ವ್ಲಾಡಿಮಿರ್ ಪುತಿನ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಡಿಮಿಟ್ರಿ ಮೆಡ್ವೆಡೇವ್ ಅವರು ರಷ್ಯಾದ ಅಧ್ಯಕ್ಷರಾಗಿ, ಮಂಗಳವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. 1991ರಲ್ಲಿ ಸೋವಿಯತ್ ಒಕ್ಕೂಟದ ಕುಸಿತದ ಬಳಿಕ ಇವರು ರಷ್ಯಾದ ತೃತೀಯ ಅಧ್ಯಕ್ಷರಾಗಿದ್ದಾರೆ.
ಕ್ರೆಮ್ಲಿನ್‌ನ ಸ್ವರ್ಣ ವರ್ಣದ ಸೈಂಟ್ ಆಂಡ್ರ್ಯೂ ಸಭಾಂಗಣದಲ್ಲಿ ನಡೆದ ಅತ್ಯಂತ ಅದ್ಧೂರಿಯ ಸಮಾರಂಭದಲ್ಲಿ ಮೆಡ್ವೆಡೇವ್ ಅವರು ಅಧಿಕಾರ ಸ್ವೀಕರಿಸುವುದರೊಂದಿಗೆ ಪುತಿನ್ ಅವರ ಎಂಟು ವರ್ಷಗಳ ಆಡಳಿತವು ಕೊನೆಗೊಂಡಿತು.
ಕೆಂಬಣ್ಣದ ಹೊದಿಕೆಯ ರಷ್ಯಾ ಸಂವಿಧಾನದ ಮೇಲೆ ಕೈಯಿರಿಸಿದ ಅವರು, ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ಸ್ವೀಕರಿಸಿದರು. ಸಮಾರಂಭದಲ್ಲಿ ಸುಮಾರು 2,400 ವಿಶೇಷ ಆಮಂತ್ರಿತರು ಭಾಗವಹಿಸಿದ್ದರು.
ಪ್ರಮಾಣ ವಚನದ ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಮೆಡ್ವೆಡೇವ್, ಕಾನೂನಿನ ಮೂಲಭೂತ ಪಾತ್ರ ಕುರಿತಂತೆ ಹೆಚ್ಚಿನ ಮಹತ್ವ ನೀಡುವುದಾಗಿ ನುಡಿದರು. ಕಾನೂನಿನೆಡೆಗೆ ನೈಜ ಗೌರವವಿರಬೇಕು, ಆಧುನಿಕ ಅಭಿವೃದ್ಧಿಗೆ ಮಾರಕವಾಗುವಂತಹ ಕಾನೂನಿ ಅಡ್ಡಿಯನ್ನು ಕೊನೆಗೊಳಿಸಬೇಕು ಎಂದು ಅವರು ನುಡಿದರು.
ರಷ್ಯಾದಲ್ಲಿ ನಾಗರಿಕ ಮತ್ತು ಆರ್ಥಿಕ ಸ್ವಾತಂತ್ರ್ಯಗಳಿಗೆ ತನ್ನ ಆಡಳಿತದ ವೇಳೆಯಲ್ಲಿ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಅವರು ನುಡಿದರು.
|