ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಸರ್ವಜ್ಞ: ನೋವಿನಲ್ಲೂ ಚೆನ್ನೈ ಕನ್ನಡಿಗರ ನಲಿವು (Sarvajna in Chennai | Aynavaram Jeeva Park | Kannada | Kannadiga | Chennai Kannada Sangha, Karnataka Sangha)
ಅವಿನಾಶ್ ಬಿ. ಬೆಂಗಳೂರಿನಲ್ಲಿ ಆಗಸ್ಟ್ 9ರಂದು ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷ ಮಂದಿ ತಮಿಳರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಬೆಂಗಳೂರು ತಮಿಳು ಸಂಘದ ಅಧ್ಯಕ್ಷ ಮೀನಾಕ್ಷಿ ಸುಂದರಂ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದರೆ, ಇತ್ತ ಚೆನ್ನೈಯಲ್ಲಿ ಸರ್ವಜ್ಞ ಪ್ರತಿಮೆ ಅನಾವರಣ ಎಂಬ ಐತಿಹಾಸಿಕ ಕಾರ್ಯಕ್ರಮಕ್ಕೆ ಕನ್ನಡಿಗರನ್ನು ಒಟ್ಟು ಸೇರಿಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಗಿದೆ.
ಕನ್ನಡ ಜನ ಬಾರದಿದ್ದರೆ ಎಂಬ ಆತಂಕದಿಂದ ಉದ್ಯಾನದ ಪಕ್ಕದಲ್ಲಿರುವ ಕನ್ನಡ ಶಾಲೆಯ ಮಕ್ಕಳನ್ನು ಕರೆಸುವ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ ಎಂದೂ ಮೂಲಗಳು ಹೇಳಿವೆ.
ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ದಿನ ತಿರುವಳ್ಳುವರ್ ಕವಿಯ ಕುರಿತಾದ ನಾಟಕವೂ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಆದರೆ ಚೆನ್ನೈಯಲ್ಲಿ?
Avinash
WD
ಬೆಂಗಳೂರಿನಲ್ಲಿ ಸ್ವತಃ ತಮಿಳು ಸಂಘವೇ ಮುಂದೆ ನಿಂತು ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದರೆ, ತಮಿಳುನಾಡಿನಲ್ಲಿರುವ ಕನ್ನಡ ಸಂಘಗಳ ಹೆಚ್ಚಿನ ಪದಾಧಿಕಾರಿಗಳಿಗೆ ಈ ಪ್ರತಿಮೆ ಅನಾವರಣಗೊಳ್ಳುವ ಕಾರ್ಯಕ್ರಮದ ಸುದ್ದಿ ತಿಳಿದದ್ದು ಮಾಧ್ಯಮಗಳಿಂದ! ಮತ್ತು ಆ ದಿನ ಯಾವ ಕಾರ್ಯಕ್ರಮ ನಡೆಯುತ್ತದೆ, ಕರ್ನಾಟಕದಿಂದ ಯಾವ ಕನ್ನಡ ವಿದ್ವಾಂಸರೆಲ್ಲ ಬರುತ್ತಾರೆ ಎಂಬಿತ್ಯಾದಿ ತಿಳಿದುಕೊಳ್ಳೋಣವೆಂದರೆ, ಆಹ್ವಾನ ಪತ್ರಿಕೆಯಲ್ಲೂ ಹೆಚ್ಚೇನೂ ವಿವರಗಳಿಲ್ಲ! ಆಹ್ವಾನ ಪತ್ರಿಕೆ ಹಂಚಿಕೆ ಆರಂಭವಾದದ್ದು ಆ.5ರ ಬುಧವಾರ.
ಸರ್ವಜ್ಞ ಪ್ರತಿಮೆ ಅನಾವರಣಗೊಳ್ಳಲಿರುವ ಅಯನಾವರಂನ ಜೀವಾ ಉದ್ಯಾನವನಕ್ಕೆ ಬುಧವಾರ ಭೇಟಿ ನೀಡಿದಾಗ, ತ್ರಿಕೋನಾಕೃತಿಯ ಉದ್ಯಾನವು ಮೂರೂ ಕಡೆಗಳಿಂದ ರಸ್ತೆ ಆವೃತವಾಗಿರುವುದರಿಂದ, ವೇದಿಕೆಯನ್ನು ಎಲ್ಲಿ ಹಾಕಬಹುದು ಎಂದು ಕಾರ್ಯಕ್ರಮದ ಉಸ್ತುವಾರಿ ವಹಿಸಿದವರು ಯೋಜನೆ ರೂಪಿಸುತ್ತಿದ್ದುದು ಕಂಡುಬಂತು. (ಲೇಖನದ ಕೆಳ ಭಾಗದಲ್ಲಿ ವೀಡಿಯೋ ವೀಕ್ಷಿಸಿ ಲಿಂಕ್ ಕ್ಲಿಕ್ ಮಾಡಿದರೆ ವೀಡಿಯೋ ವೀಕ್ಷಿಸಬಹುದು.)
