ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಅಕ್ರಮ ಗಣಿ: ಯಡಿಯೂರಪ್ಪ ನೇರ ಪಾಲು ಏನು? (Lokayukta Report | Yeddyurappa | BJP High Command | Karnataka Politics)
ಅವಿನಾಶ್ ಬಿ.
ಕರ್ನಾಟಕದಲ್ಲಿ ಹೆಮ್ಮರವೊಂದು ಉರುಳಿ ಹೋಗಿದೆ. "ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ರಫ್ತಿಗೆ ಕಡಿವಾಣ ಹಾಕಿದ್ದೇ ನಾನು, ಅಕ್ರಮ ಗಣಿಗಾರಿಕೆ ಆರೋಪಗಳ ಕುರಿತಾಗಿ ಸಮಗ್ರ ತನಿಖೆ ಮಾಡಿ ರಿಪೋರ್ಟ್ ಕೊಡಿ" ಅಂತ ಸ್ವತಃ ಲೋಕಾಯುಕ್ತರಿಗೆ ತನಿಖೆ ಒಪ್ಪಿಸಿ ನೆಮ್ಮದಿಯಿಂದಿದ್ದ ಬಿ.ಎಸ್.ಯಡಿಯೂರಪ್ಪ ಅವರ ಕೊರಳಿಗೇ ಈ ಗಣಿ ವರದಿ ಉರುಳಾಗಿ ಹೋಗಿದ್ದಾದರೂ ಹೇಗೆ ಎಂಬುದು ಬಹುತೇಕರಿಗೆ ಅರ್ಥವಾಗದ ಸಂಗತಿ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಕ್ಕಳ ಧನದಾಹಕ್ಕೆ, ಸ್ವಜನ ಪಕ್ಷಪಾತದಿಂದಾಗಿಯೇ ಹುದ್ದೆ ಬಿಡಬೇಕಾಯಿತೇ ಹೊರತು, ಈ ಗಣಿಗಾರಿಕೆಯ ವರದಿಯಿಂದಲ್ಲ ಎಂಬುದು ಮೇಲ್ನೋಟಕ್ಕೆ ಭಾಸವಾಗುತ್ತದೆ. ಯಾಕೆ? ಲೋಕಾಯುಕ್ತ ವರದಿಯಲ್ಲಿ ಮುಖ್ಯಮಂತ್ರಿ ನೇರವಾಗಿ ಗಣಿ ಕಂಪನಿಗಳಿಂದ ಲಂಚ ಪಡೆದಿದ್ದಾರೆ ಎಂಬ ಯಾವುದೇ ಉಲ್ಲೇಖವಿಲ್ಲ. ಲೋಕಾಯುಕ್ತ ವರದಿಯೇ ಹೇಳುವಂತೆ ಯಡಿಯೂರಪ್ಪ ಅವರ ಮಕ್ಕಳು ಹಾಗೂ ಅಳಿಯನಿಗೆ, ಅವರ ಪ್ರೇರಣಾ ಟ್ರಸ್ಟ್‌ಗೆ ಒಟ್ಟು 30 ಕೋಟಿ ಸಂದಾಯವಾಗಿದೆ. ಇದರ ವ್ಯವಹಾರವೇ ಶಂಕಾಸ್ಪದವಾಗಿದೆ. ಹೀಗಾಗಿ ಮುಖ್ಯಮಂತ್ರಿ ಮೇಲೆ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದ್ದಾರೆ ಲೋಕಾಯುಕ್ತರು.

