ಯಾಂಗೋನ್: ಭೀಕರ ಚಂಡಮಾರುತ ನರ್ಗೀಸ್ ಮ್ಯಾನ್ಮಾರನ್ನು ಕಂಗೆಡಿಸಿದ್ದರೂ, ವಿದೇಶಿ ನೆರವಿನ ಕುರಿತ ಅಲ್ಲಿನ ನಾಯಕರ ಧೋರಣೆಯು ಅಂತಾರಾಷ್ಟ್ರೀಯ ಕಳವಳ ಹುಟ್ಟುಹಾಕಿದೆ. ಪರಿಹಾರ ಸಾಮಾಗ್ರಿಗಳನ್ನು ಹೊತ್ತ ವಿಮಾನಗಳು, ಆಹಾರಸಾಮಾಗ್ರಿಗಳ ಪೂರೈಕೆ ಸಲುವಾಗಿ ಮ್ಯಾನ್ಮಾರ್‌ಗೆ ತಲುಪಿದ್ದರೂ, ವಿಮಾನದ ಭೂಸ್ಪರ್ಶಕ್ಕೆ ಅವಕಾಶ ನೀಡದಿರುವುದರಿಂದ ಇವುಗಳ ವಿತರಣೆ ಸಾಧ್ಯವಾಗಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.
ಕಾಲಮಿಂಚಿ ಹೋಗುವ ಮುನ್ನವೇ ನೆರವಿನ ಸಾಮಗ್ರಿಗಳ ಪ್ರವೇಶಕ್ಕೆ ಅವಕಾಶ ನೀಡುವಂತೆ ಪ್ರಾದೇಶಿಕ ಆಸಿಯಾನ್ ಗುಂಪು ಜುಂತಾ ಮಿಲಿಟರಿ ಆಳ್ವಿಕೆಯನ್ನು ಒತ್ತಾಯಿಸಿದೆ.
ಅಮೆರಿಕದ ರಾಜತಾಂತ್ರಿಕರೊಬ್ಬರು ಮ್ಯಾನ್ಮಾರ್ ಪರಿಸ್ಥಿತಿ ಶೋಚನೀಯವಾಗಿದ್ದು, ಸತ್ತವರ ಸಂಖ್ಯೆ ಒಂದು ಲಕ್ಷ ಮುಟ್ಟಬಹುದೆಂದು ಎಚ್ಚರಿಸಿದ್ದಾರೆ. ತೀವ್ರ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದ ಪರಿಹಾರ ತಂಡಗಳು ಆಘಾತಕಾರಿ ದೃಶ್ಯಗಳ ಬಗ್ಗೆ ತಿಳಿಸಿವೆ
ಜಮೀನುಗಳಲ್ಲಿ ದೇಹಗಳು ಚೆಲ್ಲಾಪಿಲ್ಲಿಯಾಗಿ ಕೊಳೆತುಬಿದ್ದಿರುವ ಮತ್ತು ಬದುಕುಳಿದ ಹತಾಶ ಜನರು ಆಹಾರ ಮತ್ತು ನೀರಿಗಾಗಿ ಪರಿತಪಿಸುವ ಹೃದಯವಿದ್ರಾವಕ ದೃಶ್ಯಗಳು ಕಂಡುಬರುತ್ತಿದೆಯಾಗಿ ಹೇಳಿದ್ದಾರೆ. ಚಂಡಮಾರುತದಿಂದಾಗಿ ಎಲ್ಲಾ ಸಂಪರ್ಕ ವ್ಯವಸ್ಥೆಗಳು ಕಡಿತಗೊಂಡಿವೆ. ಕೊಳೆಯುತ್ತಿರುವ ಶವಗಳು ಹಾಗೂ ಇನ್ನಿತರ ಅವಶೇಷಗಳಿಂದ ಅಲ್ಲಿ ಸಾಂಕ್ರಾಮಿಕ ರೋಗದ ಭೀತಿ ಉಂಟಾಗಿದೆ. ಸಂತ್ರಸ್ತ ಮಂದಿ ಅನ್ನಾಹಾರ, ಶುದ್ಧ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
|