ಪ್ರತಿಮೆ ಸ್ಥಾಪನೆ ಎಲ್ಲರಿಗೂ ಹೆಮ್ಮೆಯ ವಿಷಯವೇ, ಆದರೆ...? ಸರ್ವಜ್ಞ ಪ್ರತಿಮೆ ಸ್ಥಾಪನೆ ಬಗ್ಗೆ ಚೆನ್ನೈ ಕನ್ನಡಿಗರನ್ನು ಕೇಳಿ ನೋಡಿ, ಇದು ಒಳ್ಳೆಯ ಬೆಳವಣಿಗೆ, ಸ್ವಾಗತಾರ್ಹ ಎಂಬುದೇ ಎಲ್ಲರ ಅಭಿಮತ. ಆದರೆ ಮಾತು ಮುಂದುವರಿಸಿದರೆ, ಅವರಿಗೆ ತಮ್ಮನ್ನು ಕಡೆಗಣಿಸಿರುವ ಕುರಿತ ನೋವಿದೆ.
ಇದುವರೆಗೆ ಸರ್ವಜ್ಞ ಮೂರ್ತಿ ಪ್ರತಿಷ್ಠಾಪಿಸಲು ಈ ಜಾಗ ಪ್ರಶಸ್ತವಲ್ಲ ಎಂದೇ ಹೇಳುತ್ತಿದ್ದ ಅವರು, ಈಗ ‘ಸರಕಾರ ನಿರ್ಧಾರ ಮಾಡಿಯಾಗಿದೆ, ನಮ್ಮ ಕೈಯಲ್ಲೇನೂ ಇಲ್ಲ. ಇನ್ನೇನಿದ್ದರೂ ಸಂಭ್ರಮಿಸೋಣ. ಆದರೆ ಆ ಮೂರ್ತಿಯ ರಕ್ಷಣೆ ಬಗ್ಗೆಯೇ ನಮಗೆ ಆತಂಕ’ ಎಂಬ ಭಾವನೆಗೆ ಒಗ್ಗಿಕೊಂಡುಬಿಟ್ಟಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಇಲ್ಲಿನ ಕನ್ನಡಿಗರನ್ನು ಗಣನೆಗೆ ತೆಗೆದುಕೊಳ್ಳದಿರುವುದು ಅವರಿಗೆ ನೋವು ತಂದಿದೆ.
ದಶಕದ ಹಿಂದೆಯೇ ಅಂದಿನ ಸಂಸ್ಕೃತಿ ಸಚಿವೆ ರಾಣಿ ಸತೀಶ್ ಅವರು ಬಂದಿದ್ದಾಗಲೂ ಈ ಸ್ಥಳ ಪ್ರಶಸ್ತವಲ್ಲ ಎಂದು ಅವರಿಗೆ ಮನವರಿಕೆ ಮಾಡುವ ಪ್ರಯತ್ನವನ್ನು ಅಯನಾವರಂ ಕನ್ನಡ ಸಂಘದ ಪದಾಧಿಕಾರಿಗಳು ಮಾಡಿದ್ದರು. ಆ ನಂತರ, ಬೆಂಗಳೂರಿನಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರನ್ನು ಭೇಟಿಯಾಗಿಯೂ ಈ ಕುರಿತು ಮನವಿಯೊಂದನ್ನು ಸಲ್ಲಿಸಿ, ಪ್ರಶಸ್ತ ಸ್ಥಳಕ್ಕಾಗಿ ಪ್ರಯತ್ನಿಸಲು ಕೋರಲಾಗಿತ್ತು. ಅಂದರೆ ತಮಿಳುನಾಡು ಸರಕಾರವು ಕನ್ನಡ ಸಂಘದ ಆವರಣದಲ್ಲೇ ಪ್ರತಿಮೆ ಸ್ಥಾಪಿಸಿಕೊಳ್ಳಿ ಎಂದು ಹೇಳಿದ್ದಾಗ, ಅಯನಾವರಂ ಕನ್ನಡ ಸಂಘವು, ಇದು ಪ್ರಶಸ್ತ ಜಾಗವಲ್ಲ, ಒಂದಷ್ಟು ಜನರು ಬರುವ-ಹೋಗುವ ಜಾಗದಲ್ಲಿ ಪ್ರತಿಮೆ ಇರಲಿ ಎಂದು ಹೇಳಿತ್ತು.
