ಸರ್ವಜ್ಞ | ಪ್ರಚಲಿತ | ವಿಮಾನ ದುರಂತ | ರಾಷ್ಟ್ರೀಯ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಓಟ್‌ ಬ್ಯಾಂಕ್ ಪಾಲಿಟಿಕ್ಸಾ; ಭಗವದ್ಗೀತೆ ಹೇರಿಕೆ ಎಷ್ಟು ಸರಿ? (Bhagavad Gita | Vote Bank Politics | bjp | Bhagavad Gita | Artical Sadananda Gowda | rss | mp | Hindu | Yeddyurappa |)
ಕೊಟ್ಟೂರ ಸ್ವಾಮಿ ಎಂ.ಎಸ್.
PR
ಮೊನ್ನೆ ಭಾನುವಾರ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಭಾಜಪದ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡರು ಸೋಂದ ಸ್ವರ್ಣವಲ್ಲಿ ಮಠದ ಆಶ್ರಯದಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣಾ ಸಮಾರಂಭದಲ್ಲಿ ಮಾತನ್ನಾಡುತ್ತಾ ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಸಲು ಸರಕಾರ ಚಿಂತನೆ ನಡೆಸಿದೆ ಎನ್ನುವಂತಹ ವಿಚಾರವು ಆಘಾತಕಾರಿಯಾಗಿದೆ.

ಮಾನ್ಯ ಮುಖ್ಯಮಂತ್ರಿಗಳು ಮತ್ತು ಅವರ ಸಂಪುಟ ಸದಸ್ಯರು, ರಾಜ್ಯದಲ್ಲಿ ಕೇವಲ ಹಿಂದೂಗಳಷ್ಟೇ ವಾಸಿಸುತ್ತಿರುವರು ಎಂದು ತಿಳಿದಿರುವುದು ನಿಜಕ್ಕೂ ಕಳವಳಕಾರಿ ವಿಷಯವಾಗಿದೆ. ಭಗವದ್ಗೀತೆ ಹಿಂದೂಗಳ ಪವಿತ್ರ ಗ್ರಂಥ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಒತ್ತಾಯ ಪೂರ್ವಕವಾಗಿ ಎಲ್ಲಾ ಧರ್ಮೀಯರ ಮಕ್ಕಳ ಮೇಲೆ ಭಗವದ್ಗೀತೆಯನ್ನು ಹೇರುವುದು ಎಷ್ಟು ಸರಿ? ಎನ್ನುವಂತಹ ಪ್ರಶ್ನೆಗಳು ಹುಟ್ಟುತ್ತಿವೆ.

ಮಧ್ಯಪ್ರದೇಶದಲ್ಲಿನ ಬಿಜೆಪಿ ಸರಕಾರ ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಸಿದೇ ಎನ್ನುವುದನ್ನು ಮುಂದಿಟ್ಟುಕೊಂಡು, ರಾಜ್ಯದಲ್ಲೂ ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಬರುವಂತೆ ಮಾಡುತ್ತಿರುವುದು ಶಿಕ್ಷಣಕ್ಷೇತ್ರವನ್ನು ಕೇಸರೀಕರಣ ಮಾಡುವ ಹುನ್ನಾರೇ? ಏನೂ ಅರಿಯದ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಕೊಡುವ ನೆಪದಲ್ಲಿ ಕೇವಲ ಭಗವದ್ಗೀತೆಯನ್ನು ಮಾತ್ರ ಪಠ್ಯಕ್ರಮದಲ್ಲಿ ಸೇರಿಸಲು ಸಂಚು ನಡೆಸುತ್ತಿರುವುದು ಹಿಂದೂ ಮತ ಬ್ಯಾಂಕ್‌ನ ಓಲೈಕೆಗಾಗಿಯೇ? ಎಂಬ ಅನುಮಾನ ಕಾಡುತ್ತಿದೆ.

ಮುಖ್ಯಮಂತ್ರಿಗಳೇ, ನಿಮ್ಮದೇ ಸರಕಾರವಿರುವಾಗ ಕೇವಲ ಭಗವದ್ಗೀತೆ ಏಕೆ, ಶಾಲೆಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕವನ್ನು ಕಡ್ಡಾಯಗೊಳಿಸುವಂತಹ ಯೋಚನೆ ಇನ್ನೂ ಬಂದಿಲ್ಲವೇ? ಶಾಲಾ ಮಕ್ಕಳಿಗೆ 'ಸದಾ ವತ್ಸಲೇ'ಯನ್ನು ಕಂಠ ಪಾಠ ಮಾಡಿಸಿ ಶಾಲಾ ಪ್ರಾರ್ಥನೆಯಲ್ಲಿ ಸೇರ್ಪಡೆ ಮಾಡುವಂತೆ ನಿಮ್ಮ ಸರಕಾರ ಸೂಚಿಸದಿರುವುದು ಸೋಜಿಗವೆನಿಸುತ್ತಿದೆ.

