ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ವೆಬ್‌ದುನಿಯಾ: 10 ವರ್ಷಗಳ ಪರಿಶ್ರಮದ ಹಾದಿ (Webdunia Celebrates 10 Years in Online)
 
Webdunia
WD
ಆತ್ಮೀಯ ಓದುಗ ಸನ್ಮಿತ್ರರೇ,
ನಿಮ್ಮೆಲ್ಲರ ಒಲುಮೆ ಗಳಿಸಿರುವ ವೆಬ್‌ದುನಿಯಾಕ್ಕೆ ಈಗ 10ರ ಹರೆಯ ಎಂದು ತಿಳಿಸಲು ಸಂತೋಷಿಸುತ್ತೇವೆ. ಅಚ್ಚರಿ ಬೇಡ. ಕನ್ನಡ ಸೇವೆಗೆ ಕಾಲಿರಿಸಿ ಬಂದು ಎರಡು ವರ್ಷಗಳಾಯಿತಾದರೂ, ವೆಬ್‌ದುನಿಯಾದ ಹಿಂದಿ ಪೋರ್ಟಲ್ ಜನಿಸಿದ್ದು ದಶಕದ ಹಿಂದೆ.

1999ರ ಸೆಪ್ಟೆಂಬರ್ 22ರಂದು 'ವೆಬ್‌ದುನಿಯಾ' ಹಿಂದಿಯ ಪ್ರಥಮ ಅಂತರಜಾಲ ಪೋರ್ಟಲ್ ಎಂಬ ಹೆಗ್ಗಳಿಕೆಯೊಂದಿಗೆ ಕಣ್ಣು ತೆರೆಯಿತು, ಆ ಕಣ್ಣುಗಳ ಮುಂದಿತ್ತು ನೂರಾರು ಕನಸುಗಳು, ಮಹತ್ವಾಕಾಂಕ್ಷೆಗಳು ಮತ್ತು ಸಾಧ್ಯತೆಗಳು. ಅಲ್ಲಿ ಶಂಕೆ ಮತ್ತು ಆತಂಕಕ್ಕೆ ಎಡೆಯಿರಲಿಲ್ಲ, ಆದರೆ ಆತ್ಮವಿಶ್ವಾಸ ಮತ್ತು ಯಾವುದೇ ಪರಿಸ್ಥಿತಿ ಬಂದರೂ ಸಮರ್ಥವಾಗಿ ಎದುರಿಸುವ ಸಾತ್ವಿಕ ಚಿಂತನೆಯ ಚಿಲುಮೆಯಿತ್ತು. ಯೋಜನೆ-ಯೋಚನೆಗಳು ಸಾಕಷ್ಟಿದ್ದವು, ಮಾರ್ಗಗಳು ಕೂಡ ನೂರಾರಿದ್ದವು. ಆ ದಾರಿಯಲ್ಲಿ ಸಾಗಿದ ಪರಿಣಾಮ ಇಂದು ನಿಮ್ಮ ಮುಂದೆ 8 ಸಹೋದರರೊಂದಿಗೆ (ಹಿಂದಿ, ತಮಿಳು, ಮಲಯಾಳ, ತೆಲುಗು, ಮರಾಠಿ, ಬಂಗಾಳಿ, ಪಂಜಾಬಿ, ಗುಜರಾತಿ ಪೋರ್ಟಲ್‌ಗಳೊಂದಿಗೆ) ಕನ್ನಡದ ಕಂದನೂ ಜತೆಗಿದ್ದಾನೆ.

