ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ವೆಬ್‌ದುನಿಯಾ ಓದುಗರೇ! ಇಲ್ಲೊಮ್ಮೆ ಓದಿ ನೋಡಿ! (Webdunia Kannada | Commenting Policy)
ಅವಿನಾಶ್ ಬಿ.
ವೆಬ್‌ದುನಿಯಾ ಕನ್ನಡದ ಆತ್ಮೀಯ ಓದುಗರೇ,
WD


ನಿಮ್ಮೆಲ್ಲರ ಕುತೂಹಲಗಳನ್ನು, ಸುದ್ದಿಯ ಹಸಿವನ್ನು ನೀಗಿಸುವತ್ತ ಶ್ರಮಿಸುತ್ತಿರುವ ವೆಬ್‌ದುನಿಯಾ (http://kannada.webdunia.com/) ಕನ್ನಡ ಅಂತರಜಾಲ ತಾಣವು ಈಗಾಗಲೇ ನಾಲ್ಕು ವರ್ಷಗಳನ್ನು ದಾಟಿ ಐದರ ಹರೆಯಕ್ಕೆ ಕಾಲಿಟ್ಟಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಆನ್‌ಲೈನ್ ಕನ್ನಡಿಗರು ನಮ್ಮ ವಿನ್ಯಾಸಗಳಲ್ಲಿ ಬದಲಾವಣೆ ಮಾಡಲು ಸಲಹೆ ನೀಡಿದ್ದು, ನಮ್ಮನ್ನು ಪ್ರೋತ್ಸಾಹಿಸಿದ್ದು, ಬೆಳೆಸಿದ್ದು... ಇದೇನೂ ಸಣ್ಣ ಸಂಗತಿಯಲ್ಲ. ನಿಮ್ಮೆಲ್ಲರ ಅಭಿಮಾನಕ್ಕೆ, ಆದರಕ್ಕೆ ನಾವು ಕೃತಜ್ಞರು.

ಈ ಹಂತದಲ್ಲಿ, ವೆಬ್‌ದುನಿಯಾ ಓದುಗರಲ್ಲಿ ಒಂದು ಅರಿಕೆಯಿದೆ. ನಾವೆಲ್ಲರೂ ಕನ್ನಡ ಭಾಷೆ ಕಲಿತದ್ದು, ನಮ್ಮ ಮಾತೃಭಾಷೆ ಎಂಬೊಂದು ಅಭಿಮಾನದಿಂದ ಮಾತ್ರವಷ್ಟೇ ಅಲ್ಲ; ಅದು ನಮ್ಮ ಉಸಿರು, ಅದು ನಮ್ಮ ಸಂಸ್ಕೃತಿ ಮತ್ತು ಅದು ನಮ್ಮ ಜೀವನದ ಅಂಗವೆಂಬ ಕಾರಣಕ್ಕೆ. ಜಗತ್ತಿನಲ್ಲಿ ಇಂಥದ್ದೊಂದು ಅತ್ಯಂತ ಸುಂದರವಾದ, ಆತ್ಮೀಯವಾದ ಭಾಷೆಯನ್ನು ಹಾಳು ಮಾಡುವುದು ನಮಗೆ, ನಮ್ಮ ಮಾತೃಸಮಾನವಾದ ಭಾಷೆಗೆ, ಕನ್ನಡ ದೇಶಕ್ಕೆ ಮಾಡುವ ಅವಮಾನವಲ್ಲವೇ? ವೆಬ್‌ದುನಿಯಾದ ಚರ್ಚಾ ವೇದಿಕೆಗಳಲ್ಲಿ ಹೀಗಾಗುತ್ತಿರುವುದು ಹೌದು ಅಂತ ಅನ್ನಿಸಿದರೆ, ಮುಂದೆ ಓದಿ.

