ಒಲಿಂಪಿಕ್ಸ್ ಮಹಾಕ್ರೀಡಾಕೂಟದ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ತನ್ನ ಪರಿವಾರ ಸಮೇತ ಬೀಜಿಂಗ್‌ನಲ್ಲಿ ಬಂದಿಳಿದಿದ್ದಾರೆ.
ದ್ವಿಪಕ್ಷೀಯ ಸಂಬಂಧಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೀಜಿಂಗ್‌ಗೆ ಮೂರು ದಿನಗಳ ಪ್ರಯಾಣ ಹಮ್ಮಿಕೊಂಡಿರುವ ಸೋನಿಯಾ, ಕಮ್ಯೂನಿಸ್ಟ್ ರಾಷ್ಟ್ರದ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಸೋನಿಯಾರೊಂದಿಗೆ ಪುತ್ರ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ, ಅಳಿಯ ರಾಬರ್ಟ್ ವಾದ್ರ ಹಾಗೂ ಇಬ್ಬರು ಮೊಮ್ಮಕ್ಕಳೂ ಬೀಜಿಂಗ್ ತೆರಳಿದ್ದಾರೆ.
ಒಂದೇ ವರ್ಷದಲ್ಲಿ ಎರಡನೆ ಬಾರಿಗೆ ಸೋನಿಯಾ ಚೀನ ಭೇಟಿ ನೀಡುತ್ತಿದ್ದು, ಇವರೊಂದಿಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಆನಂದ್ ಶರ್ಮಾ ಅವರೂ ಪ್ರಯಾಣ ಬೆಳೆಸಿದ್ದಾರೆ. ಚೀನ ಅಧ್ಯಕ್ಷ ಹು ಜಿಂತಾವೋ ಅವರ ಉತ್ತಾರಾಧಿಕಾರಿಯಾಗಲಿರುವ ಉಪಾಧ್ಯಕ್ಷ ಕ್ಸಿ-ಜಿಂಪಿಂಗ್ ಅವರನ್ನು ಭೇಟಿ ಮಾಡಲಿರುವ ಸೋನಿಯಾ, ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಹೆಚ್ಚಿಸುವ ಕುರಿತು ಮಾತುಕತೆ ನಡೆಸಲಿದ್ದಾರೆ.
ಸೋನಿಯಾ ಹಾಗೂ ರಾಹುಲ್ ಗಾಂಧಿಯವರಿಗೆ ಅಧ್ಯಕ್ಷ ಹು ಜಿಂತಾವೋ ಅವರು ಗುರವಾರ ರಾತ್ರಿ ಔತಣ ಕೂಟವನ್ನು ಹಮ್ಮಿಕೊಂಡಿದ್ದರು.
|