ಇಂದು ವೆಬ್‌ದುನಿಯಾ ಭಾರತದ 9 ಭಾಷೆಗಳಲ್ಲಿಯೂ ತಳವೂರುತ್ತಿದೆ. ಶೈಲಿ, ವಿಷಯವಸ್ತು ಮತ್ತು ವಿವಿಧತೆಯಲ್ಲಿಯೂ ವೆಬ್‌ದುನಿಯಾ ವಿಶಿಷ್ಟವಾಗಿ ಅಂತರಜಾಲ ಲೋಕದಲ್ಲಿ ಗರ್ವದಿಂದಲೇ ಎದ್ದುನಿಂತಿದೆ. ಈ ವೆಬ್‌ದುನಿಯಾ ರೂಪುಗೊಳ್ಳುವಲ್ಲಿ ಅಸಂಖ್ಯ ಸವಾಲುಗಳು ಎದುರಾಗಿದ್ದವು.

ಭರಪೂರ ಇಂಟರ್ನೆಟ್ ಟೂಲ್ (ಅಂತರಜಾಲ ಪರಿಕರ)ಗಳೊಂದಿಗೆ ಕೋಟ್ಯಂತರ ಭಾರತೀಯ ಓದುಗರ ಓದಿನ ಹಸಿವು ನೀಗಿಸುವ, ಅವರ ಬೌದ್ಧಿಕ ಚಿಂತನೆಯನ್ನು ಚೇತರಿಸುವ ಕ್ಷಮತೆ ಹೊಂದಿದೆ ವೆಬ್‌ದುನಿಯಾ. ಆಯಾ ಮಾತೃಭಾಷೆಗಳಲ್ಲಿ ಜನರು ಓದುವಂತೆ ಮಾಡಿರುವಲ್ಲಿ, ಮತ್ತು ಅಂತರಜಾಲದಲ್ಲಿ ಸುಲಲಿತವಾಗಿ ಬರೆಯುವಂತೆ ಮಾಡಿಸುವಲ್ಲಿಯೂ ವೆಬ್‌ದುನಿಯಾ ಮಹತ್ತರ ಪಾತ್ರ ವಹಿಸಿದೆ ಎಂಬುದನ್ನು ಇಲ್ಲಿ ಹೇಳಲೇಬೇಕು.

ದೇಶದಲ್ಲಿ ಜನತೆ ಹೆಚ್ಚು ಹೆಚ್ಚು ಅಂತರಜಾಲ-ಪ್ರಿಯರಾಗುತ್ತಿರುವಂತೆ ಮತ್ತು ಆಧುನಿಕ ಸೌಲಭ್ಯ, ತಂತ್ರಜ್ಞಾನಗಳೂ ವಿಸ್ತರಿಸತೊಡಗಿರುವಂತೆ, ಅವರಿಗೆ ಅವರದೇ ಆದ ಭಾಷೆಯಲ್ಲಿ ವಿಷಯ-ಸಾಮಗ್ರಿಗಳನ್ನು ಒದಗಿಸಬೇಕೆಂಬ ಅನಿವಾರ್ಯತೆಯಿತ್ತು. ಒಂದು ಕಾಲದಲ್ಲಿ ಅಂತರಜಾಲವು ಆಂಗ್ಲ ಭಾಷೆಯದೇ ಸೊತ್ತು ಎಂಬ ಸ್ಥಿತಿಯಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ.

ಸಂವಹನಕ್ಕೆ ಅಂತರಜಾಲವೆಂಬುದು ಅತ್ಯಂತ ಸುಲಭ ಮಾಧ್ಯಮವೆಂಬುದು ಖಚಿತವಾಗುತ್ತಿದ್ದಂತೆಯೇ, ಈ ಮಾಧ್ಯಮವನ್ನು ದೇಶದ ಪ್ರತಿಯೊಬ್ಬರಿಗೂ ತಲುಪಿಸಬೇಕಿದ್ದರೆ ಭಾರತೀಯ ಭಾಷೆಗಳ ಬಳಕೆ ಅತ್ಯಂತ ಮಹತ್ವಪೂರ್ಣವಾಗುತ್ತದೆ ಎಂಬೊಂದು ಕಲ್ಪನೆ ಮೂಡಿತು. ಇದೀಗ ವೆಬ್‌ದುನಿಯಾ ಪೋರ್ಟಲ್‌ಗಳು ಭಾರತದಲ್ಲಿ ಮಾತ್ರವೇ ಅಲ್ಲದೆ, ಹೊಟ್ಟೆಪಾಡಿಗಾಗಿ ವಿದೇಶದಲ್ಲಿ ಉದ್ಯೋಗವರಸಿ ಹೋದ ಭಾರತೀಯರ ಮೂಲಕ ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ.