ನೀವೇ ನೋಡಿರಬಹುದು. ನಮ್ಮ ನಿಮ್ಮೆಲ್ಲರ ಪ್ರೀತಿಯ ವೆಬ್‌ದುನಿಯಾ ನಿಮಗೆ ಈ ದೇಶದ, ರಾಜ್ಯದ ವಿದ್ಯಮಾನಗಳು, ಪರಿಸ್ಥಿತಿಗಳ ಬಗ್ಗೆ ಚರ್ಚಿಸಲೆಂದು ಅಮೂಲ್ಯವಾದ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಕನ್ನಡ ಟೈಪಿಂಗ್ ಬಾರದವರಿಗೂ ಸುಲಭವಾಗಿ ಟೈಪ್ ಮಾಡಿ, ಕನ್ನಡದಲ್ಲೇ ನಿಮ್ಮ ಕಾಮೆಂಟ್ ಹಾಕಲು, ಅಭಿಪ್ರಾಯಗಳನ್ನು ಹಂಚಿಕೊಳ್ಳಲು, ಚರ್ಚಿಸಲು, ಮತ್ತು ಹೊಸ ಹೊಸ ಸಂಗತಿಗಳನ್ನು ತಿಳಿದುಕೊಳ್ಳಲು ಈ ಅವಕಾಶವನ್ನು ನಿಮಗಾಗಿ ನೀಡಲಾಗಿದೆ. ವೆಬ್‌ದುನಿಯಾದ ಈ ಓದುಗರ ವಿಭಾಗದಲ್ಲಿ ಅದೆಷ್ಟು ಒಳ್ಳೊಳ್ಳೆಯ ಚರ್ಚೆಗಳು ನಡೆದಿವೆ ಎಂಬುದನ್ನು ನಾನಿಲ್ಲಿ ಹೇಳಲೇಬೇಕು. ಈ ವಿಚಾರಪೂರ್ಣ, ಅರ್ಥವತ್ತಾದ ಚರ್ಚೆಗಳಿಂದ ನಾವು ಕೂಡ ಸಾಕಷ್ಟು ಕಲಿತಿದ್ದೇವೆ, ಓದುಗರೂ ತಮ್ಮ ಜ್ಞಾನ ಹೆಚ್ಚಿಸಿಕೊಂಡಿದ್ದಾರೆ.

ಆದರೆ, ಇಷ್ಟೊಳ್ಳೆಯ ಕನ್ನಡ ಭಾಷೆಯನ್ನು ಅಸಭ್ಯವಾಗಿ, ನಿಮ್ಮದೇ ಆದ ವೆಬ್‌ದುನಿಯಾದಲ್ಲಿ ಅಶ್ಲೀಲ ಪದಗಳ ಮೂಲಕ ಅಂದಗೆಡಿಸುವವರಿಗೆ ಏನನ್ನಬೇಕು? ನಮ್ಮ ನಿಮ್ಮೆಲ್ಲರಿಗೆ ತಿಳಿದಿರುವಂತೆ, ಬಾಲವಾಡಿ/ಅಂಗನವಾಡಿಗಳಿಂದ ಹಿಡಿದು ಯಾವುದೇ ತರಗತಿಯಲ್ಲಿ ಕೂಡ ನಮಗೆ ಇಂತಹಾ ಅಶ್ಲೀಲವಾದ, ಅಸಭ್ಯವಾದ ಪದಗಳನ್ನು ಯಾವ ಟೀಚರ್ ಕೂಡ ಕಲಿಸಿರಲಿಲ್ಲ! ಅಲ್ವೇ?

ತಮ್ಮ ಓದಿನ ಹಸಿವು ನೀಗಿಸಲು ಪ್ರಯತ್ನಿಸುವ, ತಮ್ಮ ಬರವಣಿಗೆ ಸುಧಾರಿಸುವ ಇಂಗಿತ ಇರುವ ಮತ್ತು ಒಳ್ಳೆಯ ಕನ್ನಡ ಮನಸ್ಸು ಹೊಂದಿರುವ ಸುಶಿಕ್ಷಿತರು, ಸಭ್ಯರು, ಸುಸಂಸ್ಕೃತರು ಮಾತ್ರವೇ ಅಂತರಜಾಲ ತಾಣಕ್ಕೆ, ವಿಶೇಷವಾಗಿ ವೆಬ್‌ದುನಿಯಾಕ್ಕೆ ಬರುತ್ತಾರೆ ಎಂದುಕೊಂಡರೆ ಮತ್ತು ಅಂಥವರನ್ನೇ ನಾವೆಲ್ಲ ನಿರೀಕ್ಷಿಸುತ್ತಿದ್ದರೆ, ಓದು-ಬರಹ ಕಲಿತ ಅನಕ್ಷರಸ್ಥರು, ಸಭ್ಯ ಮನೆತನದಿಂದ ಬಂದ ಅಸಭ್ಯರು, ನಿಮ್ಮಲ್ಲೇ ಕೆಲವರು ಆಗಾಗ್ಗೆ ಕಾಮೆಂಟ್‌ಗಳಲ್ಲಿ ಹೇಳಿದಂತೆ, 'ವೆಬ್ಬನ್ನು ಗಬ್ಬೆಬ್ಬಿಸುವವರು' ಕೂಡ ಬರುತ್ತಾರೆ ಎಂಬುದು ನಿಮ್ಮ ಅರಿವಿಗೆ ಬಂದಿದೆ.