ಇದೀಗ, ಚೆನ್ನೈಯಲ್ಲಿ ಕಾರ್ಯನಿರತವಾಗಿರುವ ಕನ್ನಡ ಸಂಘಟನೆಗಳ ಅಭಿಪ್ರಾಯ/ಸಲಹೆ ಕೇಳುವ ಸೌಜನ್ಯ ತೋರದೆ ಏಕಾಏಕಿ ಪ್ರತಿಮೆ ಅನಾವರಣಕ್ಕೆ ನಿರ್ಧರಿಸಿದ ಕಾರಣದಿಂದಾಗಿ ಇಲ್ಲಿನ ಕನ್ನಡಿಗರು ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಕೊನೆಕ್ಷಣದಲ್ಲಿ ಜಾಗ ಸರಿಯಾಗಿಲ್ಲ ಎಂದೆಲ್ಲಾ ಅಪಸ್ವರವೆತ್ತುವುದು ತರವಲ್ಲ, ಇನ್ನು ಈ ನಿರ್ಧಾರಕ್ಕೆ ವಿರೋಧಿಸಿ ಪ್ರಯೋಜನವಿಲ್ಲ ಎಂದು ಸುಮ್ಮನಾಗುತ್ತಾರೆ ಅವರು.
ಆದರೆ, ಇಂಥದ್ದೊಂದು ಕನ್ನಡದ ಕಾರ್ಯಕ್ರಮವನ್ನು ವೈಭವಯುತವಾಗಿ ಆಚರಿಸಿ ಸಂಭ್ರಮಿಸೋಣ ಎಂದರೆ ಅದಕ್ಕೆ ಅವಕಾಶ ಇಲ್ಲವಲ್ಲ ಎಂಬ ಕೊರಗು ಇದ್ದೇ ಇದೆ.
ನಮ್ಮ ಕನ್ನಡ ನೆಲದಲ್ಲಿ ತಮಿಳು ಸಂತನ ಪ್ರತಿಮೆ ಸ್ಥಾಪನೆಗೆ ಅಷ್ಟು ದೊಡ್ಡ ಕಾರ್ಯಕ್ರಮವಾಗುತ್ತದೆ, ಬುಧವಾರದ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ವೇದಿಕೆಯ ಸಿದ್ಧತೆಯ ಚಿತ್ರವೇ ಆ ಕಾರ್ಯಕ್ರಮ ಎಷ್ಟು ದೊಡ್ಡದಾಗಿರಬಹುದು ಎಂಬುದನ್ನು ಸಾರುತ್ತದೆ. ಆದರೆ, ಚೆನ್ನೈಯಲ್ಲೇಕೆ ಇಂಥ ಸ್ಥಿತಿ ಎಂಬುದು ಅವರ ಮನದೊಳಗಿನ ವೇದನೆ. ತಮಿಳುನಾಡಿನ ಸಂಸ್ಕೃತಿ ಇಲಾಖೆ ಮುದ್ರಿಸಿದ ಆಹ್ವಾನ ಪತ್ರಿಕೆಯು ಮಂಗಳವಾರವಷ್ಟೇ ಹೊರಬಿದ್ದಿದ್ದು, ತಮಿಳಿನ ಪಕ್ಕದಲ್ಲಿ ಕನ್ನಡದ ಮುತ್ತಿನ ಅಕ್ಷರಗಳೂ ರಾರಾಜಿಸುತ್ತಿವೆ. ಆಹ್ವಾನ ಪತ್ರಿಕೆಯಲ್ಲಿ ಕರುಣಾನಿಧಿ, ಯಡಿಯೂರಪ್ಪ ಮಧ್ಯೆ ಸರ್ವಜ್ಞನ ಚಿತ್ರವೂ ಇದೆ.