ಇಷ್ಟು ಮಾತ್ರವೇ ಅಲ್ಲ, ವೆಬ್‌ದುನಿಯಾ ಮಾಧ್ಯಮದ ಮೂಲಕ ವಿದೇಶೀ ಭಾಷೆಯ ವಿಷಯಗಳನ್ನು ಸ್ಥಳೀಕರಣಗೊಳಿಸುವ ವಿಚಾರವೊಂದೂ ಮೊಳಕೆಯೊಡೆಯಿತು. ಅಂದರೆ, ವಿದೇಶೀ ಭಾಷೆಯ ವಿಷಯ ಸಾಮಗ್ರಿಗಳನ್ನು ಭಾರತೀಯ ಭಾಷೆಗೆ ತರ್ಜುಮೆಗೊಳಿಸುವುದು. ಈ ನಿಟ್ಟಿನಲ್ಲಿ ವೆಬ್‌ದುನಿಯಾ ಪ್ರಯತ್ನ ಅತ್ಯಂತ ಸಾರ್ಥಕವಾಗಿದೆ.

ತಂತ್ರಜ್ಞಾನದ ಭಾಷಾಂತರ ಮಾತ್ರವಲ್ಲದೆ, ಮೊಬೈಲ್ ಕ್ಷೇತ್ರದಲ್ಲಿಯೂ ಜನಪ್ರಿಯವಾಗುತ್ತಿರುವ ಸ್ಥಳೀಯ ಭಾಷಾ ವ್ಯವಸ್ಥೆಗಳನ್ನು ವೆಬ್‌ದುನಿಯಾ ಮಾಡಿಕೊಡುತ್ತಿರುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಸಂದೇಶ ಸೇವೆಗಳು, ಎಸ್ಎಂಎಸ್ ಸೌಲಭ್ಯಗಳೊಂದಿಗೆ, ಬ್ಲಾಗ್, ಪ್ರಶ್ನೋತ್ತರ, ಕ್ಲಾಸಿಫೈಡ್ಸ್, ಗೇಮ್ಸ್, ಇ-ಮೇಲ್, ಶುಭಾಶಯ ಪತ್ರಗಳು, ಕ್ರಿಕೆಟ್ ಸ್ಕೋರ್ ಕಾರ್ಡ್, ದಿನ ಭವಿಷ್ಯ, ರಸಪ್ರಶ್ನೆ, ಜ್ಯೋತಿಷ್ಯ ಸೇವೆ ಮುಂತಾದವುಗಳ ಭರಪೂರ ಸೌಕರ್ಯಗಳು ಭಾರತೀಯ ಭಾಷೆಗಳಲ್ಲಿ ಲಭ್ಯವಾಗುತ್ತಿರುವುದು ಬೇರೆಲ್ಲೂ ಇಲ್ಲ ಎಂಬ ಹೆಗ್ಗಳಿಕೆ ನಮ್ಮದು. ಹೀಗಾಗಿ ಅಂತರಜಾಲ ಕ್ಷೇತ್ರದಲ್ಲಿ ವೆಬ್‌ದುನಿಯಾ ಅನನ್ಯವಾದ ಹೆಸರು ಗಳಿಸಿಕೊಂಡಿದೆ.

