ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » 'ಕಡಪ್ಪಾಹುಲಿ' ರೆಡ್ಡಿ ಬೆಳೆದು ಬಂದ ಬಗೆ (Rajashekhara Reddy | Andraprdesh | Profile | Pulivendula)
 
WD
ಾ| ಎಡುಗುರಿ ಸಂದಂಟಿ ರಾಜಶೇಖರ ರೆಡ್ಡಿ ಅವರು ಜನಿಸಿದ್ದು ಆಂಧ್ರದ ಕಡಪ ಜಿಲ್ಲೆಯ ಪುಲಿವೆಂದುಲದಲ್ಲಿ. 1949ರ ಜುಲೈ 8ರಂದು ಜನಿಸಿದ ಇವರು ತನ್ನ ಪ್ರಾಥಮಿಕ ಶಿಕ್ಷಣ ಪಡೆದದ್ದು ಪುಲಿವೆಂದುಲದಲ್ಲಿ. ಬಳ್ಳಾರಿಯಲ್ಲಿ ಪ್ರೌಢಶಿಕ್ಷಣ ಮುಗಿಸಿದ ಬಳಿಕ, ವಿಜಯವಾಡದ ಲೋಯೆಲ್ಲಾ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು. ಆನಂತರ ತಮ್ಮ ವೈದ್ಯಕೀಯ ಶಿಕ್ಷಣವನ್ನು ಪಡೆದದ್ದು ಗುಲ್ಬರ್ಗಾ ವಿಶ್ವವಿದ್ಯಾನಿಲಯದಲ್ಲಿ. 1973ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾನಿಲಯದಿಂದ ಅವರು ಎಂಬಿಬಿಎಸ್ ಪದವಿ ಪಡೆದ್ದರು. ಇದಾದ ಬಳಿಕ ತಿರುಪತಿಯ ಎಸ್.ವಿ. ಮೆಡಿಕಲ್ ಕಾಲೇಜಿನಲ್ಲಿ ಹೌಸ್ ಸರ್ಜನ್ ಆಗಿ ಕೆಲ ಕಾಲ ಸೇವೆಸಲ್ಲಿಸಿದ್ದು ಬಳಿಕ ಅಲ್ಲೇ ಹೌಸ್ ಸರ್ಜನ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಕೂಡಾ ಆಯ್ಕೆ ಆಗಿದ್ದರು.

ವಿದ್ಯಾರ್ಥಿಯಾಗಿದ್ದಾಗಲೇ ಅವರು ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಎನ್ಎಸ್‌ಯುಐ ನಾಯಕರಾಗಿದ್ದರು. ರೆಡ್ಡಿಯವರ ತಂದೆಯೂ ರಾಜಕಾರಣಿಯಾಗಿದ್ದು, ರಾಜಕೀಯ ಎಂಬುದು ಅವರ ರಕ್ತದಲ್ಲಿ ಹರಿಯುತ್ತಿದ್ದು, ಇವರ ತಂದೆ ರಾಜಾರೆಡ್ಡಿಯೂ ಖ್ಯಾತ ರಾಜಕಾರಣಿಯಾಗಿದ್ದರು. ಕೌಟುಂಬಿಕ ಕಲಹದಿಂದಾಗಿ ಇವರನ್ನು ಕುಟುಂಬ ಸಮೇತ ಬಾಂಬ್ ಸ್ಫೋಟಿಸಿ ಹತ್ಯೆಮಾಡಲಾಗಿತ್ತು. ಈ ವೇಳೆ ಗುಲ್ಬರ್ಗಾದಲ್ಲಿ ರಾಜಶೇಖರ್ ಅವರು ವಿದ್ಯಾರ್ಥಿಯಾಗಿದ್ದರು.

ರೆಡ್ಡಿ ಅವರು 1978ರಲ್ಲಿ ಪುಲಿವೆಂದುಲ ಕ್ಷೇತ್ರದಿಂದ ಪ್ರಥಮಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸಿ ಗೆಲುವು ಸಾಧಿಸಿದ್ದರು. ಅಲ್ಲಿಂದ ಆರಂಭಗೊಂಡ ಅವರ ರಾಜಕೀಯ ಜೈತ್ರ ಯಾತ್ರೆಯು 02.09.09ರಂದು ದುರಂತ ಅಂತ್ಯ ಕಂಡಿತು.

