ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > 6 ತಿಂಗಳಲ್ಲಿ 64 ಸರಣಿ ಸ್ಫೋಟ: ಗೃಹ ಸಚಿವರೆಲ್ಲಿ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
6 ತಿಂಗಳಲ್ಲಿ 64 ಸರಣಿ ಸ್ಫೋಟ: ಗೃಹ ಸಚಿವರೆಲ್ಲಿ?
ಕಳೆದ ಸುಮಾರು ಆರು ತಿಂಗಳ ಅವಧಿಯಲ್ಲಿ ನಮ್ಮ ದೇಶದ ವಿವಿಧೆಡೆ 64 ಸರಣಿ ಬಾಂಬ್ ಸ್ಫೋಟ ಪ್ರಕರಣಗಳು ಜರುಗಿವೆ. ಇವುಗಳಲ್ಲಿ ಸುಮಾರು 220 ಮಂದಿ ಸಾವನ್ನಪ್ಪಿದ್ದು, 900ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಅಸ್ಸಾಂನಲ್ಲಿ ಮತ್ತೊಮ್ಮೆ ಬಾಂಬ್ ಸದ್ದು ಮೊಳಗಿದೆ. ಕೇಂದ್ರದ ಗೃಹ ಸಚಿವ ಶಿವರಾಜ್ ಪಾಟೀಲ್ ಯಥಾ ಪ್ರಕಾರ, "ಇದು ದೇಶದಲ್ಲಿ ಶಾಂತಿ ಬಯಸದ ಹೇಡಿಗಳ ಕೃತ್ಯ" ಅಂತ ಹೇಳಿಕೆ ನೀಡಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಜೈಪುರದಲ್ಲಿ 9 ಕಡೆ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 65 ಮಂದಿ ಸಾವನ್ನಪ್ಪಿ, 150ಕ್ಕೂ ಹೆಚ್ಚು ಮಂದಿ ಗಾಯಗೊಳ್ಳುವುದರೊಂದಿಗೆ ಈ ಸರಣಿ ಬಾಂಬ್ ಸ್ಫೋಟ ವಿಧಾನಕ್ಕೆ ಭಯೋತ್ಪಾದಕರು ಚಾಲನೆ ನೀಡಿದ್ದರು. "ಅವರ (ಕೋಮು ಸೌಹಾರ್ದ ಕದಡುವ) ಉದ್ದೇಶವನ್ನು ವಿಫಲಗೊಳಿಸಲಾಗಿದೆ. ಜೈಪುರದ ಜನತೆ ಈ ಹೇಡಿಗಳ ಕುತಂತ್ರಕ್ಕೆ ಸೊಪ್ಪು ಹಾಕಲಿಲ್ಲ ಮತ್ತು ಅವರ ಉದ್ದೇಶ ಸಫಲವಾಗಲು ಬಿಡಲಿಲ್ಲ" ಎಂದಿದ್ದರಂದು ಶಿವರಾಜ್ ಪಾಟೀಲ್.

ಆ ಬಳಿಕ, ಬೆಂಗಳೂರಿನ ಒಂಬತ್ತು ಕಡೆಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದವು. ಆಗ ಗೃಹಸ ಸಚಿವಾಲಯದಿಂದ ಹೊರಬಂದ ಮಾತು "ಇಂಥ ಕೃತ್ಯಗಳು ರಾಷ್ಟ್ರ ವಿರೋಧಿ ಶಕ್ತಿಗಳನ್ನು ಮಟ್ಟ ಹಾಕುವ ಸರಕಾರದ ಪ್ರಯತ್ನಕ್ಕೆ ಹಿನ್ನಡೆಯುಂಟು ಮಾಡುವುದು ಸಾಧ್ಯವಿಲ್ಲ". ಬೆಂಗಳೂರಿನಲ್ಲಿ ಸ್ಫೋಟ ಸಂಭವಿಸಿದ ಮರುದಿನ ಅಹಮದಾಬಾದ್ ಪಟ್ಟಣದ 18 ಕಡೆಗಳಲ್ಲಿ ಬಾಂಬ್‌ಗಳು ಸ್ಫೋಟಿಸಿದವು. 57 ಮಂದಿ ಸಾವನ್ನಪ್ಪಿ 130ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಆಗ ಕೇಂದ್ರ ಗೃಹ ಸಚಿವಾಲಯದಿಂದ ಬಂದ ಹೇಳಿಕೆ :"ದೇಶದ ಜನರಲ್ಲಿ ಆತಂಕ ಮೂಡಿಸಲು ರಾಷ್ಟ್ರ ವಿರೋಧಿ ಶಕ್ತಿಗಳು ತೀವ್ರವಾಗಿ ಪ್ರಯತ್ನಿಸುತ್ತಿವೆ. ಇಂಥವೆಲ್ಲಾ ಯಶಸ್ವಿಯಾಗುವುದಿಲ್ಲ".

