ಭಯೋತ್ಪಾದನೆಗೆ ಕುಮ್ಮುಕ್ಕು ನೀಡಿರುವ ಆಪಾನೆಯ ಮೇರೆಗೆ ಅಲ್-ಖೈದಾ ನಾಯಕ ಒಸಮಾ ಬಿನ್ ಲಾಡೆನ್‌ನ ಮಾಜಿ ಚಾಲಕನನ್ನು ದೋಷಿ ಎಂದು ತೀರ್ಮಾನಿಸಲಾಗಿದೆ. ಆದರೆ, ಆತನ ಮೇಲಿರುವ ಸಂಚಿನ ಆರೋಪದ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಗ್ವಾಂಟೆನಾಮ ಕೊಲ್ಲಿಯಲ್ಲಿ ನಡೆಯುತ್ತಿರುವ ಭಯೋತ್ಪಾದನಾ ವಿಚಾರಣೆಯಲ್ಲಿ ಸೇನಾ ನ್ಯಾಯದರ್ಶಿ ಮಂಡಳಿಯು ನೀಡಿರುವ ಪ್ರಥಮ ತೀರ್ಪಿನಲ್ಲಿ ಚಾಲಕ ಸಲೀಂ ಅಹ್ಮದ್ ಹಮ್ದಾನ್‌ನನ್ನು ದೋಷಿ ಎಂದು ತೀರ್ಮಾನಿಸಲಾಗಿದೆ.
ಮೂರುದಿನಗಳ ಕಾಲ ಎಚ್ಚರಿಕೆಯಿಂದ ಮಾಡಲಾಗಿರುವ ವಿಚಾರಣೆ ಬಳಿಕ ಪೆಂಟಗಾನ್‌ನ ಆರು ಸದಸ್ಯತ್ವದ ನ್ಯಾಯ ಮಂಡಳಿಯು ಭಿನ್ನ ತೀರ್ಮಾನಕ್ಕೆ ಬಂದಿದೆ.
ಭಯೋತ್ಪಾದನೆಯ ವಿರುದ್ಧ ಯುದ್ಧದಡಿಯಲ್ಲಿ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಶ್ ಅವರು ರೂಪಿಸಿರುವ ವಿಶೇಷ ನ್ಯಾಯಮಂಡಳಿಯು ನಡೆಸುತ್ತಿರುವ ಪ್ರಥಮ ವಿಚಾರಣೆ ಇದಾಗಿದ್ದು, ಇದು ವಿವಾದಾತ್ಮಕ ಸೇನಾ ಆಯೋಗ ವ್ಯವಸ್ಥೆಗೆ ನಿರ್ಣಾಯಕ ಪರೀಕ್ಷೆಯಂತೆ ಕಂಡು ಬಂದಿದೆ.
ಈ ತೀರ್ಪಿನ ಕುರಿತು ಕ್ಷಿಪ್ರ ಪ್ರತಿಕ್ರಿಯೆ ಸೂಚಿಸಿರುವ ಶ್ವೇತಭವನವು ಸಲೀಂ ವಿಚಾರಣೆ ನ್ಯಾಯೋಚಿತವಾಗಿದೆ ಎಂದು ಹೇಳಿದೆ.
ಎರಡು ವಾರಗಳ ಕಾಲದ ವಿಚಾರಣೆ ವೇಳೆ ನ್ಯಾಯಾಂಗ ಇಲಾಖೆಯ ಅಭಿಯೋಜಕ ಜಾನ್ ಮರ್ಪಿ ಅವರು ಸಲೀಂನನ್ನು ಅಲ್-ಖೈದಾ ಸೇನಾನಿ ಎಂದು ನುಡಿದರು. "ಆತನಿಗೆ ಗಾಯಗಳಾಗಿವೆ ಮತ್ತು ಆತ ಯಾರೊಂದಿಗೆ ಕಾರ್ಯನಿರ್ವಹಿಸಿದ್ದಾನೋ, ಆ ಜನರು ಜಗತ್ತನ್ನು ಗಾಯಗೊಳಿಸಿದ್ದಾರೆ" ಎಂದು ಮರ್ಪಿ ನ್ಯಾಯ ಮಂಡಳಿ ಎದುರು ತನ್ನ ವಾದಮಂಡಿಸಿದ್ದಾರೆ.
ಆತನ ಪರ ಮಂಡಿಸಿದ ವಾದದಲ್ಲಿ, ಸಲೀಂ ಒಸಮಾನಿಗೆ ಚಾಲಕ ಮಾತ್ರವಾಗಿದ್ದ ಮತ್ತು ಆತ ಅಲ್-ಖೈದಾ ನಾಯಕತ್ವದಲ್ಲಿ ಯಾವುದೇ ಉನ್ನತ ಸ್ಥಾನವನ್ನು ಹೊಂದಿರಲಿಲ್ಲ ಎಂದು ಸಮರ್ಥಿಸಲಾಯಿತು.
ಒಂದಿಲ್ಲ ಒಂದು ದಿನ ಒಸಮಾನನ್ನು ಸೆರೆಹಿಡಿಯಬಹುದು ಇಲ್ಲವೇ ಕೊಲ್ಲಬಹುದು. ಒಸಮಾ ಎಸಗಿರುವ ಅಪರಾಧಕ್ಕಾಗಿ ಆತನ ಚಾಲಕನನ್ನು ಶಿಕ್ಷಿಸಬಾರದು ಎಂದು ಆತನ ಪರವಾಗಿ ನ್ಯಾಯಾಲಯ ನೇಮಿಸಿರುವ ಸೇನಾ ಅಟಾರ್ನಿ ಬ್ರಿಯಾನ್ ಮೈಜರ್ ನ್ಯಾಯ ಮಂಡಳಿ ಎದುರು ವಾದಿಸಿದರು.
|