ಸಮಗ್ರ ಪೋರ್ಟಲ್
ವೆಬ್‌ದುನಿಯಾ ಒಂದು ಪರಿಪೂರ್ಣ ಪೋರ್ಟಲ್ ರೂಪದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ವಿಶೇಷವಾಗಿ ವಿದೇಶದಲ್ಲಿ ನೆಲೆಸಿರುವ ಭಾರತೀಯರು ತಮ್ಮದೇ ಭಾಷೆಯಲ್ಲಿ ಪೋರ್ಟಲ್ ನೋಡಿದರೆ, ಅವರಿಗಾಗುವ ಆನಂದ ಅಷ್ಟಿಷ್ಟಲ್ಲ, ಅದನ್ನು ಅನುಭವಿಸಿಯೇ ತೀರಬೇಕು. ರಾಷ್ಟ್ರೀಯ, ಸ್ಥಳೀಯ, ಅಂತಾರಾಷ್ಟ್ರೀಯ ಸುದ್ದಿಗಳಿಂದ ಕ್ರೀಡಾ ತುಣುಕುಗಳವರೆಗೆ, ಮಹಿಳೆ, ಸಾಹಿತ್ಯ, ಆರೋಗ್ಯ, ಜ್ಯೋತಿಷ್ಯ, ಸಿನಿಮಾ... ಹೀಗೆ ವೆಬ್‌ದುನಿಯಾದ ಕೊಡುಗೆಗಳ ಪಟ್ಟಿ ಬೆಳೆಯುತ್ತಲೇ ಇದೆ.

ಅಲ್ಲದೆ ಸಾಂದರ್ಭಿಕವಾಗಿ, ವಿಶೇಷ ಘಟನೆಗಳು, ಉತ್ಸವಗಳು, ಸಡಗರದ ದಿನಗಳಿಗೆ ವಿಶೇಷ ಪುಟಗಳನ್ನು ಕೂಡ ಸಿದ್ಧಪಡಿಸಲಾಗುತ್ತಿದೆ. ಜ್ಯೋತಿಷ್ಯದ ಚಾನೆಲ್‌ಗೆ ಹೋದರೆ ಅಲ್ಲಿ ನಿಮ್ಮ ಜನ್ಮ ಕುಂಡಲಿ ರಚಿಸಬಹುದು, ಜಾತಕ ಹೋಲಿಕೆ ನೋಡಬಹುದು ಮತ್ತು ಭವಿಷ್ಯ ತಿಳಿದುಕೊಳ್ಳಬಹುದು.

ಪೋರ್ಟಲ್ ರೂಪದಲ್ಲಿರುವ ವೆಬ್‌ದುನಿಯಾದಲ್ಲಿ ಸಾಕಷ್ಟು ಚಾನೆಲ್‌ಗಳಿವೆ ಮತ್ತು ಹೊಸ ಚಾನೆಲ್‌ಗಳ ಸೇರ್ಪಡೆಯೂ ಆಗುತ್ತಿರುತ್ತದೆ. ವಿಭಿನ್ನ ಓದುಗರ ಭಿನ್ನ ಭಿನ್ನ ಅಭಿರುಚಿಗೆ ತಕ್ಕಂತೆ ಇವುಗಳನ್ನು ರೂಪಿಸಲಾಗಿದೆ. ತಾಜಾ ಸುದ್ದಿಗಳನ್ನು ಒದಗಿಸುತ್ತಿರುವುದಷ್ಟೇ ಅಲ್ಲದೆ, ಬಹಮುಖ್ಯವಾದ ಮಾಹಿತಿಗಳನ್ನೂ ಓದುಗರಿಗೆ ಒದಗಿಸುತ್ತಿದೆ. ವರ್ತಮಾನ ಕಾಲದಲ್ಲಿ ಇಂಟರ್ನೆಟ್ ಬಳಕೆ ಮತ್ತು ಬೆಳವಣಿಗೆ ಹೆಚ್ಚಾಗುತ್ತಿರುವಂತೆಯೇ ಅದರೊಂದಿಗೆ ಹೆಜ್ಜೆ ಹಾಕಲು ವೆಬ್‌ದುನಿಯಾ ಕೂಡ ಪೂರ್ಣರೂಪದಲ್ಲಿ ಸಿದ್ಧವಾಗಿದೆ.

