ಬಾಂಗ್ಲಾದೇಶದ ಪ್ರಭಾವಿ ಲಂಚ ವಿರೋಧಿ ಸಮಿತಿಯು, ಮಾಜಿ ಪ್ರಧಾನಿ ಖಲಿದಾ ಜಿಯಾ ಪುತ್ರ ತಾರಿಕ್ ರೆಹ್ಮಾನ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ. ಕೊಲೆ ಪ್ರಕರಣವೊಂದನ್ನು ಮರೆಮಾಚಲು ರೆಹ್ಮಾನ್ 12.5 ಕೋಟಿ ಟಾಕ ಲಂಚಪಡೆದಿರುವ ಆರೋಪ ಎದುರಿಸುತ್ತಿದ್ದು, ಕಳೆದೊಂದು ವರ್ಷದಿಂದ ಜೈಲಿನಲ್ಲಿದ್ದಾರೆ.
ರೆಹ್ಮಾನ್, ಮಾಜಿ ಬಿಎನ್‌ಪಿ ಸಚಿವ ಲುತುಫ್ಜಾಮಾನ್ ಬಾಬರ್ ಮತ್ತು ಇತರ ಆರು ಮಂದಿಯ ವಿರುದ್ಧ ಅಧಿಕಾರದ ದುರ್ಬಳಕೆ ಮತ್ತು ತನಿಖೆಗೆ ಅಡ್ಡಿಯುಂಟುಮಾಡಿರುವ ಆರೋಪ ಹೊರಿಸಲಾಗಿದೆ. ವಸುಂಧರಾ ವಾಣಿಜ್ಯ ಸಮೂಹದ ಹುಮಾಯುನ್ ಕಬೀರ್ ಸಬ್ಬೀರ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಯಾ ವಿರುದ್ಧವೂ ಮಂಗಳವಾರ ಪ್ರಕರಣ ದಾಖಲಿಸಲಾಗಿತ್ತು.
ಆರೋಪಿಗಳು ಕಂಪೆನಿಯ ಅಧ್ಯಕ್ಷ ಅಹ್ಮದ್ ಅಕ್ಬರ್ ಸೋಹನ್ ಅವರಿಂದ 21 ಕೋಟಿ ಟಾಕ ಲಂಚ ಸ್ವೀಕರಿಸಿದ್ದಾರೆ ಎಂದು ಭ್ರಷ್ಟಾಚಾರ ವಿರೋಧಿ ಆಯೋಗ ಹೇಳಿದೆ. ಸೋಹನ್ ಪುತ್ರ ಶಫಿಯತ್ ಶೋಭನ್ ಸನ್ವೀರ್, ಸಬ್ಬೀರ್ ಅವರನ್ನು ಹತ್ಯೆಮಾಡಿರುವುದಾಗಿ ಹೇಳಲಾಗಿದೆ.
ಬಾಂಗ್ಲಾದೇಶ್ ರಾಷ್ಟ್ರೀಯ ಪಕ್ಷದ ಹಿರಿಯ ಜಂಟಿ ಮಹಾ ಕಾರ್ಯದರ್ಶಿಯೂ ಆಗಿರುವ ರೆಹ್ಮಾನ್ ಈ ಅವ್ಯವಹಾರ ಸಂಚನ್ನು ರೂಪಿಸಿದ್ದಾರೆ ಎಂದು ಸಮಿತಿಯು ದೂರಿದೆ.
|