ಇದನ್ನೇ ಟಿವಿ ಚಾನೆಲ್ ಚರ್ಚೆಯ ಸಂದರ್ಭದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದ್ದರು. ಅದೇನೆಂದರೆ, ಬೆಂಗಳೂರು ರಾಚೇನಹಳ್ಳಿಯ ಒಂದೆಕರೆ ಭೂಮಿ ಮಾರಾಟ ಮಾಡಿದ್ದಕ್ಕಾಗಿ ಸೌತ್ ವೆಸ್ಟ್ ಮೈನಿಂಗ್ ಕಂಪನಿಯಿಂದ ಯಡಿಯೂರಪ್ಪ ಅವರ ಮಕ್ಕಳಾದ ವಿಜಯೇಂದ್ರ ಮತ್ತು ರಾಘವೇಂದ್ರ ಹಾಗೂ ಅಳಿಯ ಸೋಹನ್ ಕುಮಾರ್‌ಗೆ ಹಲವು ಕಂತುಗಳಲ್ಲಿ ನೀಡಿದ 20 ಕೋಟಿ ರೂ. ಮತ್ತು ಯಡಿಯೂರಪ್ಪ ಮಕ್ಕಳು ಟ್ರಸ್ಟಿಗಳಾಗಿರುವ ಪ್ರೇರಣಾ ಶಿಕ್ಷಣ ಟ್ರಸ್ಟ್‌ಗೆ 10 ಕೋಟಿ ರೂ. ಡೊನೇಶನ್ ನೀಡಿರುವುದು. ಸುಖಾ ಸುಮ್ಮನೆ ಯಾರು ಕೂಡ 10 ಕೋಟಿ ರೂ. ಡೊನೇಶನ್ ನೀಡುವುದಿಲ್ಲ ಮತ್ತು 1.24 ಕೋಟಿಯಷ್ಟು ಬಾಳುವ ಒಂದೆಕರೆ ಜಮೀನಿಗೆ 20 ಕೋಟಿ ರೂ. ನೀಡುವುದಿಲ್ಲ ಎಂಬುದು ಲೋಕಾಯುಕ್ತರ ಅಭಿಪ್ರಾಯ. ಇದರ ಹಿಂದೆ ಏನೋ ಇದೆ ಎನ್ನುತ್ತದೆ ಅದು.

ಈ "ಏನೋ" ಎಂಬುದೇನು? ರಾಜ್ಯದಲ್ಲಿ ಗಣಿಗಾರಿಕೆಯಲ್ಲಿ ಆಸಕ್ತಿ ತೋರಿಸಿರುವ ಜಿಂದಾಲ್ ಗ್ರೂಪ್‌ನದ್ದೇ ಅಂಗ ಸಂಸ್ಥೆ ಸೌತ್ ವೆಸ್ಟ್ ಮೈನಿಂಗ್ ಕಂಪನಿ. ಗಣಿಗಾರಿಕೆಗೆ ಅನುಮತಿ ಕೋರಿದ್ದ ಪತ್ರವೊಂದು 2007ರಿಂದ ಸರಕಾರದ ಬಳಿಯಲ್ಲಿದೆ. ಅದನ್ನು ಕೇಂದ್ರ ಸರಕಾರಕ್ಕೂ ಕಳುಹಿಸಿಕೊಡಲಾಗಿ, ಕೇಂದ್ರವು ಕೆಲವೊಂದು ಸ್ಪಷ್ಟನೆಗಳನ್ನು ಕೇಳಿತ್ತು. ಇದಕ್ಕೆ ಉತ್ತರವಾಗಿ ರಾಜ್ಯ ಸರಕಾರವು ತಮಗೆ ಪೂರಕವಾದ ವರದಿ ಸಲ್ಲಿಸಬೇಕು ಎಂಬ ಉದ್ದೇಶವೇ "ಈ ಹಣ ಕೈಬದಲಾಯಿಸಿದ" ಪ್ರಕರಣದ ಹಿಂದಿದೆ ಎಂಬುದು ಲೋಕಾಯುಕ್ತರು ಕಂಡುಕೊಂಡ ಅಂಶ. ಅಂದರೆ, ಮುಂದೆ ತಮಗೆ ಲಾಭ ಮಾಡಿಕೊಡಬೇಕೆಂಬ ಉದ್ದೇಶದಿಂದ ಮಕ್ಕಳ ಮೂಲಕ ಮುಖ್ಯಮಂತ್ರಿಗೆ ಲಾಭ ಮಾಡಿಕೊಡಲಾಗಿದೆ ಎಂದು ಲೋಕಾಯುಕ್ತರು ತಮ್ಮ ವರದಿಯಲ್ಲಿ ಹೇಳಿದ್ದಾರೆ.