ಯಾವುದೇ ಪತ್ರಿಕೆಯ ಅಂತರಜಾಲ ಆವೃತ್ತಿಗಿಂತ ಪೋರ್ಟಲ್ ಭಿನ್ನ, ಇಲ್ಲಿ ಸುದ್ದಿ ಮತ್ತು ವಿಶೇಷ ಲೇಖನಗಳನ್ನು ಯಾವುದೇ ಸಮಯದಲ್ಲಿ ಬದಲಾಯಿಸಬಹುದು, ಹೊಸ ಮಾಹಿತಿ ಸೇರಿಸಬಹುದು, ಒಟ್ಟಿನಲ್ಲಿ ಬದಲಾವಣೆಯೊಂದಿಗೆ 'ಅಪ್‌ಡೇಟ್' ಆಗಿರಬಹುದು. ಪರಿಷ್ಕೃತ ಸುದ್ದಿ ಕೊಡುವುದು ಸುಲಭ, ಆದರೆ ಇಲ್ಲಿ ಸಂಪಾದಕರ ಹೊಣೆಗಾರಿಕೆ ಹೆಚ್ಚು.

Webdunia
WD
ಪತ್ರಿಕೆಗಳಂತಲ್ಲದ ಪೋರ್ಟಲ್ ಓದುಗರ ವ್ಯಾಪ್ತಿ ಒಂದು ದೇಶಕ್ಕೆ ಯಾ ಪ್ರದೇಶಕ್ಕೆ ಸೀಮಿತವಾಗಿಲ್ಲ. ವಿದೇಶದಲ್ಲಿಯೂ ಓದುಗರಿರುತ್ತಾರೆ. ಇಲ್ಲಿ ಸಂಪಾದಕರು ಸ್ಥಳೀಯ ಓದುಗರು ಮಾತ್ರವಲ್ಲದೆ ಸಪ್ತ ಸಮುದ್ರದಾಚೆಗಿರುವ ಓದುಗರ ಮನಸ್ಥಿತಿಯೊಂದಿಗೆ ಅವರ ಅಭಿರುಚಿಯನ್ನೂ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹೀಗಾಗಿ ವೆಬ್‌ದುನಿಯಾದ ಧ್ಯೇಯಮಂತ್ರವೆಂದರೆ Think Locally and Act Globally.

ಬ್ಲಾಗ್: ಇದೀಗ ಪ್ರತಿಯೊಬ್ಬ ಓದುಗರೂ ತಮ್ಮದೇ ಆದ ಪುಟ್ಟ ಅಂತರಜಾಲ ತಾಣವೊಂದನ್ನು ಉಚಿತವಾಗಿ ತಮ್ಮದಾಗಿಸಿಕೊಳ್ಳುವ ಸೌಲಭ್ಯ ಜನಪ್ರಿಯವಾಗುತ್ತಿದೆ. ಇದಕ್ಕಾಗಿಯೇ ರೂಪುಗೊಂಡಿರುವುದು ಮೈ-ವೆಬ್‌ದುನಿಯಾ ಎಂಬ ಬ್ಲಾಗ್ ತಾಣ. ಇದರ ಸದುಪಯೋಗವನ್ನು ಯಾರು ಕೂಡ ಉಚಿತವಾಗಿಯೇ ಪಡೆದುಕೊಳ್ಳಬಹುದಾಗಿದೆ.

