ಇತ್ತೀಚೆಗಷ್ಟೇ ಸ್ಟಾಲ್ಟ್ ವೇಲರ್ ಹಡಗನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ, ಸೊಮಾಲಿ ಕಡಲ್ಗಳ್ಳರು ಶುಕ್ರವಾರ ಮತ್ತೆ ಆಡನ್ ಕರಾವಳಿ ತೀರದಲ್ಲಿ 25ಮಂದಿ ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಕಾರ್ಗೋ ಹಡಗನ್ನು ಅಪಹರಿಸಿದೆ.
ಶಸ್ತ್ರ ಸಜ್ಜಿತ ಕಡಲ್ಗಳ್ಳರ ಪಡೆಯೊಂದು ಕೆಮಿಕಲ್ ಹೊತ್ತೊಯ್ಯುತ್ತಿದ್ದ 25ಮಂದಿ ಭಾರತೀಯ ಸಿಬ್ಬಂದಿಗಳು ಸೇರಿದಂತೆ ಒಟ್ಟು 31ಮಂದಿ ಇರುವ ಕಾರ್ಗೋ ಹಡಗನ್ನು ಅಪಹರಿಸಿರುವುದಾಗಿ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 15ರಂದು ಎಂ.ಟಿ.ಸ್ಟಾಲ್ಟ್ ವೇಲರ್ ಹಡಗನ್ನು ಅಪಹರಿಸಿದ್ದು, ಎರಡು ತಿಂಗಳ ಬಳಿಕ ಬಿಡುಗಡೆ ಮಾಡಿದ್ದರು. ಬಳಿಕ ಏಳು ಮಂದಿ ಭಾರತೀಯ ಸಿಬ್ಬಂದಿಗಳಿದ್ದ ಹಾಂಗ್‌ಕಾಂಗ್ ಹಡಗನ್ನು ಕಳೆದವಾರ ಅಪಹರಿಸಿದ್ದರು.
ಆ ನಿಟ್ಟಿನಲ್ಲಿ ಅಪಹೃತರ ರಕ್ಷಣೆಗಾಗಿ ಎರಡು ಹೆಲಿಕ್ಯಾಪ್ಟರ್‌ಗಳನ್ನು ಕಳುಹಿಸಲಾಗಿದ್ದು, ಅವರ ಸಂಪರ್ಕಕ್ಕಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದೀಗ ಮತ್ತೆ 31ಸಿಬ್ಬಂದಿಗಳ ಎಂ.ಟಿ.ಬಿಸ್ಗಾಲಿಯಾ ಹಡಗನ್ನು ಅಪಹರಿಸಿದ್ದು, ಇದರಲ್ಲಿ ಭಾರತದ 25ಮಂದಿ ಸೇರಿದಂತೆ ಮೂವರು ಬಾಂಗ್ಲಾದೇಶಿ, ಇಬ್ಬರು ಬ್ರಿಟನ್ ಹಾಗೂ ಐರಿಶ್ ಪ್ರಜೆಗಳಿರುವುದಾಗಿ ಮುಂಬೈನ ನೌಕಯಾನ ಡೈರೆಕ್ಟರ್ ಜನರಲ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. |