ಕಾರ್ಯಕ್ರಮದ ವಿವರ ಇಂತಿದೆ: ಸಮಯ: ಆಗಸ್ಟ್ 13ರ ಗುರುವಾರ ಸಂಜೆ 4 ಗಂಟೆ ; ಸ್ಥಳ: ಜೀವಾ ಉದ್ಯಾನವನ, ಅಯನಾವರಂ, ಚೆನ್ನೈ ಕಾರ್ಯಕ್ರಮ ಆರಂಭವಾಗುವುದು ತಮಿಳು ನಾಡಗೀತೆಯೊಂದಿಗೆ. ಸ್ವಾಗತ ಭಾಷಣ ಮಾಡಲಿರುವವರು ತಮಿಳುನಾಡು ಮಾಹಿತಿ ಇಲಾಖೆ ಸಚಿವ ಪರಿಧಿ ಇಳಂವಳುದಿ. ಮುಖ್ಯಮಂತ್ರಿ ಎಂ.ಕರುಣಾನಿಧಿ ಅಧ್ಯಕ್ಷತೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಮೆ ಅನಾವರಣಗೊಳಿಸುತ್ತಾರೆ. ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ಆಶಯ ಭಾಷಣ ಮಾಡಲಿದ್ದಾರೆ. ಇದರೊಂದಿಗೆ ಅಟ್ಟಾವರ್ ರಾಮದಾಸ್, ಅಧ್ಯಕ್ಷರು, ಸ್ನೇಹ ಸಂಘ (ಕನ್ನಡ ಸಮುದಾಯ ಮತ್ತು ಸಂಸ್ಕೃತಿ ಸಂಘ) ಅವರು ಕೂಡ ಭಾಗವಹಿಸಲಿದ್ದಾರೆ. ತಮಿಳು ಅಭಿವೃದ್ಧಿ, ಧಾರ್ಮಿಕ ಮತ್ತು ಮಾಹಿತಿ ಇಲಾಖೆಯ ಕಾರ್ಯದರ್ಶಿ ಕ.ಮುತ್ತುಸ್ವಾಮಿ ವಂದನಾರ್ಪಣೆ ಮಾಡಿದ ಬಳಿಕ ರಾಷ್ಟ್ರಗೀತೆಯೊಂದಿಗೆ ಸಮಾರಂಭ ಮುಕ್ತಾಯವಾಗುತ್ತದೆ.
ಯಾಕೆ ಹೀಗಾಯ್ತೋ... ಚೆನ್ನೈಯಲ್ಲಿ ಐದಾರು ದಶಕಗಳ ಹಿಂದೆಯೇ ಸ್ಥಾಪನೆಗೊಂಡು ಕನ್ನಡದ ಕೈಂಕರ್ಯದಲ್ಲಿ ನಿರತವಾಗಿದ್ದ ಕನ್ನಡದ ಸಂಘ ಸಂಸ್ಥೆಗಳಿವೆ. ಅವುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ, ಇದನ್ನೊಂದು ಅದ್ಧೂರಿಯಾಗಿ ಎಂದಲ್ಲದಿದ್ದರೂ, ಸ್ವಲ್ಪ ಮಟ್ಟಿಗೆ ಕನ್ನಡದ ಛಾಪು ಬೀರಬಲ್ಲಂತಹ, ಸರ್ವಜ್ಞನ ಬೋಧನೆಗಳನ್ನು ಪಸರಿಸುವಂತಹ ಕಾರ್ಯಕ್ರಮವೊಂದನ್ನು ಮಾಡಬಹುದಿತ್ತು ಎಂಬುದು ಚೆನ್ನೈ ಕನ್ನಡ ಸಂಘಗಳ ಅಭಿಪ್ರಾಯ.
ಚೆನ್ನೈಯಲ್ಲಿರುವ ಕನ್ನಡದ ವಿದ್ವಾಂಸರು, ಕನ್ನಡಕ್ಕಾಗಿ ದುಡಿಯುವ ಹಿರಿಯರನ್ನು ವೆಬ್‌ದುನಿಯಾ ಮಾತನಾಡಿಸಿತು. ಟಿ.ನಗರದ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಪಿ.ಆಚಾರ್ಯ, ಅಯನಾವರಂ ಕನ್ನಡ ಸಂಘದ ಕಾರ್ಯದರ್ಶಿ ಶ್ರೀನಿವಾಸ ರಾವ್, ಮದರಾಸು ವಿವಿ ಕನ್ನಡ ವಿಭಾಗದ ಡಾ.ತಮಿಳುಸೆಲ್ವಿ, ಅದೇ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಶ್ರೀಕೃಷ್ಣ ಭಟ್ ಅರ್ತಿಕಜೆ ಮುಂತಾದವರೆಲ್ಲರೂ ಸರ್ವಜ್ಞ ಚೆನ್ನೈಯಲ್ಲಿ ನೆಲೆಯಾಗುತ್ತಿರುವ ಬಗ್ಗೆ ಸಂಭ್ರಮಿಸುತ್ತಿದ್ದಾರೆ.