ರೆಡ್ಡಿಅವರು 1980ರಿಂದ 1983ರ ತನಕ ಆಂಧ್ರಪ್ರದೇಶದ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಎರಡು ಬಾರಿ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದರು. ಬಳಿಕ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಿದ್ದರು. ಕಡಪ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಿದ್ದ ಅವರು ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದರು.

ಇದಾದ ಬಳಿಕ ಅವರು ಮತ್ತೆ ಮರಳಿ ರಾಜ್ಯ ರಾಜಕಾರಣಕ್ಕೆ ಮರಳಿದರು.64 ದಿನಗಳ ಕಾಲ ಅವರು ರಾಜ್ಯಾದ್ಯಂತ 1,500 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದು ಜನರ ನಾಡಿಮಿಡಿತ ಅರಿತಿದ್ದರು. ಆ ವೇಳೆ ಅವರು ಜನರಿಂದ ದೂರುಗಳ ಅರ್ಜಿಯನ್ನ ಪಡೆದಿದ್ದು ಇದರಲ್ಲಿ ಹೆಚ್ಚಿನವು ಕೃಷಿ ಸಮಸ್ಯೆ ಹಾಗೂ ನಿರುದ್ಯೋಗಕ್ಕೆ ಸಂಬಂಧಿಸಿದವುಗಳಾಗಿದ್ದವು. ಹಿಂದುಳಿದ ಪ್ರದೇಶಗಳ, ಹಳ್ಳಿಗಾಡುಗಳ ಕುರಿತ ಸ್ಥಿತಿಗತಿಯನ್ನು ಅರಿತು, ಜನರ ಸಮಸ್ಯೆಗಳನ್ನು ತಿಳಿಯುವುದು ಅವರ ಉದ್ದೇಶವಾಗಿತ್ತು. ಅಪಾರ ಜನಬೆಂಬಲ ಗಳಿಸಿದ್ದ ಅವರು ಮತ್ತೆ ಅಂಧ್ರದಲ್ಲಿ ಕಾಂಗ್ರೆಸ್ಸನ್ನು ಮರಳಿಗೆ ಹಳಿಗೆ ತರುವಲ್ಲಿ ಯಶಸ್ವಿಯಾಗಿದ್ದರು.

ಗೆದ್ದು ಬಂದಲ್ಲಿ ಉಚಿತವಾಗಿ ಬಣ್ಣದ ಟಿವಿಯನ್ನು ವಿತರಿಸುತ್ತೇನೆಂಬ ಬಣ್ಣದ ಮಾತಿಲ್ಲದೆ, ಕಂತೆಕಂತೆ ನೋಟುಗಳನ್ನು ಹಂಚದೆ, ಸಿನಿಮಾ ತಾರೆಯರ ಗ್ಲಾಮರ್ ಅನ್ನು ಬಹಳಸಿಕೊಳ್ಳದೆಯೇ ಚುನಾವಣಾ ಕಣಕ್ಕಿಳಿದಿದ್ದ ಕಡಪ್ಪಾ ಹುಲಿ ತಾನು ಗೆಲ್ಲುವುದು ಮಾತ್ರವಲ್ಲದೇ ತನ್ನ ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದಿದ್ದರು. ಅವರ ಜನಪ್ರಿಯತೆಯೇ ಅವರನ್ನು ಮರಳಿ ಮುಖ್ಯಮಂತ್ರಿ ಸ್ಥಾನಕ್ಕೆ ತಂದಿತ್ತು. ತಾನು ಸ್ಫರ್ಧಿಸಿದ್ದ ಚುನಾವಣೆಗಳಲ್ಲಿ ಅವರು ಎಂದಿಗೂ ಸೋಲನ್ನಪ್ಪಿರಲಿಲ್ಲ. ಐದು ಬಾರಿ ಶಾಸಕರಾಗಿ ಮತ್ತು ನಾಲ್ಕು ಬಾರಿ ಸಂಸದರಾಗಿ ಅವರು ಆಯ್ಕೆಯಾಗಿದ್ದರು.