ಇಡೀ ರಾಜ್ಯಕ್ಕೆ ರಾಜ್ಯವೇ ಹೊತ್ತಿ ಉರಿಯುತ್ತಿರುವಾಗ ನಿರೋ ಪಿಟೀಲು ಬಾರಿಸುತ್ತಿದ್ದನಂತೆ... ಹಾಗಿದೆ ನಿಮ್ಮ ಪರಿಸ್ಥಿತಿ. ಪ್ರತಿ ವರ್ಷದಂತೆ ಈ ವರ್ಷವೂ ತೀವ್ರ ತರಹದ ವಿದ್ಯುತ್ ಕ್ಷಾಮ, ಬರ, ನೆರೆ ಪೀಡಿತರಿಗೆ ಪುನರ್ ವಸತಿ, ಕುಡಿಯುವ ನೀರು, ಗಗನವನ್ನು ಚುಂಬಿಸುತ್ತಿರುವ ಬೆಲೆಗಳು, ಇತ್ಯಾದಿ ಸಾರ್ವಜನಿಕರ ಮೂಲ ಸೌಕರ್ಯಗಳನ್ನು ಒದಗಿಸುವ ಕುರಿತು ಕನಿಷ್ಠ ಪಕ್ಷ ಚಿಂತಿಸದೇ, ಕೇವಲ ಕಲಹ, ಜಟಾಪಟಿಗಳಲ್ಲಿ ಕಾಲ ಕಳೆಯುತ್ತಾ ದಿನದೂಡುತ್ತಿರುವ ನಿಮ್ಮ ಸರಕಾರದ ಸಾಧನೆ ಶೂನ್ಯ.

ನಿಮ್ಮದೇ ಪಕ್ಷದ ಮೂಲ ಬೇರಾಗಿದ್ದ ಸಂಘ ಪರಿವಾರದ ದೇಶ ಪ್ರೇಮದ (ರಾಮ ಮಂದಿರ) ಪಡಿಪಾಟಲು ಜಗಜಾಹೀರಾಗಿದೆ. ಇಂತಹ ಸಂದರ್ಭದಲ್ಲಿ ಬಡ ಜನತೆಯ ಆಹಾರವಾಗಿದ್ದ ಗೋಮಾಂಸವನ್ನು ನಿರ್ಬಂಧಿಸುವಂತಹ ನಿರ್ಣಯವನ್ನು ಕೈಗೊಂಡ ಬಿಜೆಪಿ ಸರಕಾರಕ್ಕೆ ಮಾರುಕಟ್ಟೆಯಲ್ಲಿ ದೊರೆಯುವ ಮಾಂಸದ ಬೆಲೆ ತಿಳಿದಿತ್ತೇ? (ಗೋಮಾಂಸ ನಿಷೇಧಕ್ಕೆ ರಾಜ್ಯಪಾಲರ ಅಂಗೀಕಾರ ಬೀಳಲಿಲ್ಲ!) ಕೇವಲ ಅಲ್ಪಸಂಖ್ಯಾತರಾಗಿರುವ ಮುಸ್ಲಿಂ ಮತ್ತು ಕ್ರೈಸ್ತರಿಗೆ ಗೋಮಾಂಸ ಭಕ್ಷಕರೆಂದು ಪಟ್ಟ ಕಟ್ಟಿ ದೂರವಿರಿಸಿರುವುದು ನಿಮ್ಮಂತಹ ಕೊಳಕು ಬುದ್ಧಿಯ ನಾಯಕರು ಎನ್ನುಲು ಹೇಸಿಗೆ ಎನಿಸುತ್ತದೆ. ಬಡವರು ತಿನ್ನುವಂತಹ ಆಹಾರಕ್ಕೂ ಕಲ್ಲು ಹಾಕಲು ಹೊರಟಿದ್ದು ಯಾವ ಪುರುಷಾರ್ಥಕ್ಕೆ?

