ಅಲ್ಲಿ ಚಾರಿತ್ರ್ಯ, ಸನ್ನಡತೆ, ನೈತಿಕತೆ ಮುಂತಾದವುಗಳ ಸುಳಿವಿರಲಿಲ್ಲ. ನಮ್ಮ ನಾಯಕರು ಒಳಗೆ ಬಂದ ತಕ್ಷಣ ಅವುಗಳೆಲ್ಲಾ ಹೊರಗೆ! ವಿಷಯ ಜ್ಞಾನ, ಪೂರ್ವಸಿದ್ಧತೆ ಎಲ್ಲವೂ ಅದೆಲ್ಲೋ ಕೇಳಿದ ಶಬ್ದಗಳಂತಿವೆಯಲ್ಲ ಎಂಬಂತಾಗಿತ್ತು. ಬೆಳಗಾವಿಯ ಅಧಿವೇಶನವನ್ನೊಮ್ಮೆ ಟಿವಿಯಲ್ಲಿ ನೇರಪ್ರಸಾರದಲ್ಲಿ ನೋಡಿದ ರಾಜ್ಯದ ಪ್ರಜೆಗಳು ಇಂಥದ್ದೊಂದು ಆಲೋಚನೆಯ ಸುಳಿಯಲ್ಲಿ ಸಿಲುಕದಿದ್ದರೆ, ಛೀ... ಥೂ... ಅಂದುಕೊಳ್ಳದಿದ್ದರೆ ಮತ್ತೆ ಕೇಳಿ. ಸದನದೊಳಗಿದ್ದ ಯಾರ ಮುಖದಲ್ಲಾದರೂ ರಾಜ್ಯದ ಅಭಿವೃದ್ಧಿ ಬಗೆಗಿನ ಕಾಳಜಿ ಕಂಡುಬರುತ್ತಿತ್ತೇ? ಎಂದು ಟಾರ್ಚ್ ಹಚ್ಚಿ ಹುಡುಕುವಂತಾಗಿತ್ತು ಈ ಬೆಳಗಾವಿ ವಿಧಾನಮಂಡಲ ಅಧಿವೇಶನ.