ಚೆನ್ನೈಯಲ್ಲಿ ಪ್ರಮುಖವಾಗಿ ಐದಾರು ದಶಕಗಳ ಹಿಂದೆಯೇ ಸ್ಥಾಪನೆಯಾಗಿ ಕ್ರಿಯಾಶೀಲವಾಗಿ ಕನ್ನಡ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಟಿ.ನಗರದ ಹಬೀಬುಲ್ಲಾ ರಸ್ತೆಯಲ್ಲಿರುವ ಕರ್ನಾಟಕ ಸಂಘ. ಆ ನಂತರ ಪ್ರಮುಖವಾಗಿ ಕೇಳಿಬರುತ್ತಿರುವುದು ಅಷ್ಟೇ ಇತಿಹಾಸವಿರುವ ಅಯನಾವರಂ ಕನ್ನಡ ಸಂಘ, ಚೆನ್ನೈ ಕನ್ನಡ ಬಳಗ ಮತ್ತು ಬೆಸೆಂಟ್ ನಗರ ಕನ್ನಡಿಗರ ಕೂಟ. ಇದಲ್ಲದೆ ಬಂಟರ ಸಂಘ ಮತ್ತು ಹವ್ಯಕ ಸಂಘಗಳೂ ಸಕ್ರಿಯವಾಗಿವೆ. ಐಐಟಿ ಮದ್ರಾಸ್‌ನ ಕನ್ನಡ ಸಾಂಸ್ಕೃತಿಕ ಸಂಘವೂ ತನ್ನ ಛಾಪು ಒತ್ತುತ್ತಿತ್ತು. ಇದಲ್ಲದೆ, ಮದರಾಸು ವಿಶ್ವವಿದ್ಯಾನಿಲಯವಂತೂ ಹಳೆ ತಲೆಮಾರಿನ ಕನ್ನಡಿಗರಿಗೆ ಪೂಜನೀಯ ವಿದ್ಯಾ ಕೇಂದ್ರವಾಗಿತ್ತು. ಅಲ್ಲಿನ ಕನ್ನಡ ವಿಭಾಗ ಈಗಲೂ ಕನ್ನಡದ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ಪ್ರತಿಮೆ ಸ್ಥಾಪನೆಯ ಜಾಗದ ಬಗೆಗಾಗಲೀ, ಏರ್ಪಡಿಸಬಹುದಾದ ಕಾರ್ಯಕ್ರಮದ ಬಗೆಗಾಗಲಿ ಚೆನ್ನೈ ಕನ್ನಡಿಗರಲ್ಲಿ ಒಮ್ಮೆ ಸಮಾಲೋಚಿಸಬಹುದಿತ್ತು ಎಂಬುದು ಈ ಸಂಘಗಳ ಪದಾಧಿಕಾರಿಗಳ ಒಟ್ಟಭಿಪ್ರಾಯ.
ಎಲ್ಲರೂ ಸೇರಿ ತಾಯಿ ಕನ್ನಡಾಂಬೆಯ ಈ ಕೈಂಕರ್ಯಕ್ಕೆ ಕೈಜೋಡಿಸಿದರೆ ಕಾರ್ಯಕ್ರಮವನ್ನು ಅದ್ಧೂರಿಯಾಗಿಯೇ ಮಾಡಬಹುದಿತ್ತಲ್ಲ, ತಮಿಳು ನೆಲದಲ್ಲಿ ನಮ್ಮ ಕನ್ನಡದ ಪೆರ್ಮೆ ಪ್ರದರ್ಶಿಸಲು, ನಮ್ಮ ಮಣ್ಣಿನ ಸಾಂಸ್ಕೃತಿಕ ವೈಭವ ಪ್ರದರ್ಶಿಸಲು ಅವಕಾಶ ಸಿಗುತ್ತಿತ್ತಲ್ಲ ಎಂಬುದು ಅವರೆಲ್ಲರ ಕೊರಗು.
ಇದೀಗ ಈ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ರೈಲಿನಲ್ಲಿ ಜನ ಬರುತ್ತಾರೆ ಎಂಬ ಮಾಹಿತಿಯಿದೆ. ಸುತ್ತ ರಸ್ತೆಗಳಿಂದ ಆವೃತವಾಗಿರುವ ಈ ಪುಟ್ಟ ಉದ್ಯಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಬರುವುದರಿಂದ ಭದ್ರತಾ ವ್ಯವಸ್ಥೆಯೂ ಹೆಚ್ಚಿರಬೇಕಾಗುತ್ತದೆ. ಹೀಗಾಗಿ, ಇಲ್ಲಿ ಭದ್ರತೆ ಏರ್ಪಡಿಸುವ ಕುರಿತ ಸಮಸ್ಯೆ ಇದೆ ಎಂಬುದು ಅಯನಾವರಂ ಠಾಣೆಯ ಪೊಲೀಸ್ ಅಧಿಕಾರಿ ಪಿ.ಎಡ್ವರ್ಡ್ ನುಡಿ. ಇಕ್ಕಟ್ಟಾದ ರಸ್ತೆಗಳು ಸುತ್ತ ವ್ಯಾಪಿಸಿರುವುದರಿಂದ ಕಾರ್ಯಕ್ರಮಕ್ಕೂ ಸಮಸ್ಯೆಯಾಗಬಹುದು ಎಂಬುದು ಅವರ ಆತಂಕ.
