ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಚಿಕೆಗೇಡು, ಪ್ರಜಾತಂತ್ರದ ಕಪ್ಪು ಚುಕ್ಕೆ!  Search similar articles
ಅವಿನಾಶ್
PTI
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪರಮೋಚ್ಚ ಅಧಿಕಾರ ಕೇಂದ್ರವೊಂದು ಕಾಳಧನದ ಥೈಲಿಯೊಂದಿಗೆ ಅಪವಿತ್ರಗೊಂಡಿತು. ಭಾರತದ ಸಾಂವಿಧಾನಿಕ ಇತಿಹಾಸದಲ್ಲಿಯೇ 2008ರ ಜುಲೈ 22ರ ಈ ಮಹಾನ್ ಮಂಗಳವಾರ, ಒಂದು ಅಮಂಗಳಕರ ಅಧ್ಯಾಯವನ್ನು ಬರೆದ ದಿನವಾಯಿತು.

ಯುಪಿಎ ಸರಕಾರವೇನೋ ವಿಶ್ವಾಸ ಮತ ಗೆದ್ದು ದೀರ್ಘವಾಗಿಯೇ ಶ್ವಾಸ ಎಳೆದುಕೊಂಡಿತು. ಆದರೆ ಗೆಲುವಿನ ಹಾದಿಯಲ್ಲಿ ಕೇಳಿ ಬಂದ ಹಣದ ಝಣಝಣ ಸದ್ದಿನ ಆ ಕಪ್ಪು ಚುಕ್ಕೆ? ಎಂದಿಗೂ ಅಳಿಸಿಹೋಗುವಂತಹುದಲ್ಲ. ಸಮಾಜವಾದಿ ಪಕ್ಷದ ಸದಸ್ಯರು ಮತದಾನದಿಂದ ಹೊರಗುಳಿಯುವಂತಾಗಲು ತಮಗೆ ನೀಡಿದರೆನ್ನಲಾದ ಒಂದು ಕೋಟಿ ರೂಪಾಯಿಯನ್ನು ಬಿಜೆಪಿ ಸದಸ್ಯರು ಸಂಸತ್ ಭವನದೊಳಗೆ ಸುರಿಯುತ್ತಿದ್ದ ಆ ಪ್ರಸಂಗ ನೋಡಿದ ಈ ದೇಶದ ಪ್ರಜ್ಞಾವಂತ ಮತದಾರ ನಿಬ್ಬೆರಗಾಗಿದ್ದಾನೆ. ನಾವು ಪವಿತ್ರ ಎಂದು ತಿಳಿದಿದ್ದ ಸಂಸತ್ತು ಎಷ್ಟರ ಮಟ್ಟಿಗೆ ಹೊಲಸಾಗಿದೆ ಅಂತ ತಿಳಿದು ಹಣೆ ಚಚ್ಚಿಕೊಳ್ಳಲಾರಂಭಿಸಿದ್ದಾನೆ.

ವಿದೇಶೀಯರು 'ಭ್ರಷ್ಟಾಚಾರ' ಎಂಬ ಪದ ಕೇಳಿದ ತಕ್ಷಣವೇ ಅದರೊಂದಿಗೆ ಭಾರತದ ಹೆಸರೂ ಗಟ್ಟಿಯಾಗಿಯೇ ಕೇಳಿಬರುವಂತೆ ಮಾಡಿಬಿಟ್ಟಿದ್ದಾರೆ ನಮ್ಮ ಮಹಾನ್ ಸಂಸದರು. ಓಟು ಹಾಕಲೂ ನೋಟು, ಓಟು ಹಾಕದೇ ಇರುವುದಕ್ಕೂ ಥೈಲಿ, ಮತದಾನಕ್ಕೆ ಹಾಜರಾಗದೇ ಇರುವುದಕ್ಕೂ ಹಣದ ಹೊಳೆ.

