ಚೀನದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ತನ್ನ ಕಾರ್ಯಕ್ರಮವನ್ನು ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಇದ್ದಕ್ಕಿದ್ದಂತೆ ರದ್ದುಗೊಳಿಸಿದ್ದಾರೆ.
ಅಧ್ಯಕ್ಷರಿಗೆ ಛೀಮಾರಿ ಹಾಕುವ ಕುರಿತಂತೆ ಆಡಳಿತಾರೂಢ ಮಿತ್ರಪಕ್ಷಗಳಾದ ಪಿಪಿಪಿ ಹಾಗೂ ಪಿಎಂಎಲ್(ಎನ್)ಗಳು ಮಂಗಳವಾರ ಮಹತ್ವದ ಮಾತುಕತೆ ನಡೆಸಿರುವ ಹಿನ್ನೆಲೆಯಲ್ಲಿ ಭೀತಿಗೊಂಡಿರುವ ಮುಷರಫ್ ತನ್ನ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ.
ನಿಗದಿಯಾದ ಕಾರ್ಯಕ್ರಮದಂತೆ ಮುಷರಫ್ ಬುಧವಾರ ಬೀಜಿಂಗ್‌ಗೆ ಪ್ರಯಾಣಿಸಬೇಕಿತ್ತು. ಆದರೆ, ಅವರು ಕಾರ್ಯಕ್ರಮ ರದ್ದು ಪಡಿಸಿರುವುದಾಗಿ ವಿದೇಶಾಂಗ ಕಾರ್ಯಾಲಯದ ವಕ್ತಾರ ಮೊಹ್ಮದ್ ಸಾದಿಕ್ ಹೇಳಿದ್ದಾರಾದರೂ, ಈ ನಿರ್ಧಾರಕ್ಕೆ ಕಾರಣವೇನು ಎಂದು ತಿಳಿಸಿಲ್ಲ.
ಅಧ್ಯಕ್ಷರಿಗೆ ಛೀಮಾರಿ ಹಾಕಲು ಮೈತ್ರಿಕೂಟವು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಮುಷರಫ್ ತನ್ನ ಪ್ರಯಾಣ ರದ್ದು ಪಡಿಸಿದ್ದಾರೆ ಎಂದು ಇತರ ಮೂಲಗಳು ಹೇಳಿವೆ.
ಅಲ್ಲದೆ, ಸಂಭಾವ್ಯ ಛೀಮಾರಿ ಪರಿಸ್ಥಿತಿ ಎದುರಾದಲ್ಲಿ ಅದನ್ನು ಎದುರಿಸಲು ಕಾರ್ಯತಂತ್ರ ರೂಪಿಸಲು, ಅಧ್ಯಕ್ಷರು ತನಗೆ ನಿಕಟವಾಗಿರುವ ಸಾಂವಿಧಾನಿಕ ಮತ್ತು ಕಾನೂನು ಸಲಹೆಗಾರರ ಸಭೆಯನ್ನು ರಾವಲ್ಪಿಂಡಿಯ ತನ್ನ ಶಿಬಿರದಲ್ಲಿ ಕರೆದಿದ್ದಾರೆ ಎಂದೂ ಮೂಲಗಳು ಹೇಳಿವೆ.
ಪಿಎಂಎಲ್(ಎನ್) ಮುಖ್ಯಸ್ಥ ನವಾಜ್ ಶರೀಫ್ ಹಾಗೂ ಪಿಪಿಪಿ ಮುಖ್ಯಸ್ಥ ಅಸಿಫ್ ಅಲಿ ಜರ್ದಾರಿ ಅವರ ನಡುವೆ ಮಂಗಳವಾರ ನಡೆದ ಎಡೆಬಿಡದ ಸಭೆಯಲ್ಲಿ ಮುಷರಫ್ ವಿರುದ್ಧದ ಖಂಡನಾ ನಿರ್ಣಯವನ್ನು ಜಾರಿಗೊಳಿಸುವ ಹಾದಿಗಳ ಕುರಿತು ನಿರ್ಣಯ ಕೈಗೊಳ್ಳಲಾಗಿದೆ ಎಂದೂ ಮೂಲಗಳು ಹೇಳಿವೆ.
ಆದರೆ ಈ ಸಭೆಯ ಕುರಿತು ಉಭಯ ಪಕ್ಷಗಳು ಬಾಯ್ಬಿಟ್ಟಿಲ್ಲ. ಮಾತುಕತೆಯ ಕುರಿತು ಯಾವುದೇ ಹೇಳಿಕೆಯನ್ನು ನೀಡಿಲ್ಲ.
|