2004ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿಯ ಚಂದ್ರಬಾಬು ನಾಯ್ಡು ಅವರಿಂದ ಅಧಿಕಾರ ಕಸಿಯುವಲ್ಲಿ ಯಶಸ್ವಿಯಾಗಿದ್ದರು. ತನ್ನ ಅಧಿಕಾರಾವಧಿಯಲ್ಲಿ ಮಾಡಿದ್ದ ಜನಪರ ಕಾರ್ಯಗಳಿಂದಾಗಿ ಅವರು 2009ರ ಚುನಾವಣೆಯಲ್ಲೂ ಗೆದ್ದು ಬಂದಿದ್ದು ದ್ವಿತೀಯ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ರೈತರಿಗೆ ಉಚಿತ ವಿದ್ಯುತ್, ಸಾಲ ಮನ್ನ ಇವುಗಳಲ್ಲಿ ಪ್ರಮುಖವಾದವು. ಇದಲ್ಲದೆ, ವಿಧವಾ ವೇತನ, ವೃದ್ಧಾಪ್ಯವೇತನ, ಆಂಗವಿಕಲರಿಗೆ ವೇತನ, ಬಡವರಿಗೆ ನಿವಾಸ, ಎರಡು ರೂಪಾಯಿಗೆ ಕೆಜಿ ಅಕ್ಕಿ,ಸಮುದಾಯ ಆರೋಗ್ಯ ವಿಮೆ ಹಾಗೂ ನಿರಾವರಿ ಯೋಜನೆಗಳು ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತ್ತು.

ಅಸಂಖ್ಯ ಹೋರಾಟಗಳನ್ನು ಮಾಡಿದ್ದ ಅವರು ಆಂಧ್ರದ ಮುಖ್ಯಮಂತ್ರಿ ಗದ್ದುಗೆ ಏರಿದ್ದ ಮೇಲೆ ಹಲವಾರು ಜನಪರ ಕಾರ್ಯಗಳನ್ನು ಜಾರಿಗೆ ತಂದಿದ್ದು, ಜನಸಾಮಾನ್ಯರ ಕಣ್ಮಣಿಯಾಗಿದ್ದರು.

ಚಿತ್ತೂರಿನಲ್ಲಿ ಅಭಿವೃದ್ದಿ ಕಾರ್ಯಕ್ರಮಕ್ಕೆ ಓಣಂ ಹಬ್ಬದ ದಿನವಾದ ಬುಧವಾರದಂದು ಪ್ರಯಾಣಿಸುತ್ತಿದ್ದ ವೇಳೆ ಹಾದಿಮಧ್ಯದಲ್ಲಿ ಹೆಲಿಕಾಫ್ಟರ್ ಅಪಘಾತಕ್ಕೀಡಾಗಿ ಇತರ ನಾಲ್ವರೊಂದಿಗೆ ತನ್ನ ಜೀವನದ ದುರಂತ ಅಂತ್ಯ ಕಂಡಿದ್ದಾರೆ.


ವಿದ್ಯಾಲಕ್ಷ್ಮಿಯವರನ್ನು ವಿವಾಹವಾಗಿದ್ದ ರೆಡ್ಡಿ ದಂಪತಿಗಳಿಗೆ ಇಬ್ಬರು ಮಕ್ಕಳು. ಒಂದು ಗಂಡು ಹಾಗೂ ಒಂದು ಹೆಣ್ಣು. ಇವರ ಪುತ್ರ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಅವರೂ ರಾಜಕಾರಣಿಯಾಗಿದ್ದು ಕಡಪ್ಪ ಕ್ಷೇತ್ರದ ಸಂಸದರಾಗಿದ್ದಾರೆ. ಶರ್ಮಿಳಾ ಇವರ ಪುತ್ರಿಯ ಹೆಸರು.

ಕರ್ನಾಟಕದ ರೆಡ್ಡಿಗಳಿಗೆ ನಿಕಟ
ಆಂಧ್ರ ಮುಖ್ಯಮಂತ್ರಿಯಾಗಿದ್ದ ರಾಜಶೇಖರ ರೆಡ್ಡಿ ಅವರು ಕರ್ನಾಟಕದ ರಾಜಕೀಯದಲ್ಲಿ ಪ್ರಭಾವೀ ಪಾತ್ರ ಹೊಂದಿರುವ ರೆಡ್ಡಿ ಸಹೋದರರಿಗೂ ನಿಕಟವಾಗಿದ್ದರು. ಆಂಧ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ವೇಳೆ ಕರ್ನಾಟಕ ಪ್ರವಾಸೋದ್ಯಮ ಸಚಿವರಾಗಿದ್ದ ಜನಾರ್ದನ ರೆಡ್ಡಿ ಸಮಾರಂಭದಲ್ಲಿ ರಾಜರಿದ್ದರು.
ಸಂಬಂಧಿತ ಮಾಹಿತಿ ಹುಡುಕಿ