ಅಯನಾವರಂನಲ್ಲಿ ಕನ್ನಡ ಮದ್ರಾಸ್ ಪ್ರೆಸಿಡೆನ್ಸಿ ಕಾಲದಲ್ಲಿ ದಕ್ಷಿಣ ಭಾರತಕ್ಕೆ ಮದ್ರಾಸ್ ರಾಜಧಾನಿಯಾಗಿತ್ತು. ಜನರು ಖರೀದಿಗಾಗಿ ಮದ್ರಾಸ್‌ಗೆ ಬರುತ್ತಿದ್ದರು. ಹಾಗೆ ಬಂದವರು ಉದ್ಯೋಗ ಹಿಡಿದು ನೆಲೆ ನಿಂತಿದ್ದರು. ತಥಾಕಥಿತ ಅಯನಾವರಂ ಪ್ರದೇಶವಿರುವುದು ಚೆನ್ನೈಯ ಜನನಿಬಿಡ ಅಣ್ಣಾನಗರದಿಂದ ನಾಲ್ಕು ಕಿ.ಮೀ. ದೂರದಲ್ಲಿ. ಇದು ವಸತಿ ಪ್ರದೇಶ. 50ರ ದಶಕದಲ್ಲಿ ಮದರಾಸಿನಲ್ಲಿ ರೈಲ್ವೇ ಇಲಾಖೆಯ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಸ್ಥಾಪನೆಯಾಗಿ, ಕರ್ನಾಟಕದಿಂದ ಎಂಜಿನಿಯರುಗಳು, ಕಾರ್ಮಿಕರು ಉದ್ಯೋಗಕ್ಕೆ ಇಲ್ಲೇ ವಲಸೆ ಬಂದಿದ್ದರು. ಹೀಗಾಗಿ ಅಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾದಾಗ ಅಲ್ಲೊಂದು ಕನ್ನಡ ಸಂಘ ಸ್ಥಾಪನೆಯಾಗಿತ್ತು. ಕನ್ನಡಿಗರು ಹೆಚ್ಚೇ ಇದ್ದರು. ಈ ಫ್ಯಾಕ್ಟರಿ ಈಗಲೂ ಇದ್ದರೂ, ದಶಕಗಳ ಹಿಂದೆಯೇ ನೇಮಕಾತಿ ನಿಂತಿದೆ. ಕನ್ನಡಿಗರು ಕೂಡ ಹೆಚ್ಚಿನವರು ವಾಪಸ್ ಹೋಗಿದ್ದಾರೆ.
ಈಗ ಹೆಚ್ಚೆಂದರೆ ಈ ಜನವಸತಿ ಪ್ರದೇಶದಲ್ಲಿ ಏಳೆಂಟು ಕನ್ನಡ ಕುಟುಂಬಗಳಿರಬಹುದು. ಅಲ್ಲಿರುವ ಕನ್ನಡ ಶಾಲೆಯಲ್ಲಿ ಒಂದು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಲಿಯುತ್ತಿದ್ದರೂ, ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಶೇ.10ರಷ್ಟು ಮಾತ್ರ. ಪ್ರಧಾನ ಕಾರಣವೆಂದರೆ, ತಮಿಳುನಾಡಿನಲ್ಲಿ ಐದನೇ ತರಗತಿವರೆಗೆ ತಮಿಳು ಕಡ್ಡಾಯ. ಕನ್ನಡ ಓದಲು-ಬರೆಯಲು ಬಲ್ಲವರ ಸಂಖ್ಯೆ ಕಡಿಮೆ ಎಂಬುದಕ್ಕೆ ಮುಖ್ಯವಾದ ಸೂಚನೆ ದೊರೆಯುವುದು ಅಲ್ಲಿ ಈಗಲೂ ಚಾಲೂ ಸ್ಥಿತಿಯಲ್ಲಿರುವ ಕನ್ನಡ ಗ್ರಂಥಾಲಯದಿಂದ. ಹಿಂದಿನಷ್ಟು ಓದುಗರು ಇಲ್ಲ ಎಂಬುದು ಸಂಘದ ಆಡಳಿತ ಮಂಡಳಿಯ ನುಡಿ. ಕನ್ನಡ ಸಂಘ ಏರ್ಪಡಿಸುವ ಗಣೇಶೋತ್ಸವಕ್ಕೂ ಜನ ಕಡಿಮೆಯಾಗುತ್ತಿರುವುದು ಕನ್ನಡಿಗರ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಸಾಕ್ಷಿ.