ಹಾಗಂತ ಇಂಥದ್ದು ನಡೆದಿರುವುದು ಇದೇ ಮೊದಲೇನಲ್ಲ. ಜೆಎಂಎಂ ಲಂಚ ಪ್ರಕರಣದಲ್ಲಿ ಹಣವು ಸಂಸತ್ತಿನೊಳಗೆ ಪ್ರವೇಶಿಸಿರಲಿಲ್ಲ. ಆದರೆ 80ರ ದಶಕದ ಮಧ್ಯಭಾಗದಲ್ಲಿ, ಎಂಜಿಆರ್ ಸಾವಿನ ಬಳಿಕ ಎಐಎಡಿಎಂಕೆ ಒಡೆದ ಬಳಿಕ, ಪಕ್ಷಾಂತರ ಮಾಡಲು ತಮಗೆ ಹಣ ನೀಡಲಾಗಿತ್ತು ಎಂದು ಆರೋಪಿಸಿದ್ದ ಅಂದಿನ ಸಂಸದ ಆರ್.ಸೌಂದರರಾಜನ್, ಎರಡು ಲಕ್ಷ ರೂ.ಗಳನ್ನು ಸೂಟ್‌ಕೇಸ್‌ನಲ್ಲಿ ಸದನಕ್ಕೆ ತಂದು ತೋರಿಸಿದ್ದರು. ಅದನ್ನು ನಂತರ ಪೊಲೀಸರಿಗೆ ಒಪ್ಪಿಸಲಾಯಿತು ಮತ್ತು ಕೇಸು ದಾಖಲಿಸಲಾಗಿತ್ತು. ಆದರೆ ಈಗಿನದು ಲಕ್ಷವಲ್ಲ, ಕೋಟಿ ಕೋಟಿ ಹಣ.

ಇಲ್ಲ, ನಮ್ಮ ಸಂಸದರು ಈ ಮಟ್ಟಕ್ಕೆ ಇಳಿಯಲಾರರು, ಮಾಧ್ಯಮಗಳೆಲ್ಲಾ 'ಕುದುರೆ ವ್ಯಾಪಾರ' ಅಂತೆಲ್ಲಾ ಸುಮ್ಮನೇ ಬೊಗಳೆ ಬಿಡುತ್ತಿವೆ ಅಂತಷ್ಟೇ ತಿಳಿದುಕೊಂಡವರು ತಮ್ಮ ಮನೋಭಾವ ಬದಲಾಯಿಸಬೇಕಾಗಿ ಬಂದಿದ್ದು ಸತ್ಯ. ಲಂಚ ಕೊಟ್ಟಿದ್ದು ನಿಜವೇ ಅಥವಾ ಇದು ಬಿಜೆಪಿಯ ತಂತ್ರವೇ ಎಂಬುದಿನ್ನೂ ಖಚಿತವಾಗಬೇಕಿದೆ. ಆದರೆ, ಭಾರತದಲ್ಲಿ ಈ ರೀತಿ ಕೂಡ ನಡೆಯುತ್ತದೆ ಎಂಬ ಭಾವನೆ ಹಿಂದೆಯೇ ಇತ್ತಾದರೂ, ಇಂದಿನ ಪ್ರಕರಣದಿಂದಾಗಿ ವಿಶ್ವ ಸಮುದಾಯಕ್ಕೆ ಇದು ಖಡಾಖಂಡಿತವಾಗಿಬಿಟ್ಟಿದ್ದು ಸುಳ್ಳಲ್ಲ!

