ಢಾಕಾ: ಬಾಂಗ್ಲಾ ದೇಶದಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ಅವಾಮಿ ಲೀಗ್ ಪ್ರಚಂಡ ಬಹುಮತ ಗಳಿಸಿದೆ. ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ಹೇರಿದ ಬಳಿಕ ನಡೆಯುತ್ತಿರುವ ಪ್ರಥಮ ಚುನಾವಣೆ ಇದಾಗಿದ್ದು, ಮುಂಬರುವ ಡಿಸೆಂಬರ್‌ನಲ್ಲಿ ಪ್ರಧಾನ ಚುನಾವಣೆಗಳು ನಡೆಯಲಿವೆ.
ಅವಾಮಿ ಲೀಗ್ ನೇತೃತ್ವದ 14 ಪಕ್ಷಗಳ ಮೈತ್ರಿ ಕೂಟವು ಎಲ್ಲಾ ನಾಲ್ಕು ಪ್ರಮುಖ ನಗರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಒಂಭತ್ತರಲ್ಲಿ ಎಂಟು ಸ್ಥಾನಗಳನ್ನು ಗೆದ್ದುಕೊಂಡಿದೆ. ಮಾಜಿ ಪ್ರಧಾನಿ ಖಾಲಿದಾ ಜಿಯಾ ಅವರ ಬಾಂಗ್ಲಾದೇಶ್ ನ್ಯಾಶನಲಿಸ್ಟ್ ಪಕ್ಷದ ಅಭ್ಯರ್ಥಿಗಳನ್ನು ಅವಾಮಿ ಲೀಗ್ ಅಭ್ಯರ್ಥಿಗಳು ಸೋಲಿಸಿದ್ದಾರೆ.
ಅನಧಿಕೃತ ವರದಿಗಳ ಪ್ರಕಾರ, ಬದ್ರುದ್ದೀನ್ ಕಮ್ರಾನ್, ತಲುಕ್ದಾರ್ ಅಬ್ದುಲ್ ಖಾಲೆಕ್ಯೂ, ಖೈರುಜ್ಜಮಾನ್ ಲಿಟೋನ್ ಮತ್ತು ಶೌಕತ್ ಹುಸೇನ್ ಹಿರಾನ್ ಅವರುಗಳು ಅನುಕ್ರಮವಾಗಿ ಈಶಾನ್ಯ ಸಿಲೆಟ್, ನೈರುತ್ಯ ಕುಲ್ನಾ, ವಾಯುವ್ಯ ರಾಜ್‌ಶಾಹಿ ಮತ್ತು ನೈರುತ್ಯ ಬರಿಸಲ್ ನಗರಗಳ ಮೇಯರ್‌ಗಳಾಗಿ ಆಯ್ಕೆಯಾಗಿದ್ದಾರೆ.
|