ಪ್ರತಿಮೆಗೆ ರಕ್ಷಣೆ: ಈ ಹಿಂದೆಯೇ ಹೇಳಿರುವಂತೆ, ಕರ್ನಾಟಕವು ಎಂದಿಗೂ ಪ್ರತಿಮಾ ಸಂಸ್ಕೃತಿಯನ್ನು ಪೋಷಿಸಿದ್ದಿಲ್ಲ. ಆದರೆ, ಈ ಪ್ರತಿಮೆ ಎಂಬುದು ದೇಶ, ಭಾಷೆ, ಸಂಸ್ಕೃತಿ ಮಾತ್ರವಲ್ಲದೆ ಜನರ ಸ್ವಾಭಿಮಾನದ ಪ್ರತೀಕ ಎಂಬುದಂತೂ ಸತ್ಯ. ಹೀಗಾಗಿ, ಕಾವೇರಿ ವಿವಾದವು ಕಾವೇರಿದರೆ, ಜನರು ಭಾವೋದ್ವೇಗಗೊಳ್ಳುವುದು ಖಚಿತ. ಹೀಗಾಗಿ, ನಾಳೆ ಆ ಪ್ರತಿಮೆಗೆ ಏನಾದರೂ ಆದರೆ, ಪಕ್ಕದಲ್ಲಿನ ಕನ್ನಡ ಸಂಘಕ್ಕೆ, ಕನ್ನಡ ಶಾಲೆಗೆ ಕೆಟ್ಟ ಹೆಸರು ಬರಬಹುದು ಎಂಬ ಆತಂಕವೂ ಇದೆ. ಪ್ರತಿಮೆ ರಕ್ಷಣೆ ಅಥವಾ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಳ್ಳುವ ಸಾಮರ್ಥ್ಯ ಮತ್ತು ಶಕ್ತಿ ನಮಗೆ ಇಲ್ಲ. ಪಾಲಿಕೆಯೇ ಈ ಬಗ್ಗೆ ಜವಾಬ್ದಾರಿ ತೆಗೆದುಕೊಂಡಿರಬಹುದು ಎಂದು ಈಗಾಗಲೇ ಕನ್ನಡ ಸಂಘ ಸ್ಪಷ್ಟಪಡಿಸಿದೆ. ಹೀಗಾಗಿ ಅಯನಾವರಂ ಕನ್ನಡ ಸಂಘದ ಪಕ್ಕದಲ್ಲೇ ಪ್ರತಿಮೆ ಸ್ಥಾಪನೆಯಾಗುತ್ತಿದ್ದರೂ, ಪ್ರತಿಮೆಗೂ ಈ ಸಂಘಕ್ಕೂ ಸಂಬಂಧವಿಲ್ಲದಂತಾಗಿದೆ.
ಪ್ರತಿಮೆಯ ರಕ್ಷಣೆ ಬಗ್ಗೆ ಅಯನಾವರಂ ಠಾಣೆಯ ಪೊಲೀಸ್ ಅಧಿಕಾರಿ ಪಿ.ಎಡ್ವರ್ಡ್ ಅವರನ್ನು ವಿಚಾರಿಸಿದಾಗ, ಸದ್ಯಕ್ಕೆ ಇಬ್ಬರು ಪೊಲೀಸರು ಸರತಿಯಂತೆ ಇಲ್ಲಿ ಕಾವಲಿಗಿದ್ದಾರೆ. ಆಗಸ್ಟ್ 18ರವರೆಗೂ ಈ ವ್ಯವಸ್ಥೆ ಒದಗಿಸಲು ನಮಗೆ ಆದೇಶವಿದೆ. ಆಮೇಲೆ ಏನು ಗೊತ್ತಿಲ್ಲ, ನಮ್ಮ ಮಾಮೂಲಿ ಬೀಟ್ ಪೊಲೀಸರು ಇತ್ತ ಕಡೆ ಕಣ್ಣಿಟ್ಟಿರುತ್ತಾರೆ ಎಂದು ಉತ್ತರಿಸಿದ್ದಾರೆ.