ಆದರೆ, ಕೇವಲ ಬೆರಳೆಣಿಕೆಯಷ್ಟು ಮಂದಿ ಕನ್ನಡ-ವಿರೋಧಿ ಮನಸ್ಸುಗಳುಳ್ಳ "ಸುಶಿಕ್ಷಿತ ಅನಕ್ಷರಸ್ಥ"ರ ಕಾರಣದಿಂದಾಗಿ, ಲಕ್ಷಾಂತರ ಮಂದಿ ಸಭ್ಯ ಓದುಗರಿಗೆ ತೊಂದರೆಯಾಗಬಾರದಲ್ಲಾ... ಅಂಥದ್ದೊಂದು ಕಾಳಜಿ ನಮ್ಮಲ್ಲೂ ಇದೆ. ಅಸಭ್ಯ ಕಾಮೆಂಟುಗಳನ್ನು ಓದಿದಾಗ ಎಷ್ಟು ಅಸಹ್ಯವಾಗುತ್ತದೆ! ಮತ್ತು ಅದನ್ನು ಬರೆದವರ ಹಿಂದಿನ ಮನಸ್ಥಿತಿಯನ್ನು ಹಾಗೂ ಬರೆದವರು ಎಂಥವರು ಎಂಬುದನ್ನು ಕೂಡ ಈ ಕಾಮೆಂಟುಗಳೇ ಹೇಳುತ್ತವಲ್ಲವೇ?

ಒಂದು ಪಕ್ಷವನ್ನು, ಒಬ್ಬ ವ್ಯಕ್ತಿಯನ್ನು, ಒಬ್ಬ ರಾಜಕಾರಣಿಯನ್ನು ನಾವು-ನೀವು ವಿರೋಧಿಸುತ್ತೇವೆ ಹೌದು. ಅವರ ನಡವಳಿಕೆಗಳು ನಮಗೆ ಇಷ್ಟವಾಗದೆ ಇರಬಹುದು. ಆದರೆ, ಅದನ್ನು ಕೂಡ ಸಭ್ಯವಾಗಿಯೇ ಟೀಕಿಸಬಹುದಲ್ಲಾ? ಅದು ಬಿಟ್ಟು, ಅಸಭ್ಯ, ಅಶ್ಲೀಲ ಪದ ಪ್ರಯೋಗ ಮಾಡುತ್ತಾ, ತಮಗೆ ಹೆತ್ತವರು ಪ್ರೀತಿಯಿಂದ ಹೆಸರನ್ನು ಬಿಟ್ಟು ಬೇರೆಯವರ ಹೆಸರಲ್ಲಿ ಬರೆಯುತ್ತಾ, ಕನ್ನಡಾಂಬೆಯೇ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡುವಂತೆ ಹೋದಲ್ಲೆಲ್ಲಾ ಕಾಪಿ ಪೇಸ್ಟ್ ಮಾಡುತ್ತಾ ತಮ್ಮ 'ಪೌರುಷ'ವನ್ನು ತೋರ್ಪಡಿಸಿಕೊಳ್ಳುವುದು ಹಾಗೂ ತಮ್ಮ ಸಂಸ್ಕೃತಿಯನ್ನು ಬಟಾಬಯಲುಗೊಳಿಸುವುದು ಎಷ್ಟು ಸರಿ?