ಇದೇ ಅಂಶವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಗಳವಾರ ಲೋಕಾಯುಕ್ತ ಕಚೇರಿಗೇ ಪತ್ರ ಬರೆದು, ಈ ವರದಿಯ ಅಂಶಗಳನ್ನು ಮರು ಪರಿಶೀಲಿಸಬೇಕು, ತನ್ನ ನಾಲ್ಕು ದಶಕಗಳ ರಾಜಕೀಯ ಜೀವನದ ವರ್ಚಸ್ಸು ಮಣ್ಣು ಪಾಲಾಗಿದೆ, ಕರ್ನಾಟಕದ ಜನತೆ ನನ್ನ ಮೇಲಿಟ್ಟ ವಿಶ್ವಾಸ ನೀರುಪಾಲಾಗಿದೆ. ಹೀಗಾಗಿ ನ್ಯಾಯ ದೊರಕಿಸಿಕೊಡಬೇಕು ಎಂದು ಕೇಳಿದ್ದಾರೆ.

ಈ ಕುರಿತು ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಲೋಕಾಯುಕ್ತರು ತಮ್ಮ ವರದಿಯಲ್ಲಿ "ಒಬ್ಬ ವ್ಯಕ್ತಿ ಕೊಲೆ ಮಾಡಲಿದ್ದಾನೆ, ಅವನ ಮೇಲೆ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು" ಎಂದು ಶಿಫಾರಸು ಮಾಡಿದ್ದಾರೆ. ಆದರೆ "ಕೊಲೆ ಮಾಡಿದ ವ್ಯಕ್ತಿಯು (ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ) ಈಗ ಅಧಿಕಾರದಲ್ಲಿ ಇಲ್ಲದಿರುವುದರಿಂದ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಬೇಕಾಗಿಲ್ಲ" ಎಂದೂ ಶಿಫಾರಸು ಮಾಡಿದ್ದಾರೆ. ಈ ವರದಿಯ ಹಿಂದಿನ ಉದ್ದೇಶವೇನು ಎಂಬುದನ್ನು ಪ್ರಶ್ನಿಸಿದ್ದಾರೆ ಪುಟ್ಟಸ್ವಾಮಿ. ಅಂತೆಯೇ, ಯಡಿಯೂರಪ್ಪ ಅವರು ಕೂಡ, ತಮ್ಮ ವಾದ ಮಂಡನೆಗೆ ಅವಕಾಶವೇ ನೀಡಿಲ್ಲ. ಸಹಜ ನ್ಯಾಯದ ಧರ್ಮವನ್ನು ನಿರಾಕರಿಸಲಾಗಿದೆ. ತಾವು ಯಾವುದೇ ರೀತಿಯಲ್ಲಿಯೂ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗದಿದ್ದರೂ ಕೂಡ ತಮ್ಮ ಮೇಲೆ ಕ್ರಿಮಿನಲ್ ಕ್ರಮಕ್ಕೆ ಶಿಫಾರಸು ಮಾಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಏನೇ ಆದರೂ ಯಡಿಯೂರಪ್ಪರನ್ನು ಈಗ ಅಧಿಕಾರದಿಂದ ಕೆಳಗಿಳಿಸಿ ಆಗಿದೆ. ಇದು ನ್ಯಾಯಾಲಯದವರೆಗೂ ಹೋಗುತ್ತಿದೆ. ಹೀಗಾಗಿ ಅದರ ಬಗ್ಗೆ ಚರ್ಚೆ ಅನಗತ್ಯ.

ಆದರೆ, ಬಿಜೆಪಿ ಹೈಕಮಾಂಡ್ ಕೂಡ 25 ಸಾವಿರ ಪುಟಗಳ ವರದಿಯ ಪೂರ್ಣ ಅಧ್ಯಯನ ಮಾಡದೆ, ದಿಢೀರನೇ ನಿರ್ಧಾರ ಕೈಗೊಂಡಿರುವುದರ ಹಿಂದೇನಾದರೂ ಉದ್ದೇಶವಿದೆ ಎಂಬುದು ನಮ್ಮ ಓದುಗರಿಗಗೋಚರಿಸುತ್ತಿದೆಯೇ? ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಿದೆ. ಅವರ ಬಲ ವರ್ಧನೆಯಾಗುತ್ತಿದೆ ಎಂಬ ಆತಂಕವೂ ಇದಕ್ಕೆ ಕಾರಣವಿದ್ದಿರಬಹುದೇ? ಯಾಕೆಂದರೆ, ಸಿಎಂ ಮೇಲಿನ ಆರೋಪಗಳ ಕುರಿತು ಮರು ಪರಿಶೀಲನೆ ನಡೆಯಬೇಕು ಎಂದು ಲೋಕಾಯುಕ್ತಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿರುವ ವಾದವನ್ನು (ಕ್ಲಿಕ್ ಮಾಡಿ)ಗಮನಿಸಿದರೆ, ಇಂಥದ್ದೊಂದು ಶಂಕೆ ಮೂಡಲು ಕಾರಣವೂ ಆಗುತ್ತದೆ.

