ಅಸಹ್ಯ ಮೂಡಿಸುತ್ತಿದ್ದ ಈ ಕಸದ ರಾಶಿಯನ್ನು ನೋಡಿದ ವಿದೇಶಿ ಪ್ರವಾಸಿಗರು ಇದರ ಫೋಟೋಗಳನ್ನು ತೆಗೆಯುತ್ತಿದ್ದರು. ಇನ್ನು ಕೇರಳದಿಂದ ಲಾರಿಗಳಲ್ಲಿ ಕಸವನ್ನು ತಂದು ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಸುರಿಯುವ ಪ್ರಯತ್ನವೂ ಈ ಹಿಂದೆ ನಡೆದಿತ್ತು.

ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದ್ದರೂ ದೂರದಿಂದ ಬರುವ ಪ್ರವಾಸಿಗರು ತಮ್ಮೊಂದಿಗೆ ತರುವ ಪ್ಲಾಸ್ಟಿಕ್ ಕವರ್‌ಗಳು, ಬಾಟಲಿಗಳನ್ನು ಕಸದ ತೊಟ್ಟಿಗಳಲ್ಲಿ ಹಾಕದೆ ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವುದು ತಲೆನೋವಾಗಿ ಪರಿಣಮಿಸಿದೆ. ಒಂದು ಕಾಲದಲ್ಲಿ ಪ್ರವಾಸಿಗರು ಭೇಟಿ ನೀಡದೆ ಅಜ್ಞಾತವಾಗಿ ಉಳಿದಿದ್ದ ಪ್ರೇಕ್ಷಣೀಯ ತಾಣಗಳೆಲ್ಲಾ ಈಗ ಪ್ರವಾಸಿ ಕೇಂದ್ರಗಳಾಗಿವೆ.

ಇದು ಸಂತೋಷದ ವಿಚಾರವಾದರೂ ಅವರು ಎಸೆದು ಹೋಗುವ ಕಸಗಳು ಸ್ವಚ್ಛ ಸುಂದರ ಪರಿಸರಕ್ಕೊಂದು ಶಾಪವಾಗಿ ಪರಿಣಮಿಸತೊಡಗಿದೆ. ಪ್ರೇಕ್ಷಣೀಯ ತಾಣಗಳ ಹಲವೆಡೆ ಕಸದ ತೊಟ್ಟಿಗಳನ್ನಿಟ್ಟಿದ್ದರೂ ಅದರೊಳಕ್ಕೆ ಕಸವನ್ನು ಹಾಕುವಷ್ಟು ವ್ಯವಧಾನವಿಲ್ಲದೆ ಕುಳಿತಲ್ಲಿಂದಲೇ ಎಲ್ಲೆಂದರಲ್ಲಿ ಎಸೆಯುವುದು ವಿಷಾದಕರ ಸಂಗತಿಯಾಗಿದೆ. ಮತ್ತೊಂದೆಡೆ ಪರಿಸರವನ್ನು ಸ್ವಚ್ಛವಾಗಿಡಿ ಎಂಬ ನಾಮಫಲಕಗಳಿಗೆ ಕಿಮ್ಮತ್ತೇ ಇಲ್ಲದಂತಾಗಿದೆ.

ಇನ್ನು ಜಲಪಾತಗಳ ವೀಕ್ಷಣೆಗೆ ಬರುವ ಕೆಲವರು ಬಾಟಲಿ, ಕವರ್‌ಗಳನ್ನು ನೀರಿಗೆ ಎಸೆದು ವಿಕೃತ ಆನಂದಪಡುತ್ತಾರೆ. ಪ್ರವಾಸಿಗರ ಪೈಕಿ ಶಾಲಾ ಮಕ್ಕಳು ಹಾಗೂ ಕುಟುಂಬ ಸಮೇತರಾಗಿ ಆಗಮಿಸುವವರು ಪ್ರವಾಸಿ ತಾಣಗಳನ್ನಷ್ಟೆ ವೀಕ್ಷಿಸಿ ಹೋಗುತ್ತಾರೆ. ಅಂತಹವರು ನಿರುಪಯುಕ್ತ ವಸ್ತುಗಳನ್ನು ಹೆಚ್ಚಾಗಿ ಎಸೆದು ಪರಿಸರವನ್ನು ಹಾಳುಗೆಡವುದಿಲ್ಲ. ಆದರೆ ಮೋಜು ಮಸ್ತಿಗಾಗಿ ಬರುವ ಕೆಲವು ಪ್ರವಾಸಿಗರು ತಮ್ಮೊಂದಿಗೆ ಮದ್ಯ, ಬಿಯರ್, ಫೆಪ್ಸಿ ಬಾಟಲಿಗಳನ್ನು ತಂದು ಸೇವಿಸಿದ ಬಳಿಕ ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ.

ಇನ್ನಾದರೂ ಕೊಡಗಿಗೆ ಆಗಮಿಸುವ ಪ್ರವಾಸಿಗರಿಗೆ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಪರಿಸರದ ಸ್ವಚ್ಛತೆಯನ್ನು ಕಾಪಾಡುವ ಬಗ್ಗೆ ಮನದಟ್ಟು ಮಾಡುವ ಕೆಲಸವನ್ನು ಸಂಬಂಧಿಸಿದವರು ಮಾಡಬೇಕಾಗಿದೆ. ಪ್ರವಾಸಿಗರು ಕೂಡ ಇದನ್ನರಿತು ಸಹಕರಿಸಬೇಕು ಇಲ್ಲದಿದ್ದರೆ ಮುಂದೊಂದು ದಿನ ಪ್ರವಾಸಿ ತಾಣಗಳು ಕಸದಿಂದ ತುಂಬಿ ತುಳುಕುವುದರೊಂದಿಗೆ ಗಬ್ಬೆದ್ದು ನಾರುವ ದಿನಗಳು ಬಂದರೂ ಬರಬಹುದು. ಹಾಗೆ ಆಗದಂತೆ ಈಗಿನಿಂದಲೇ ಎಲ್ಲರೂ ಎಚ್ಚರವಹಿಸಬೇಕಾದ ಅಗತ್ಯವಿದೆ.
ಬಿ.ಎಂ.ಲವಕುಮಾರ್, ಮೈಸೂರುWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಬೆಂಗಳೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ...

ಮೋದಿ ಪ್ರಧಾನಿಯಾಗೋಲ್ಲ, ಯುಪಿಎ ಅಧಿಕಾರಕ್ಕೆ ಬರ್ತದೆ: ಇಬ್ರಾಹಿಂ ಭವಿಷ್ಯ

ಮಂಗಳೂರು: ನರೇಂದ್ರ ಮೋದಿ ಪ್ರಧಾನಮಂತ್ರಿ ಆಗೋದಿಲ್ಲ. ಯುಪಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಈ ಬಾರಿ ...

ಹಾಸನದಲ್ಲಿ ಮತ್ತೆ ದೇವೇಗೌಡರ ಕೊರಳಿಗೆ ವಿಜಯಮಾಲೆ ಬೀಳುತ್ತಾ?

ಮಾಜಿ ಪ್ರಧಾನಿಯ ಕ್ಷೇತ್ರ ಹಾಸನ ಕೂಡ ಸಮಸ್ಯೆಗಳಿಂದ ಹೊರತಾಗಿಲ್ಲ. ಮಾಜಿ ಪ್ರಧಾನಿಯ ತವರು ಎನ್ನುವ ಖ್ಯಾತಿ ...

Widgets Magazine