ಜೆಎಂಎಂ ಲಂಚ ಹಗರಣವಿರಲಿ, ಸೈಂಟ್ ಕಿಟ್ಸ್ ಪ್ರಕರಣವಿರಲಿ, ಬೋಫೋರ್ಸ್ ಹಗರಣವೇ ಇರಲಿ, ಇದುವರೆಗೆ ಹೊರಗಷ್ಟೇ ನಡೆಯುತ್ತಿದ್ದ ಈ ದಂಧೆ, ಈ ಬಾರಿ ನೇರವಾಗಿ ಅಧಿಕಾರ ಕೇಂದ್ರದೊಳಗೇ ನುಗ್ಗಿಬಿಟ್ಟಿದೆ. ಪ್ರಜಾತಂತ್ರದ ಮೂಲ ಸ್ಥಾನಕ್ಕೇ ಭ್ರಷ್ಟಾಚಾರದ ಕಳಂಕ. ಭಾರತದ ಲೋಕಸಭೆಯಲ್ಲೇನಾಗುತ್ತಿದೆ ಎಂಬುದನ್ನು ಕಣ್ಣಾರೆ ನೋಡುವ ಹಂಬಲದಲ್ಲಿ ಟಿವಿ ಸೆಟ್‌ಗಳ ಮುಂದೆ ಇಡೀ ಜಗತ್ತೇ ಬಿಟ್ಟ ಕಣ್ಣು ಬಿಟ್ಟು ನೋಡುತ್ತಿದ್ದರೆ, ಜನರಿಂದ ಜನರಿಗಾಗಿ ಜನರಿಗೋಸ್ಕರ ಕೆಲಸ ಮಾಡಬೇಕಿದ್ದ ನಮ್ಮ ಸಂಸತ್ ಸದಸ್ಯರು ಮಾಡಿದ್ದೇನು? ಕರೆನ್ಸಿ ಪ್ರದರ್ಶನ! ಓಟು ಕೊಟ್ಟು ಆರಿಸಿ ಕಳುಹಿಸಿದವರೆಲ್ಲರೂ ಮೂರ್ಖರು, ಜೋಕರ್‌ಗಳು ಅಂತ ತಿಳಿದುಕೊಂಡಿದ್ದಾರೆಯೇ ಈ ಜನಪ್ರತಿನಿಧಿಗಳು? ಪವಿತ್ರ ಸಂಸತ್ತು ಒಂದು ನಾಟಕ ರಂಗ ಅಂತ ತಿಳಿದುಕೊಂಡರೇ ಅವರು? ಜನತಂತ್ರ ವ್ಯವಸ್ಥೆಯ ಅಣಕವಿದು. ಹಣ ಕೊಟ್ಟಿದ್ದು ನಿಜವಿರಲೀ, ಯಾ ಸುಳ್ಳೇ ಇರಲಿ, ಈ ರೀತಿಯ (ಕು)ತಂತ್ರವಿದೆಯಲ್ಲ, ಖಂಡಿತವಾಗಿಯೂ ಪ್ರಜಾತಂತ್ರಕ್ಕೆ ಬಗೆದ ದ್ರೋಹ. ಅಕ್ಷಮ್ಯ ಅಪರಾಧವೂ ಹೌದು.

ಹಣದುಬ್ಬರ, ಬೆಲೆ ಏರಿಕೆ ಇತ್ಯಾದಿಗಳಿಂದ ಜನ ಕಂಗಾಲಾಗಿ ಒಪ್ಪೊತ್ತಿನ ಊಟಕ್ಕೆ ಕಣ್ ಕಣ್ ಬಿಡುತ್ತಿದ್ದರೆ, ಅಣು ಒಪ್ಪಂದದ ಧಾವಂತದಲ್ಲಿ ಸರಕಾರವನ್ನೇ ಬಲಿಕೊಡುವಷ್ಟು ಮುಂದಾಗಿ, ಅದನ್ನು ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಬಹುದಾಗಿದೆ ಎಂಬ ಭಾವನೆ ಬರುವಂತೆ ಮಾಡಿರುವ ಸಂಸತ್ ಸದಸ್ಯರಿಗಿದು ನಾಚಿಕೆಗೇಡು. ಹಣದುಬ್ಬರ ಹೆಚ್ಚಿದೆ, ಜೀವನಾವಶ್ಯಕ ವಸ್ತುಗಳ ಬೆಲೆಗಳು ಏರಿವೆ, ಅದನ್ನು ನಿಯಂತ್ರಿಸಲು ಸರಕಾರ ವಿಫಲವಾಗಿದೆ ಅಂತ ಹೇಳಿ ಯಾವುದೇ ರಾಜಕೀಯ ಪಕ್ಷಗಳು "ಆಡಳಿತ ನಡೆಸಲು ವಿಫಲ" ಎಂಬ ಕಾರಣವೊಡ್ಡಿ ಸರಕಾರವನ್ನು ಉರುಳಿಸಲು ನೋಡಿದವೇ ಎಂಬುದು ಎಲ್ಲರೂ ಯೋಚಿಸಬೇಕಾದ ಸಂಗತಿ.