ದೇಶಪ್ರೇಮ, ಮಾತೃ ಭಕ್ತಿ, ದೇಶ ಭಕ್ತಿ ಎಂದೆಲ್ಲಾ ಕಿರುಚಾಡುತ್ತಿದ್ದ ನಿಮ್ಮದೇ ಪಕ್ಷ ನಾಯಕರು ಸಾಲು ಸಾಲಾಗಿ ಜೈಲು ಪಾಲಗುತ್ತಿರುವುದು ನಿಮ್ಮೆಲ್ಲರಿಗೂ ನಾಚಿಕೆ ತರಿಸಿಲ್ಲವೇ? ಬಡ ರೈತನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ನಿಮ್ಮ ಬಿಜೆಪಿಯ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ಅಧಿಕಾರ ಸ್ವೀಕರಿಸಿದ ತಿಂಗಳೊಪ್ಪತ್ತಿನಲ್ಲಿ ಹಾವೇರಿಯಲ್ಲಿ ರೈತರನ್ನು ಗೋಲಿಬಾರ್ ಮಾಡುವ ಮೂಲಕ ಬಲಿ ಹಾಕಿ ಇನಿಂಗ್ಸ್ ಆರಂಭಿಸಿದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ಅಂತೆಯೇ ಅಲ್ಲಿಂದ ತಮ್ಮ ಗದ್ದುಗೆಯನ್ನು ಗಟ್ಟಿಗೊಳಿಸುಕೊಳ್ಳುವ ನೆಪದಲ್ಲಿ ಕಂಡವರ ಮನೆಗೆ ಕನ್ನ ಹಾಕಿದ ರೂಪದಲ್ಲಿ ಅನ್ಯ ಪಕ್ಷಗಳ ಶಾಸಕರನ್ನು ಖರೀದಿಸಿ ಕುದುರೆ ವ್ಯಾಪಾರದ ಕುಖ್ಯಾತಿಗೆ ಬಿಜೆಪಿ ಸರಕಾರ ಒಳಗಾಯಿತು. ನಂತರವಾದರೂ ರಾಜ್ಯಕ್ಕೆ ಒಳ್ಳೆಯ ಆಡಳಿತ ಲಭಿಸಬಹುದು ಎನ್ನುವಂತಹ ಆಸೆ ಎಲ್ಲರಲ್ಲೂ ಇತ್ತು. ಅದರೆ ನೀವುಗಳು ಮಾಡಿದ್ದೇನು, ಕೇವಲ ಜಮೀನು ಹಗರಣಗಳು, ಸ್ವಂತ ಆಸ್ತಿ ಪಾಸ್ತಿ ಗಳಿಕೆ, ಸೈಟ್ ಗಳಿಕೆ, ಅನಧಿಕೃತ ಸಂಬಂಧಗಳು, ಪರ ಪತ್ನಿ ಪೀಡನೆಯಂತಹ ಕಾರ್ಯಗಳಲ್ಲಿಯೇ ನಿಮ್ಮ ಸರಕಾರದ ಸಚಿವರು ಮತ್ತು ಶಾಸಕರು ಮುಳುಗಿಹೋಗಿದ್ದರು. ಇದೆಲ್ಲದ್ದರ ನಡುವೆ ಆರು ಬಾರಿ ಬಂಡಾಯದ ಬಿರುಗಾಳಿಯಿಂದಾಗಿ ನಿಮ್ಮಲ್ಲಿ ಅನೇಕರು ರೆಸಾರ್ಟ್ ವಾಸದ ಮತ್ತು ಅಕ್ರಮ ಹಣ ಸಂಪಾದನೆಯ ಮಾರ್ಗ ಕಂಡುಕೊಂಡರು. ಇದೆಲ್ಲದ್ದರ ಪರಿಣಾಮ ರಾಜ್ಯದೆಡೆ ದಿವ್ಯ ನಿರ್ಲಕ್ಷ್ಯ ಮತ್ತು ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1 ಎನ್ನುವಂತಹ ಪಟ್ಟ. ಥೂ ನಾಚಿಕೆಗೇಡು.

ನಿಮ್ಮ ಓಟ್ ಬ್ಯಾಂಕ್ ಅನ್ನು ಭದ್ರ ಪಡಿಸಿಕೊಳ್ಳುವ ನೆಪದಲ್ಲಿ ಮಠ ಮಾನ್ಯಗಳಿಗೆ ಕೋಟಿ ಕೋಟಿಯನ್ನು ನಿಮ್ಮ ಅಧಿಕಾರ ದಾತರು ಈಗಾಗಲೇ ಸುರಿದಿದ್ದಾರೆ. ಅವರನ್ನೇ ನೀವು ಅನುಸರಿಸುವುದಾದರೇ ದೇವರೇಗತಿ ಎನ್ನುವಂತಹ ಪರಿಸ್ಥಿತಿ ರಾಜ್ಯದ ಮತದಾರರ ಸ್ಥಿತಿಯಾಗಿದೆ. ಇನ್ನೂ ಕಾಲ ಮಿಂಚಿಲ್ಲ ಜನಪರ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ನಿಮ್ಮ ಒಳಜಗಳಗಳಿಗೆ ಸ್ವಲ್ಪ ಬ್ರೇಕ್ ಹಾಕಿಕೊಳ್ಳಿ. ಮುಂದಿನ ದಿನಗಳಲ್ಲಿ ಜನತೆಯನ್ನು ಮತಯಾಚಿಸಲು ಹೋಗಲು ಸ್ವಲ್ಪವಾದರೂ ಮಾನ ಉಳಿಸಿಕೊಳ್ಳಿ. ಈ ವಿಚಾರವನ್ನು ತಿಳಿಸುವ ಕಾರಣವೇನೆಂದರೆ, ಇದ್ದೂ ಇಲ್ಲದಂತೆ, ಬದುಕಿದ್ದೂ ಸತ್ತಂತಾಗಿರುವ, ಕಣ್ಣಿದ್ದೂ ಕುರುಡರಾಗಿರುವ, ಕಿವಿಯಿದ್ದೂ ಕಿವುಡರಾಗಿರುವ ರಾಜ್ಯದಲ್ಲಿರುವ ವಿರೋಧ ಪಕ್ಷಗಳು ತಮ್ಮ ಅಸ್ಥಿತ್ವಕ್ಕಾಗಿ ಮೌನವಹಿಸಿವೆ !
ಇವನ್ನೂ ಓದಿ
WebduniaWebdunia