ಟೋಕಿಯೋ: ವಿಶ್ವದಲ್ಲಿ ನಡೆದಿರುವ ಪ್ರಥಮ ಅಣುಬಾಂಬ್ ದಾಳಿಗೆ ಬುಧವಾರಕ್ಕೆ 63 ವರ್ಷಗಳು ಸಲ್ಲುತ್ತಿರುವ ಹಿನ್ನೆಲೆಯಲ್ಲಿ ಜಪಾನಿನ ಹಿರೋಶಿಮಾ ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು.
ಇದೇವೇಳೆ ಮಾತನಾಡಿದ ನಗರದ ಮೇಯರ್, ಅಣ್ವಸ್ತ್ರಗಳನ್ನು ತ್ಯಜಿಸಲು ನಿರಾಕರಿಸುತ್ತಿರುವ ರಾಷ್ಚ್ರಗಳನ್ನು ತರಾಟೆಗೆ ತೆಗೆದುಕೊಂಡರು.
'ಲಿಟ್ಲ್ ಬಾಯ್' ಹೆಸರಿನಲ್ಲಿ 63 ವರ್ಷಗಳ ಹಿಂದೆ ಮುಂಜಾನೆ 8.15 ವೇಳೆಗೆ ದಾಳಿ ನಡೆಸಿದ್ದು, ಬುಧವಾರ ನಿಖರವಾಗಿ ಅದೇ ಸಮಯಕ್ಕೆ ಈ ಕರಾಳದಿನಾಚರಣೆ ನಡೆಸಲಾಯಿತು. ಈ ದಾಳಿಯ ವೇಳೆ ಸಾವಿರಾರು ಮಂದಿ ತಕ್ಷಣ ಸಾವಿಗೀಡಾಗಿದ್ದರೆ, ಬಳಿಕ ರೇಡಿಯೇಶನ್ ಪರಿಣಾಮದಿಂದ ಹಲವಾರು ಮಂದಿ ಮೃತರಾಗಿದ್ದರು.
ಶಾಂತಿ ಸ್ಮಾರಕ ಉದ್ಯಾನವನದಲ್ಲಿ ನಡೆಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೇಯರ್ ತಡ್ಟೋಶಿ ಅಕಿಬಾ ಅವರು, ಅಣ್ವಸ್ತ್ರಗಳ ನಿಷೇಧಕ್ಕೆ ಒತ್ತಾಯಿಸಿದರು. ಈ ಕಾರ್ಯಕ್ರಮದಲ್ಲಿ ದಾಳಿಯಲ್ಲಿ ಪಾರಾದ ಹಿರಿಯರಾದ ಪ್ರಧಾನಿ ಯಾಸುವೋ ಫುಕುಡಾ ಮತ್ತು ಚೀನಾ ರಾಯಭಾರಿ ಪಾಲ್ಗೊಂಡಿದ್ದರು.
"ಅಣ್ವಸ್ತ್ರಗಳನ್ನು ತೊಡೆದು ಹಾಕಲು ಕರೆ ನೀಡಿ ಕಳೆದ ವರ್ಷ ಜಪಾನ್ ವಿಶ್ವಸಂಸ್ಥೆಯಲ್ಲಿ ಮಂಡಿಸಿರುವ ಮಸೂದೆಯನ್ನು 170 ರಾಷ್ಟ್ರಗಳು ಬೆಂಬಲಿಸಿವೆ. ಅಮೆರಿಕ ಸೇರಿದಂತೆ ಮೂರು ರಾಷ್ಟ್ರಗಳು ಮಾತ್ರ ಈ ಮಸೂದೆಯನ್ನು ವಿರೋಧಿಸಿವೆ" ಎಂದು ಅಕಿಬಾ ನುಡಿದರು.
1945ರಲ್ಲಿ ನಡೆದ ಈ ದಾಳಿಯ ಪರಿಣಾಮದಿಂದ ಇನ್ನೂ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇನ್ನಷ್ಟು ಸಹಾಯ ನೀಡುವುದಾಗಿ ಈ ಸಂದರ್ಭದಲ್ಲಿ ಅವರು ಘೋಷಿದರು.
ದ್ವಿತೀಯ ಮಹಾಯುದ್ಧದ ಅಂತ್ಯದ ವೇಳೆಗೆ ಹಿರೋಶಿಮಾದ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿತ್ತು. ಇದಾದ ಕೆಲವು ದಿನಗಳ ಬಳಿಕ ದಕ್ಷಿಣ ಜಪಾನಿನ ನಗರ ನಾಗಸಾಕಿಯ ಮೇಲೆ ದಾಳಿ ನಡೆಸಲಾಗಿತ್ತು.
ಈ ದಾಳಿಯಿಂದ ಪಾರಾಗಿ ಬದುಕುಳಿದವರು ಸರಾಸರಿ 75ರ ಹರೆಯಕ್ಕಿಂತ ಮೇಲ್ಪಟ್ಟವರಾಗಿದ್ದು ಇವರ ಮೇಲಿನ ಭಾವನಾತ್ಮಕ ಹಾನಿಯ ಕುರಿತು ಸಮೀಕ್ಷೆ ನಡೆಸಲಾಗುವುದು ಎಂದು ಅಕಿಬಾ ಈ ಸಂದರ್ಭದಲ್ಲಿ ನುಡಿದರು.
|