ಕುಖ್ಯಾತ ಬೇಹುಗಾರಿಕಾ ಸಂಸ್ಥೆ ಐಎಸ್ಐಯನ್ನು ಪಾಕಿಸ್ತಾನದ ಆಂತರಿಕ ಸಚಿವಾಲಯದ ನಿಯಂತ್ರಣಕ್ಕೆ ತರುವ ಮತ್ತು ರಾಷ್ಟ್ರಪತಿ ಮತ್ತು ಸೇನಾ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದ್ದ ವಿವಾದಾಸ್ಪದ ಆದೇಶಕ್ಕೆ ಪಾಕಿಸ್ತಾನ ಸರಕಾರ ತಡೆ ನೀಡಿದ್ದು, 'ಬೇಹುಗಾರಿಕಾ ಪ್ರಯತ್ನಗಳ ಸಮನ್ವಯ'ಕ್ಕಾಗಿ ಮತ್ತಷ್ಟು ಯೋಚಿಸುವ ಅಗತ್ಯವಿದೆ ಎಂಬ ಕಾರಣ ನೀಡಿದೆ.
ಜುಲೈ 26ರಂದು ಸರಕಾರ ಹೊರಡಿಸಿದ್ದ ಆದೇಶದ ಪ್ರಕಾರ, ಐಎಸ್ಐ ಮತ್ತು ಗುಪ್ತಚರ ಮಂಡಳಿ (ಐಬಿ)ಗಳು ಆಂತರಿಕ ಸಚಿವಾಲಯದ ಅಂಕಿತಕ್ಕೆ ಒಳಪಡುತ್ತಿದ್ದವು. ಐಎಸ್ಐಯ ರೆಕ್ಕೆ ಕತ್ತರಿಸುವ ನಿಟ್ಟಿನಲ್ಲೇ ಈ ರೀತಿ ಮಾಡಲಾಗಿತ್ತು.
ಆದರೆ ಸೇನೆ ಮತ್ತು ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷರಫ್ ಅವರ ಒತ್ತಡದಿಂದಾಗಿ, ಕೇವಲ 24 ಗಂಟೆಗಳಲ್ಲೇ ಸ್ಪಷ್ಟನೆಯೊಂದನ್ನು ಸರಕಾರ ಹೊರಡಿಸಿತ್ತು. ಐಎಸ್ಐ ಪ್ರಧಾನಮಂತ್ರಿಗೇ ವರದಿ ಒಪ್ಪಿಸಬೇಕು ಎಂಬುದು ಅದರ ಸಾರಾಂಶ. ಆದರೆ ಹಿಂದಿನ ಆದೇಶವನ್ನು ಅಧಿಕೃತವಾಗಿ ವಾಪಸ್ ತೆಗೆದುಕೊಂಡಿರಲಿಲ್ಲ.
ಬೇಹುಗಾರಿಕಾ ಪ್ರಯತ್ನಗಳ ಸಮನ್ವಯಕ್ಕಾಗಿ ಫೆಡರಲ್ ಸರಕಾರವು ಮತ್ತಷ್ಟು ಪರಿಶೀಲನೆ ನಡೆಸಲು ಪ್ರಧಾನಮಂತ್ರಿ ಇಚ್ಛಿಸಿದ್ದಾರೆ ಎಂದು ಸರಕಾರವು ಮಂಗಳವಾರ ರಾತ್ರಿ ಹೊರಡಿಸಿದ ಅಧಿಸೂಚನೆಯೊಂದರಲ್ಲಿ ತಿಳಿಸಿದೆ. ಪ್ರಧಾನಿ ಯೂಸುಫ್ ರಜಾ ಗಿಲಾನಿ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಅಸಿಫ್ ಅಲಿ ಜರ್ದಾರಿ ಭೇಟಿಯ ಬಳಿಕ ಈ ಆದೇಶ ಹೊರಬಿದ್ದಿತ್ತು.
ಐಎಸ್ಐ ಮತ್ತು ಗುಪ್ತದಳಗಳನ್ನು ಆಂತರಿಕ ಸಚಿವಾಲಯದ ಹದ್ದುಬಸ್ತಿನಲ್ಲಿರಿಸುವ ಕ್ಯಾಬಿನೆಟ್ ಆದೇಶವನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ ಎಂದು ಈ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕಾಬೂಲ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಮೇಲಿನ ದಾಳಿಯ ಪ್ರಮುಖ ರೂವಾರಿ ಎಂದು ಭಾರತ ಮತ್ತು ಅಫ್ಘಾನಿಸ್ತಾನಗಳು ದೂಷಿಸಿದ ಬಳಿಕ, ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳು ಐಎಸ್ಐಗೆ ಕಡಿವಾಣ ಹಾಕುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಿದ್ದವು.
|