ಹಾಗೆ ಒಂದು ಬಾರಿ ಕಣ್ಣು ಹಾಯಿಸಿದರೆ, ಲೋಕಾಯುಕ್ತರು ವರದಿ ಕೊಟ್ಟಿರುವುದು 2006ರಿಂದ 2010ರ ನಡುವಿನ ಅಕ್ರಮ ಗಣಿಗಾರಿಕೆ ಬಗ್ಗೆ ಮಾತ್ರ. ಅಂದರೆ, ಇದು ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವಧಿ, ರಾಷ್ಟ್ರಪತಿ ಆಳ್ವಿಕೆಯ ಅವಧಿ ಮತ್ತು ಯಡಿಯೂರಪ್ಪ ಅವಧಿಗಳಲ್ಲೆಲ್ಲಾ ವ್ಯಾಪಿಸಿದೆ. ವರದಿಯ ಪ್ರಕಾರ, ಈ ನಾಲ್ಕು ವರ್ಷಗಳಲ್ಲಿ ಒಟ್ಟು 2,98,60,647 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಅಕ್ರಮವಾಗಿ ರಫ್ತಾಗಿದೆ. ಅಂದರೆ ಇದರ ಮೌಲ್ಯ 1,22,28,14,22,854 ಕೋಟಿ ರೂಪಾಯಿ. ಸಂಕ್ಷಿಪ್ತವಾಗಿ ಬರೆಯಬಹುದಾದರೆ ರಾಜ್ಯದ ಬೊಕ್ಕಸಕ್ಕೆ 12,228 ಕೋಟಿ ರೂಪಾಯಿ ಆದಾಯ ಹೊಡೆತವಾಗಿದೆ.
ವರ್ಷಅದಿರು ಅಕ್ರಮವಾಗಿ ರಫ್ತಾದ ಪ್ರಮಾಣ (ಮೆಟ್ರಿಕ್ ಟನ್)ಅದಿರಿನ ಮೌಲ್ಯ (ರೂ.)
2006-0731,84,1528,14,56,59,755
2007-0837,14,72017,24,32,99,332
2008-0953,55,66023,17,13,12,262
2009-10 (ಏಪ್ರಿಲ್-ಜುಲೈ)1,27,99,39646,35,86,39,228
2010 ಡಿಸೆಂಬರ್‌ವರೆಗೆ48,06,71927,36,25,12,277


ಕಬ್ಬಿಣದ ಅದಿರು ವಿದೇಶಗಳಿಗೆ ಅಕ್ರಮವಾಗಿ ರಫ್ತಾಗಿರುವುದು ಯಾವ ರಾಜ್ಯಗಳ ಬಂದರುಗಳ ಮೂಲಕ, ಅಲ್ಲಿ ಯಾರು ಅಧಿಕಾರದಲ್ಲಿದ್ದರು ಅಂತೆಲ್ಲಾ ಪಕ್ಷ ರಾಜಕಾರಣ ಮಾಡಬೇಕಾಗಿಲ್ಲ. ಆಂಧ್ರದಲ್ಲಿ ಕಾಂಗ್ರೆಸ್ ಸರಕಾರ, ತಮಿಳುನಾಡಿನಲ್ಲಿ ಕಾಂಗ್ರೆಸ್‌ನ ಮೈತ್ರಿಕೂಟ ಸರಕಾರ, ಕರ್ನಾಟಕದಲ್ಲಿ ಸ್ವತಃ ಬಿಜೆಪಿ ಸರಕಾರ. ಅದು ಇದ್ದೂ ಏನೂ ಮಾಡಿಲ್ಲ ಎಂಬುದು ವಿಶೇಷ. ಈ ಕೆಳಗಿನ ರೇಖಾ ಚಿತ್ರ, ಯಾವ ಬಂದರಿನ ಮೂಲಕ ಎಷ್ಟು ಮೆಟ್ರಿಕ್ ಟನ್ ಕಬ್ಬಿಣದ ಅದಿರು ಹೊರದೇಶಗಳಿಗೆ ರಫ್ತಾಗಿದೆ ಎಂಬುದನ್ನು ತೋರಿಸುತ್ತದೆ.
