ಅನಿಲ ದರ ಏರಿಕೆಗೂ ನೌಕರರ ಕೆಲಸಕ್ಕೂ ಎತ್ತಣ ಸಂಬಂಧ ಎಂದು ನೀವು ಪ್ರಶ್ನಿಸುತ್ತೀರಾ? ನಿಮ್ಮ ಪ್ರಶ್ನೆಗೆ ಉತ್ತರ ದೊರೆತಿದೆ. ಏರುತ್ತಿರುವ ಅನಿಲ ಬೆಲೆಗೂ, ನೌಕರರ ಉತ್ಪಾದಕತೆ ಕುಸಿತಕ್ಕೂ ಆತ್ಮೀಯ ಸಂಬಂಧವಿದೆ ಅಂತ ಫ್ಲೋರಿಡಾ ವಿಶ್ವವಿದ್ಯಾನಿಲಯ ಕಂಡುಕೊಂಡಿದೆ.
ಅನಿಲ ಬೆಲೆ ಏರಿಕೆ ಬಗ್ಗೆ ಕಳವಳದಲ್ಲಿಯೇ ಇರುವ ನೌಕರರು ತಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದಿಲ್ಲವಂತೆ. ಕೆಲಸಕ್ಕೆ ಹೋಗಲು ಉತ್ಸಾಹವೂ ಇರುವುದಿಲ್ಲ, ನೌಕರಿ ಬಗ್ಗೆ ಕಾಳಜಿ ಕಡಿಮೆಯಾಗುತ್ತದೆ ಮತ್ತು ಹೆಚ್ಚು ಉದ್ವಿಗ್ನರಾಗಿರುತ್ತಾರೆ ಎನ್ನುತ್ತಾರೆ ಫ್ಲೋರಿಡಾ ಸ್ಟೇಟ್ ಯುನಿವರ್ಸಿಟಿಯ ಬಿಜಿನೆಸ್ ಕಾಲೇಜಿನ ಮ್ಯಾನೇಜ್‌ಮೆಂಟ್ ಪ್ರೊಫೆಸರ್ ಆಗಿರುವ ವೇಯ್ನ್ ಹಾಚ್‌ವಾರ್ಟರ್.
ಇಂಥವರಿಗೆ ಕೆಲಸದಲ್ಲಿ ಕ್ಲಿಷ್ಟಕರ ಪರಿಸ್ಥಿತಿ ಎದುರಾಗುವುದು ಕೂಡ ಹೆಚ್ಚು. ಗ್ಯಾಸ್ ಬೆಲೆ ಹೆಚ್ಚಳವಾದಂತೆ ಅವರ ಮನೋದ್ವೇಗವೂ ಹೆಚ್ಚಾಗುತ್ತದೆ, ಈ ಒತ್ತಡದಿಂದ ಹೊರಬರುವುದು ಅವರಿಗೆ ಕಷ್ಟವಾಗುತ್ತದೆ ಎಂದು ಹಾಚ್‌ವಾರ್ಟರ್ ಹೇಳುತ್ತಾರೆ.
ಈ ಸಂಬಂಧ ಹಾಚ್‌ವಾರ್ಟರ್ ಅವರು 800ಕ್ಕೂ ಹೆಚ್ಚು ನೌಕರರನ್ನು ಸಮೀಕ್ಷೆಗೊಳಪಡಿಸಿದ್ದರು. ಹೆಚ್ಚಿನವರು ತಮ್ಮ ಸ್ವಂತ ವಾಹನದಲ್ಲಿ ಉದ್ಯೋಗ ತಾಣಕ್ಕೆ ತೆರಳುವವರು. ಒಬ್ಬನಂತೂ ಸಮೀಕ್ಷಾ ಪತ್ರದಲ್ಲಿ ಹೀಗೆ ಬರೆದಿದ್ದ: 'ನಾನು ದುಡಿಯುತ್ತಿರುವಾಗ ಮಾಡುತ್ತಿರುವ ಕೆಲಸಕ್ಕಿಂತಲೂ, ಏನು ಮಾಡಿದರೆ ಗ್ಯಾಸ್ ಉಳಿಸಬಹುದು ಎಂಬುದರ ಬಗ್ಗೆ ಯೋಚನೆ ಮಾಡುವುದಕ್ಕಾಗಿಯೇ ಸಾಕಷ್ಟು ಸಮಯ ವ್ಯಯಿಸುತ್ತೇನೆ'!
|