ನರ್ಗೀಸ್ ಚಂಡಮಾರುತದ ಅಬ್ಬರಕ್ಕೆ ನಲುಗಿದ ಮ್ಯಾನ್ಮಾರ್‌ನಲ್ಲಿ ಇದೀಗ ರೋಗರುಜಿನ, ಹಸಿವು, ನೀರಡಿಕೆಗಳ ಭಯ ಕಾಡುತ್ತಿದೆ ಎಂದು ನೆರವು ಸಂಸ್ಥೆಗಳು ಬುಧವಾರ ಹೇಳಿವೆ.
ಚಂಡಮಾರುತದ ಪ್ರಕೋಪದಿಂದಾಗಿ ಇದುವರೆಗೆ 22,500 ಜನರು ಸತ್ತಿದ್ದು, 41,000 ಜನರು ಕಾಣೆಯಾಗಿದ್ದಾರೆಂದು ವರದಿಯಾಗಿದೆ. 1991ರಿಂದೀಚೆಗೆ ನೆರೆಯ ಬಾಂಗ್ಲಾದೇಶದಲ್ಲಿ ಅಪ್ಪಳಿಸಿದ ಚಂಡಮಾರುತಕ್ಕೆ 143,000 ಜನರು ಬಲಿಯಾದ ಬಳಿಕ ಇದು ಅತ್ಯಂತ ಹಾನಿಕರ ಚಂಡಮಾರುತವೆಂದು ಹೇಳಲಾಗಿದೆ.
ಇಂತಹ ಪರಿಸ್ಥಿತಿಗಳಲ್ಲಿ ಮಕ್ಕಳು ರೋಗರುಜಿನಗಳಿಗೆ ಮತ್ತು ಹಸಿವಿಗೆ ಈಡಾಗುತ್ತವೆ. ಮಕ್ಕಳಿಗೆ ಈಗ ತಕ್ಷಣದ ನೆರವು ಬೇಕಾಗಿದೆ ಎಂದು ಹೇಳುವ ನೆರವು ಅಧಿಕಾರಿಗಳು, ನೂರಾರು ಸಾವಿರಾರು ಜನರು ಮುಖಜಭೂಮಿಯ ವಿಸ್ತಾರ ಪ್ರದೇಶದಲ್ಲಿ ನಿರ್ವಸಿತರಾಗಿದ್ದಾರೆಂದು ತಿಳಿಸಿದ್ದಾರೆ.
ಸೊಳ್ಳೆ ಜನ್ಯ ರೋಗಗಳಾದ ಮಲೇರಿಯ, ಡೆಂಗ್ಯೂ ಇಲ್ಲಿ ವ್ಯಾಪಕವಾಗಿ ಹಬ್ಬುವ ಭೀತಿ ಆವರಿಸಿದೆ. ಆಗ್ನೇಯ ಏಷ್ಯದ ತೇವ ಮತ್ತು ಬೇಸಿಗೆಯ ಕಾವಿಗೆ ಕೊಳಕು ನೀರು ಮತ್ತು ಕೊಳೆತ ಶವಗಳಿಂದ ಕಾಲರಾ, ಅತಿಸಾರ ರೋಗಗಳ ಭಯವೂ ಕಾಡಿದೆ.
|