WD
WD


ಲೋಕಾಯುಕ್ತ ವರದಿಗೆ ಹಲವು ಕೋನಗಳಿವೆ. ಹಲವು ಆಯಾಮಗಳಿವೆ. ಸಮಗ್ರವಾಗಿ ಅಕ್ರಮವನ್ನು ಬಯಲಿಗೆಳೆದಿದೆ ಈ ವರದಿ. ಆದರೆ 25 ಸಾವಿರ ಪುಟಗಳ ಈ ವರದಿಯಲ್ಲಿರುವ ಅಂಶಗಳಲ್ಲಿ ಲೋಕಾಯುಕ್ತರು ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಕ್ಕಳು 20+10 ಕೋಟಿ ಲಾಭ ಮಾಡಿಕೊಂಡಿದ್ದಾರೆ ಎಂದು ಘೋಷಿಸಿದ್ದೇ, ಪ್ರತಿಪಕ್ಷಗಳಿಗೆ ಸಿಎಂ ಮೇಲೆ ಮುಗಿಬೀಳಲು ಮತ್ತು ಕೇಂದ್ರೀಯ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಅವರನ್ನು ತೊಲಗಿಸಿಕೊಳ್ಳಲು ಅಸ್ತ್ರ ಸಿಕ್ಕಿದಂತಾಗಿತ್ತು. ಯಡಿಯೂರಪ್ಪ ತಕ್ಷಣವೇ ರಾಷ್ಟ್ರಾದ್ಯಂತ ಸುದ್ದಿ-ಸದ್ದು ಮಾಡಿ ರಾಜೀನಾಮೆ ನೀಡಿದ್ದಾರೆ.

ಇದರಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ರೆಡ್ಡಿ ಸಹೋದರರ ಸಹಿತ ಸೋಮಣ್ಣ ಮುಂತಾದ ಸಚಿವರು, ಶಾಸಕ ನಾಗೇಂದ್ರ, ಸಂಸದ ಅನಿಲ್ ಲಾಡ್ ಅವರ ಪತ್ನಿ, ಸಂಸದ ಕುಮಾರಸ್ವಾಮಿ ಮುಂತಾದವರ ಕಥೆ ಏನು ಎಂಬ ಸುದ್ದಿ-ಸದ್ದು ಇನ್ನೂ ಆರಂಭವಾಗಿಲ್ಲ. ಲಾಡ್ ಕುರಿತಾಗಿ ಕ್ರಮ ಕೈಗೊಳ್ಳಲು ಹೈಕಮಾಂಡ್‌ಗೆ ಶಿಫಾರಸು ಮಾಡುತ್ತೇವೆ ಅಂತ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ್ ಘೋಷಿಸಿದ್ದಾರೆ. ಉಳಿದವರ ಬಗೆಗೆ ಮತ್ತು 787ರಷ್ಟು ಮಂದಿ ಧನದಾಹಿ ಅಧಿಕಾರಿಗಳು, ಅಕ್ರಮವೆಸಗಿದ ಗಣಿ ಕಂಪನಿಗಳ ಕುರಿತು ಯಾವುದೇ ಸದ್ದು ಕೇಳಿಬರುತ್ತಿಲ್ಲ. ಲೋಕಾಯುಕ್ತರು, ಸಂಬಂಧಪಟ್ಟವರಿಂದಲೇ ಈ ನಷ್ಟವನ್ನು ತುಂಬಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದ್ದಾರೆ. ಹೀಗಾಗಿ, ಈ ವರದಿಯನ್ನು ಬಿಜೆಪಿಯ ಹೊಸ ಮುಖ್ಯಮಂತ್ರಿ ನೇತೃತ್ವದ ಸರಕಾರ ಸ್ವೀಕರಿಸುತ್ತದೆಯೋ ಅಥವಾ ತಿರಸ್ಕರಿಸುತ್ತದೆಯೋ ಎಂಬ ಶಂಕೆಯೂ ಇದೆ. ಸ್ವೀಕರಿಸಿದರೆ ಅದು ಮೂರು ತಿಂಗಳೊಳಗೆ ಕ್ರಮ ಕೈಗೊಂಡ ವರದಿಯನ್ನು ನೀಡಬೇಕಾಗುತ್ತದೆ. ತಿರಸ್ಕರಿಸಿದರೆ, ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರು ಸುಮ್ಮನೆ ಕೂರುವುದಿಲ್ಲ ಎಂಬುದು ಇಡೀ ಲೋಕಕ್ಕೇ ತಿಳಿದಿದೆ. ಅದೆಲ್ಲಾ ಮುಂದಿನ ವಿಚಾರ.