ಇದಕ್ಕೇನು ಪರಿಹಾರ?
ಈ ರೀತಿಯ ಅಶ್ಲೀಲ, ಅಸಭ್ಯ, ಕಾಪಿ ಪೇಸ್ಟ್ ಕಾಮೆಂಟುಗಳನ್ನು ತಡೆಯುವ ಬಗೆಯಾದರೂ ಹೇಗೆ? ಪ್ರತಿದಿನ ಬರುವ ಸಾವಿರಾರು ಕಾಮೆಂಟುಗಳನ್ನು ಪರಿಶೀಲಿಸಿ ಪ್ರಕಟಿಸುವುದು ಅವುಗಳ ದೊಡ್ಡ ಪ್ರಮಾಣದಿಂದಾಗಿ ತಾಂತ್ರಿಕವಾಗಿ ಕಷ್ಟ ಸಾಧ್ಯ. ನಮ್ಮೆದುರು ಇರುವುದು ಎರಡು ಆಯ್ಕೆಗಳು - ಚರ್ಚೆಯ ಅವಕಾಶವನ್ನೇ ತೆಗೆದುಹಾಕುವುದು ಇಲ್ಲವೇ ಯಾವುದೇ ಕಾಮೆಂಟ್ ಮಾಡಬೇಕಿದ್ದರೆ ಲಾಗ್-ಇನ್ ಕಡ್ಡಾಯ ಮಾಡುವುದು. ಎರಡೂ ಆಯ್ಕೆಗಳು ನಮ್ಮ ಪ್ರೀತಿಯ ಸಭ್ಯ ಓದುಗ ಬಳಗಕ್ಕೆ ತ್ರಾಸ ನೀಡುವ ಅಂಶಗಳು ಎಂಬುದು ನಮಗೂ ಗೊತ್ತು.

ಅದು ಬಿಟ್ಟರೆ, ಈ ಸುಶಿಕ್ಷಿತ ಅನಕ್ಷರಸ್ಥರೇ ಸ್ವತಃ ಮುಂದೆ ಬಂದು, ತಮಗೆ ಅಕ್ಷರಾಭ್ಯಾಸ ಮಾಡಿದ ತಾಯಿಯನ್ನು, ಗುರುಗಳನ್ನೊಮ್ಮೆ ನೆನಪಿಸಿಕೊಂಡು, ಇನ್ನು ಮುಂದೆ ಒಳ್ಳೆಯ ಪದಗಳನ್ನೇ ಬಳಸುತ್ತೇವೆ ಎನ್ನುತ್ತಾ ಈ ವೆಬ್ ಪುಟಗಳನ್ನು ಸುಂದರವಾಗಿಡಲು ಶಪಥ ತೊಡುವುದೊಂದೇ ಉಳಿದ ದಾರಿ. ಬಹುಶಃ ಅದು ಕನ್ನಡ ತಾಯಿಗೆ ನೀಡುವ ಗೌರವ ಮತ್ತು ಅದುವೇ ಒಳ್ಳೆಯ ಪರಿಹಾರ ಎಂಬುದರಲ್ಲಿ ಎರಡು ಮಾತಿಲ್ಲ. ಎರಡು ಒಳ್ಳೆಯ ಮಾತುಗಳನ್ನಾಡಿದರೆ ಸುತ್ತಮುತ್ತಲಿನವರ ಆರೋಗ್ಯಕ್ಕೂ ಒಳ್ಳೆಯದೇ ಅಲ್ಲವೇ?

ಅಶ್ಲೀಲ ಕಾಮೆಂಟುಗಳನ್ನು ತಡೆಯಲು ನಾವು ನಿಮ್ಮ ಕೈಗೇ ಕೊಟ್ಟಿರುವ ಆಯುಧ "Report Abuse" ಅನ್ನೋ ಬಟನ್ ಅನ್ನು ಸಭ್ಯ ಓದುಗರಲ್ಲಿ ಹಲವರು ಬಳಸುತ್ತಿರುವುದನ್ನು ನಾನಿಲ್ಲಿ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಿದ್ದೇನೆ. ಅಂಥವರಿಗೆ ಮತ್ತೊಮ್ಮೆ ಧನ್ಯವಾದಗಳು. ಉಳಿದವರೂ ಈ 'ಆಯುಧ'ವನ್ನು ಸಮರ್ಪಕವಾಗಿ ಬಳಸಿ. ಬನ್ನಿ, ನಿಮ್ಮ ಪ್ರೀತಿಯ ವೆಬ್‌ದುನಿಯಾವನ್ನು ಸ್ವಚ್ಛ, ಸುಂದರವಾಗಿರಿಸಲು ಕೈಜೋಡಿಸೋಣ. ಅಶ್ಲೀಲ ಮಾತು ಬರೆಯುವವರ ಮನಸ್ಸು ಬದಲಾಯಿಸೋಣ.

-ಸಂಪಾದಕ

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಇವನ್ನೂ ಓದಿ