ವಿಶ್ವಾದ್ಯಂತ ಇಂಟರ್ನೆಟ್ ಬಳಕೆದಾರರ ಸಂಖ್ಯೆ ವೃದ್ಧಿಯಾಗುತ್ತಲೇ ಇದೆ. ಈಗಂತೂ ಭಾರತದ ಹಳ್ಳಿ ಹಳ್ಳಿಗಳಿಗೂ ಅಂತರಜಾಲವು ತನ್ನ ಜಾಲವನ್ನು ವಿಸ್ತರಿಸಿದೆ. ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಅದರಲ್ಲಿನ ಸಾಧ್ಯತೆಗಳ ಕ್ಷೇತ್ರವೂ ವಿಸ್ತಾರವಾಗತೊಡಗಿದೆ. ಈ ಸಾಧ್ಯತೆಗಳಿಗೆಲ್ಲಾ ಪೂರಕವಾಗಿ ಸ್ಪಂದಿಸುತ್ತಲೇ ವೆಬ್‌ದುನಿಯಾ ಕೂಡ ದಾಪುಗಾಲಿಡುತ್ತಿದೆ. ಮಧ್ಯಪ್ರದೇಶದ ಪ್ರಧಾನ ಮತ್ತು ಪ್ರಖ್ಯಾತ ಹಿಂದಿ ದೈನಿಕ 'ನಯೀ ದುನಿಯಾ'ದ ಆರು ದಶಕಗಳಿಗೂ ಹೆಚ್ಚು ಅನುಭವದ ಧಾರೆಯಡಿ ಈ ವೆಬ್‌ದುನಿಯಾ ರೂಪುಗೊಂಡು ಮುನ್ನಡೆಯುತ್ತಿದೆ.

ವೆಬ್‌ದುನಿಯಾ ಓದುಗರು ಹಾಗೂ ಇತರ ಸೇವೆಗಳ ಬಳಕೆದಾರರಿಂದ ಬರುವ ಅಸಂಖ್ಯ ಇ-ಮೇಲ್‌ಗಳು ಮತ್ತಷ್ಟು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಲು, ನಿಮ್ಮ ಅಭಿರುಚಿಗೆ ತಕ್ಕಂತೆ ಸ್ಪಂದಿಸಲು ನಮಗೆ ಟಾನಿಕ್ ಇದ್ದಂತೆ. ಅಂತರಜಾಲದಲ್ಲಿ ಕನ್ನಡದ ಕಂಪು ಹರಡುವ ನಮ್ಮ ಪ್ರಯತ್ನಕ್ಕೆ ದನಿಗೂಡಿಸಿರುವ ನೀವು ಕೂಡ ಕನ್ನಡದ ಉತ್ತರೋತ್ತರ ಪ್ರಗತಿಯ ಶ್ರೇಯಸ್ಸಿಗೆ ಬಾಧ್ಯರು. ಕನ್ನಡ ಪೋರ್ಟಲ್ ಆರಂಭವಾಗಿ ಎರಡು ವರ್ಷಗಳಷ್ಟೇ ಕಳೆದಿದೆ. ಈ ಅವಧಿಯಲ್ಲಿ ನೀವು ಚಾಚಿದ ಸ್ನೇಹ ಸಂಬಂಧ ಇದೇ ರೀತಿ ಮುಂದುವರಿಯಲಿ,

ನಿಮಗೆಲ್ಲರಿಗೂ ಶುಭಾಕಾಂಕ್ಷೆಗಳು. . - ಸಂಪಾದಕರು

(ಈ ಪೋರ್ಟಲನ್ನು ಸ್ವಚ್ಛವಾಗಿ, ಸುಂದರವಾಗಿ ಇರಿಸುವ ಬಗೆಗಿನ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ. ಸಂಪಾದಕರ ಇ-ಮೇಲ್ ವಿಳಾಸ: [email protected] . ಕಾಮೆಂಟ್ ವಿಭಾಗವನ್ನೂ ಸಭ್ಯವಾಗಿರಿಸಲು ಕೈಜೋಡಿಸಿ - ಕ್ಲಿಕ್ ಮಾಡಿ . )

ಇವನ್ನೂ ಓದಿ:
ಕನ್ನಡದಲ್ಲಿ ಕಾಮೆಂಟ್ ಬರೆಯೋದು ಹೇಗೆ? ಇಲ್ಲಿ ಕ್ಲಿಕ್ ಮಾಡಿ.
ಸಂಬಂಧಿತ ಮಾಹಿತಿ ಹುಡುಕಿ