ಹಣದ ವ್ಯವಹಾರ ನಡೆದದ್ದು ನಿಜವೇ ಆಗಿದ್ದರೆ, ನಮ್ಮ ಓದುಗರನೇಕರು ತಮ್ಮ ಪ್ರತಿಕ್ರಿಯೆಗಳಲ್ಲಿ ತಿಳಿಸಿರುವಂತೆ, ಬೆಲೆ ಏರಿಕೆಯ ಜನಾಕ್ರೋಶದಿಂದ ಜನರ ಗಮನ ಬೇರೆಡೆ ಸೆಳೆಯುವ ತಂತ್ರವೇ ಈ ತರಾತುರಿಯ ಅಣು ಕರಾರು ಎಂದೂ ವಿಶ್ಲೇಷಿಸಬಹುದು. ಸರಕಾರದ ಕಾಲೆಳೆಯುವುದೊಂದು ನೆಪವಷ್ಟೆ. ನಾಳೆ ಚುನಾವಣೆ ನಡೆದರೂ 'ಕೋಮುವಾದಿ'ಯನ್ನು ಹೊರಗಿಡಬೇಕು ಎಂಬ ಅದೇ ಹಳೇ ಕಾಲದ ಕಾರಣವೊಡ್ಡಿ ಈಗಿನ ವೈರಿಗಳು ಮತ್ತೆ ಒಂದಾಗುವುದು ಖಂಡಿತ. ಆದರೆ ಇಲ್ಲಿ ಹಣದ ವ್ಯವಹಾರದಲ್ಲಿ ವಿದೇಶೀ ಶಕ್ತಿಯ ಕೈವಾಡವೂ ಇರಬಹುದೇ? ಸರಕಾರ ಉಳಿಸಲು, ಅಣು ಒಪ್ಪಂದದ ಹಾದಿ ಸುಗಮವಾಗಲು ವಿದೇಶದ ಪರೋಕ್ಷ ಕೈ ಕೂಡ ಕೆಲಸ ಮಾಡಿರಬಹುದೇ ಎಂಬ ಓದುಗರ ಶಂಕೆಯೂ ಚಿಂತನಾರ್ಹ.

ಒಬ್ಬ ಮುಗ್ಧ ಪ್ರಜೆಯಾಗಿ, ಸಂಸದೀಯ ಪ್ರಜಾಸತ್ತೆಯಲ್ಲಿ ನಂಬಿಕೆ ಇರಿಸಿದವನಾಗಿ, ಈ ದೇಶದ ಅನ್ನ ತಿಂದು, ನಾವು ಓಟು ಹಾಕಿ ಕಳುಹಿಸಿದವರು ಪರಿಶುದ್ಧರು ಅಂತೆಲ್ಲಾ ನಂಬಿರುವವರಿಗೆ ಇನ್ನೂ ಇದನ್ನು ನಂಬಲಾಗುತ್ತಿಲ್ಲ, ಅರಗಿಸಿಕೊಳ್ಳಲಾಗುತ್ತಿಲ್ಲ. ಆದರೆ ಹೀಗೂ ನಡೆಯಬಹುದು ಎಂಬುದು ವಿಶ್ವವಿದಿತವಾಯಿತು. ಎರಡು ದಿನಗಳಲ್ಲಿ ಕೈಕೈ ಬದಲಾಯಿಸಿದ ಹಣದ ಥೈಲಿಯನ್ನೇ ತೆಗೆದುಕೊಂಡರೆ, ಬಡತನದಿಂದ, ಮೂಲ ಸೌಕರ್ಯಗಳಿಲ್ಲದೆ ನರಳುತ್ತಿರುವ ಒಂದಷ್ಟು ಹಳ್ಳಿಗಳನ್ನಾದರೂ ಉದ್ಧಾರ ಮಾಡಬಹುದಿತ್ತು.

