ತುರ್ತುಪರಿಸ್ಥಿತಿಯ ವೇಳೆ ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ವಜಾ ಮಾಡಿರುವ ನ್ಯಾಯಾಧೀಶರ ಮರುನೇಮಕದ ಕುರಿತಂತೆ, ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್) ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನಡುವಿನ ಭಿನ್ನಾಭಿಪ್ರಾಯವು ತಾರಕಕ್ಕೇರಿದ್ದು, ಪಿಎಂಎಲ್-ಎನ್ ತನ್ನ ಮಂತ್ರಿಗಳನ್ನು ಹಿಂತೆಗೆಯಲು ನಿರ್ಧರಿಸುವಲ್ಲಿಗೆ ತಲುಪಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ವಜಾಗೊಂಡಿರುವ ನ್ಯಾಯಧೀಶರನ್ನು ಮೇ 12ರೊಳಗೆ ಮರುನೇಮಕ ಮಾಡಲು ಸ್ವಯಂ ಗಡು ಹೇರಿಕೊಳ್ಳಲಾಗಿದ್ದು, ಈ ಕುರಿತಂತೆ ಪಿಎಂಎಲ್-ಎನ್ ಮುಖ್ಯಸ್ಥ ಶರೀಫ್ ಹಾಗೂ ಪಿಪಿಪಿ ಮುಖ್ಯಸ್ಥ ಅಸಿಫ್ ಅಲಿ ಜರ್ದಾರಿಯವರ ನಡುವೆ ವಾರಾಂತ್ಯದಲ್ಲಿ ಲಂಡನ್‌ನಲ್ಲಿ ನಡೆದ ಮಾತುಕತೆಗಳು ಅಂತಿಮ ನಿರ್ಣಯ ಕೈಗೊಳ್ಳಲು ವಿಫಲವಾಗಿದ್ದವು. ಈ ಹಿನ್ನೆಲೆಯಲ್ಲಿ ಸೋಮವಾರ ಇಸ್ಲಾಮಾಬಾದಿನಲ್ಲಿ ಪಿಎಂಎಲ್-ಎನ್ ಪಕ್ಷವು ಶರೀಫ್ ಅಧ್ಯಕ್ಷತೆಯಲ್ಲಿ ಪಕ್ಷದ ಉನ್ನತ ನಾಯಕರು ಹಾಗೂ ಸಂಸದರ ಸಭೆ ನಡೆಸಿದೆ.
ಇದಕ್ಕೆ ಪೂರಕವೆಂಬಂತೆ ಕೆಲವು ಪಿಎಂಎಲ್-ಎನ್ ಸಚಿವರು ತಮ್ಮ ಅಧಿಕೃತ ಕಾರುಗಳನ್ನೂ ಹಿಂತಿರುಗಿಸಿದ್ದಾರೆ. ಇದಲ್ಲದೆ, ನ್ಯಾಯಾಂಗದ ಪುನಸ್ಥಾಪನೆಗಾಗಿ ವಕೀಲರು ಹಲವಾರು ನಗರಗಳಲ್ಲಿ ರಾಲಿಗಳನ್ನು ನಡೆಸಿದ್ದಾರೆ.
ಈ ಹಿಂದೆ ದುಬೈಯಲ್ಲಿ ಶರೀಫ್ ಹಾಗೂ ಜರ್ದಾರಿ ನಡುವೆ ಎರಡು ದಿನಗಳ ಮಾತುಕತೆ ನಡೆದ ಬಳಿಕ, ಪದಚ್ಯುತ ನ್ಯಾಯಾಧೀಶರನ್ನು ಮೇ 12ರಂದು ಸಂಸದೀಯ ನಿರ್ಣಯ ಮೂಲಕ ಪುನಸ್ಥಾಪಿಸಲಾಗುವುದು ಎಂದು ಘೋಷಿಸಲಾಗಿತ್ತು.
|