ಅದೇ ರೀತಿ, ಆಮಂತ್ರಣ ಪತ್ರದಲ್ಲಿ ಹೆಸರು ಉಲ್ಲೇಖಿತವಾಗಿರುವ ‘ಸ್ನೇಹ ಸಂಘ’ ಅಧ್ಯಕ್ಷ ಅತ್ತಾವರ ರಾಮದಾಸ್ ಅವರನ್ನು ಮಾತನಾಡಿಸಿದಾಗ, ಪ್ರತಿಮೆ ರಕ್ಷಣೆ ಬಗ್ಗೆ ತಮಿಳುನಾಡು ಸರಕಾರ ಜವಾಬ್ದಾರಿ ವಹಿಸಿಕೊಳ್ಳುತ್ತದೆ ಎಂದಿದ್ದಾರೆ.
ಹದಿಮೂರು ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಜಯಲಲಿತಾರನ್ನು ಭೇಟಿಯಾಗಿ, ಅಂದಿನ ಮದ್ರಾಸ್ ಮೇಯರ್ ಎಂ.ಕೆ.ಸ್ಟಾಲಿನ್ ಅವರ ಮೂಲಕ ಈ ಉದ್ಯಾನದಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪನೆಗೆ ಸ್ಥಳ ಮಂಜೂರು ಮಾಡಿಸಿಕೊಂಡಿರುವುದಾಗಿ ಅವರು ಹೇಳಿದರು. ಅವರು ಅಯನಾವರಂ ಕನ್ನಡ ಸಂಘದ ಮಾಜಿ ಅಧ್ಯಕ್ಷರೂ ಹೌದು.
ಈ ಕಾರ್ಯಕ್ರಮಕ್ಕೆ ಚೆನ್ನೈ ಕನ್ನಡಿಗರಿಗೆ ಆಹ್ವಾನ ತಲುಪಿಲ್ಲವಲ್ಲ ಎಂಬುದಾಗಿ ಪ್ರಶ್ನಿಸಿದಾಗ, ಎಲ್ಲರೂ ಕೈಜೋಡಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಾನೇ ಎಲ್ಲರನ್ನೂ ಕೇಳಿಕೊಂಡಿರುವುದಾಗಿಯೂ, ಈಗಾಗಲೇ ಆಹ್ವಾನ ಪತ್ರಿಕೆಯ ವಿತರಣೆ ನಡೆಯುತ್ತಿದೆ ಎಂದೂ ನುಡಿದರು.
ಈ ಸ್ಥಳದ ಬಗ್ಗೆ ಅನ್ಯ ಕನ್ನಡಿಗರ ಆಕ್ಷೇಪವಿದೆಯಲ್ಲ ಎಂದು ಕೇಳಿದಾಗ, ಇದೊಂದು ಪ್ರಶಾಂತ ವಾತಾವರಣ, ಪಕ್ಕದಲ್ಲೇ ಕನ್ನಡ ಶಾಲೆಯಿದೆ ಎಂದವರು ಉತ್ತರಿಸಿದರು.
ಕೊನೆ ಗುಟುಕು: ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ಆಹ್ವಾನ ಬಂದಿತೇ ಎಂದು ಕೇಳಿದಾಗ, ಇಲ್ಲಿನ ಹಿರಿಯ ಕನ್ನಡಿಗರೊಬ್ಬರು ಆಕ್ರೋಶದಿಂದ ನುಡಿದದ್ದು :
"ಸರ್ವಜ್ಞನ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದಿದ್ರೂ ಹೋಗುತ್ತೇನೆ. ಆದ್ರೆ ನಮ್ಮನ್ನು ಆಳುವವರಿಗೆ ಇಲ್ಲಿರುವ ಹೊರನಾಡ ಕನ್ನಡಿಗರ ಓಟು ಸಿಗುವುದಿಲ್ಲವಲ್ಲ. ಅದಕ್ಕಾಗಿಯೇ ಈ ಉಡಾಫೆ!"
ಹೀಗಿದೆ ಚೆನ್ನೈ ಕನ್ನಡಿಗರ ಈಗಿನ ಸ್ಥಿತಿ-ಗತಿ. ಆದರೆ ರಾಜ್ಯ ಸರಕಾರವೂ ಚೆನ್ನೈ ಕನ್ನಡಿಗರ ಬಗ್ಗೆ ಈ ಬಗೆಗಿನ ಧೋರಣೆ ತಳೆಯಿತೇಕೆ ಎಂಬುದು ಇನ್ನೂ ನಿಗೂಢ.