ಈಗ ಹಣದ ಥೈಲಿ ತಂದು ಸಂಸತ್ತಿನಲ್ಲಿ ಸುರಿದಲ್ಲಿಗೆ ಈ ದೇಶದ ಮಾನ ಹರಾಜಾಯಿತು. ಇಡೀ ವಿಶ್ವ ಸಮುದಾಯದೆದುರು ಮಾನ ಹೋಗಿದ್ದು ಖಂಡಿತವಾಗಿಯೂ ನಮ್ಮ ಸಂಸದರದ್ದಲ್ಲ, ಈ ದೇಶದ್ದು. ಭವಿಷ್ಯದಲ್ಲಿ ಈ ದೇಶ ಮುನ್ನಡೆಸಬಲ್ಲ ಈಗಿನ ಯುವ ನೇತಾರರ ಮನಸ್ಸಿನಲ್ಲಿ ಇದು ಎಂತಹ ಪರಿಣಾಮ ಬೀರಬಹುದು? ಇದು ಆಡಳಿತ ಪಕ್ಷದ ಅಥವಾ ಪ್ರತಿಪಕ್ಷದ ತಂತ್ರವೇ ಆಗಿರಲಿ, ಆದರೆ ಜನರನ್ನು, ಸಂಸತ್ತನ್ನು, ಭಾರತೀಯ ರಾಜಕೀಯ ವ್ಯವಸ್ಥೆಯನ್ನು ತಲೆ ತಗ್ಗಿಸುವಂತೆ ಮಾಡಿರುವುದು ಅಕ್ಷಮ್ಯ.

ಸತ್ಯವೇನೇ ಇರಲಿ, ಅದು ಹೊರ ಬರಲಿ. ಓಟು ಕೊಟ್ಟು ಉತ್ತಮ ಬದುಕು ನಿರೀಕ್ಷಿಸುವ ಜನರಾದರೂ ಸತ್ಯಾಂಶವೇನು ಎಂಬುದನ್ನು ಅರಿತುಕೊಳ್ಳುವಂತಾಗಲಿ. ಈ ಮಟ್ಟಕ್ಕೆ ಇಳಿದವರು ಯಾರು, ಮುಂದಿನ ಚುನಾವಣೆಗಳಲ್ಲಿ ಇಂಥವರನ್ನು ಆರಿಸಬೇಕೇ ಎಂಬುದರ ಬಗ್ಗೆ ಪ್ರಜ್ಞಾವಂತ ಮತದಾರರು ಆತ್ಮವಿಮರ್ಶೆ ಮಾಡಿಕೊಳ್ಳಲಿ. ಹಣ ಕೊಟ್ಟವರು, ಪಡೆದವರು ಅಥವಾ ಹಣ ಕೊಟ್ಟು ಕೂಡ ಭಾರತದ ಸಂಸದರನ್ನು ಖರೀದಿ ಮಾಡಬಹುದು ಎಂಬ ಅಂಶವನ್ನು ಜಗತ್ತಿಗೆ ಬಟಾಬಯಲು ಮಾಡಿಸಿಕೊಟ್ಟವರು ಕಠಿಣಾತಿಕಠಿಣ ಶಿಕ್ಷೆ ಪಡೆಯುವಂತಾಗಲಿ.
ಮತ್ತಷ್ಟು
ವಿಶ್ವಾಸ ಮತದ ಇತಿಹಾಸ: ಒಂದು ಹಿನ್ನೋಟ
ಲಂಚ ಪಡೆದವರಿಗಿಲ್ಲ ಚಿಂತೆ, ಕೊಡುವವರಿಗಷ್ಟೇ!
ಅಣು ಬಂಧ: ಅನಿರೀಕ್ಷಿತ ಮತ್ತು ಆಕಸ್ಮಿಕ
ಅಣ್ಣ-ತಮ್ಮಂದಿರ ಜಗಳದಲ್ಲಿ ಎಸ್ಪಿ ನಲುಗೀತಾ?
ಗೌಡ್ರ ಕಣ್ಣು ಕೇಂದ್ರದ್ ಮ್ಯಾಗೆ...!
ನೀವು ಪ್ರಧಾನಿಯಾದರೆ?....