ಈಗ ಯಡಿಯೂರಪ್ಪ ವಿಷಯಕ್ಕೆ ಬರುವುದಾದರೆ, ಅಧಿಕಾರಕ್ಕೆ ಬಂದಾರಭ್ಯದಿಂದ ಪ್ರತಿಪಕ್ಷಗಳ ಇಷ್ಟೊಂದು ಕೂಗಾಟ, ಗದ್ದಲ, ಆರೋಪಗಳ ಸುರಿಮಳೆ ಎಲ್ಲವುಗಳ ನಡುವೆ ಮೂರು ವರ್ಷ ಅಧಿಕಾರದಲ್ಲಿ ಉಳಿದದ್ದೇ ಹೆಚ್ಚು. ಯಡಿಯೂರಪ್ಪ ಅವರಿಗೆ ಪ್ರತಿಪಕ್ಷಗಳು ಮಾತ್ರವೇ ಅಲ್ಲದೆ, ಪಕ್ಷದೊಳಗಿದ್ದ ಹಿತಶತ್ರುಗಳು ಕೂಡ ಮುಳುವಾಗಿದ್ದರು, ಇಲ್ಲಸಲ್ಲದ ಆರೋಪ ಮಾಡಲು ಪ್ರತಿಪಕ್ಷಗಳಿಗೆ ಕುಮ್ಮಕ್ಕು ನೀಡುತ್ತಿದ್ದರು. ಯಡಿಯೂರಪ್ಪ ಎಚ್ಚೆತ್ತುಕೊಂಡು, ತಮ್ಮ ಕಚೇರಿಯ ಸಿಬ್ಬಂದಿಗಳನ್ನು ಇತ್ತೀಚೆಗೆ ವರ್ಗಾಯಿಸಿದಾಗ ತೀರಾ ತಡವಾಗಿತ್ತು. ಆಗುವುದೆಲ್ಲವೂ, ಆಗಬಾರದ್ದೆಲ್ಲವೂ ಆಗಿ ಹೋಗಿದ್ದವು. ಇಷ್ಟೆಲ್ಲ ಒತ್ತಡಗಳ ನಡುವೆಯೂ ರಾಜ್ಯದಲ್ಲಿ ಆಡಳಿತ ನಡೆಸುವ ಬಗ್ಗೆ ಅವರೇ ಹೇಳಿಕೊಂಡಿದ್ದರು ಒಂದು ಭಾಷಣದಲ್ಲಿ - "ನನ್ನ ಸ್ಥಾನದಲ್ಲಿ ಬೇರೆ ಯಾರೇ ಇದ್ದರೂ ಇಷ್ಟೊತ್ತಿಗೆ ಹುಚ್ಚರಾಗಿಬಿಡುತ್ತಿದ್ದರು ಮತ್ತು ಅಧಿಕಾರದಿಂದ ಓಡಿ ಹೋಗುತ್ತಿದ್ದರು" ಅಂತ! ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬಂತಹಾ ಕಾಲವೊಂದಿತ್ತು. ಅಂಥಾ ಛಾತಿಯ ಯಡಿಯೂರಪ್ಪ ಈಗ ಗಣಿಯ ಧೂಳಿನೊಳಗೆ ಮುಚ್ಚಿ ಹೋಗಿದ್ದಾರೆ. ಮುಂದೇನು? ಕಾಲವೇ ಹೇಳಬೇಕು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಲೋಕಾಯುಕ್ತ ವರದಿ, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಹೈಕಮಾಂಡ್, ಕರ್ನಾಟಕ ಸುದ್ದಿ, ರಾಜಕೀಯ, ಅಕ್ರಮ ಗಣಿಗಾರಿಕೆ