ಇದೇ ಭಯೋತ್ಪಾದಕರ ಕಬಂಧ ಬಾಹುಗಳು ದೇಶದ ರಾಜಧಾನಿಗೂ ತಲುಪಿದವು. ಗೃಹ ಸಚಿವಾಲಯದ ಮನೆಬಾಗಿಲಲ್ಲೇ ನಡೆದ ಈ ಘಟನೆಯಲ್ಲಿ ಆರು ಕಡೆ ಸ್ಫೋಟ ಸಂಭವಿಸಿ 26 ಮಂದಿ ಸಾವನ್ನಪ್ಪಿದರು ಮತ್ತು 50ರಷ್ಟು ಮಂದಿ ಗಾಯಗೊಂಡರು. ಸಚಿವಾಲಯದಿಂದ ಹೇಳಿಕೆ ಹೊರಬಿತ್ತು :"ದೆಹಲಿಯಲ್ಲಿ ಸೂಕ್ತ ಭದ್ರತೆಗಾಗಿ ಇತ್ತೀಚೆಗೆ ಸರಕಾರವು ಸರಣಿ ಕ್ರಮಗಳನ್ನು ಕೈಗೊಂಡಿದೆ. ಇನ್ನಷ್ಟು ಕ್ರಮಗಳ ಅಗತ್ಯವಿದೆಯೆಂದಾದರೆ ಒದಗಿಸಲು ಸಿದ್ಧ". ಕೆಲವೇ ದಿನಗಳಲ್ಲಿ ತ್ರಿಪುರಾದಲ್ಲಿಯೂ ನಾಲ್ಕು ಕಡೆ ಸರಣಿ ಬಾಂಬ್ ಸ್ಫೋಟ ನಡೆಯಿತು. ಆ ಬಳಿಕದ ಸರಣಿ ಬಾಂಬ್ ಸ್ಫೋಟ ಅಸ್ಸಾಂನ 12 ಕಡೆಗಳಲ್ಲಿ ಗುರುವಾರ ನಡೆದದ್ದು. 60ಕ್ಕೂ ಹೆಚ್ಚು ಮಂದಿಯ ಸಾವು, 300ಕ್ಕೂ ಹೆಚ್ಚು ಮಂದಿಗೆ ನೋವು. ಯಥಾ ಪ್ರಕಾರ ಶಿವರಾಜ್ ಪಾಟೀಲ್ ಹೇಳಿಕೆ :"ಶಾಂತಿ ಸ್ಥಾಪನೆಯಾಗುವುದನ್ನು ಬಯಸದ ಮಂದಿಯ ಕೃತ್ಯವಿದು. ಜನರೇ ಭಯಪಡಬೇಡಿ".!
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಬ್ಬದ ಸಂಭ್ರಮದ ವಂಚನೆ ತಡೆಗೆ 12 ಸೂತ್ರಗಳು
ಚಿನ್ನವೇ ಸುರಕ್ಷಿತ ಹೂಡಿಕೆ: ಹಣಕಾಸು ತಜ್ಞರ ಹೇಳಿಕೆ
ವೆಬ್‌ದುನಿಯಾದಲ್ಲಿ ಉಪಸಂಪಾದಕರ ಹುದ್ದೆ ಖಾಲಿ ಇದೆ
ಸಿಡಿಯಲಿರುವ ಸಿದ್ದು: ರಾಜ್ಯ ರಾಜಕೀಯದಲ್ಲಿ ಸಂಚಲನ
ಕನ್ನಡಿಗ ಈ ಅರವಿಂದ ಅಡಿಗ, ಯಾವೂರಿನ ಹುಡುಗ?
ವಿಶ್ವ ಸೃಷ್ಟಿಯ ಮರ್ಮವರಿಯಲು ಬಿಗ್ ಬ್ಯಾಂಗ್ ಮಹಾಪ್ರಯೋಗ !