ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಆರೋಪಿಸಿರುವ ಭಾರತ ಮೂಲದ ಖ್ಯಾತ ಲೇಖಕ ಸಲ್ಮಾನ್ ರಶ್ದೀ, ಭಯೋತ್ಪಾದನೆಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನಕ್ಕೆ ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಕಠಿಣ ಎಚ್ಚರಿಕೆ ನೀಡಬೇಕೆಂದು ಹೇಳಿದ್ದಾರೆ.
"ಅದು ಪಾಕಿಸ್ತಾನ ಕೃತ್ಯವೇ ಎಂಬ ಪ್ರಶ್ನೆಯೇ ಬರುವುದಿಲ್ಲ. ಇದನ್ನು ನೀವು ಯುದ್ಧವೆಂದೇ ಪರಿಗಣಿಸಬಹುದು. ಪಾಕಿಸ್ತಾನದ ಜತೆ ಪಾಶ್ಚಿಮಾತ್ಯ ದೇಶಗಳು ಕಠಿಣವಾಗಿ ವರ್ತಿಸಬೇಕಿದೆ. ಅದು ಒಂದು ಕಡೆಯಿಂದ ಭಯೋತ್ಪಾದಕರ ವಿರುದ್ಧ ಹೋರಾಡುತ್ತಾ ಮತ್ತೊಂದು ಕಡೆ ಅವರಿಗೆ ಸಹಕಾರ ನೀಡುತ್ತಿದೆ" ಎಂದು ಸಲ್ಮಾನ್ ರಶ್ದೀ ಟೀಕಿಸಿದರು.
"ನಾನು ಹುಟ್ಟಿ ಬೆಳೆದ ನಗರದ ಮೇಲೆ ಉಗ್ರರ ಅಟ್ಟಹಾಸವನ್ನು ಗಮನಿಸುವಾಗ ನಿಜಕ್ಕೂ ದುಃಖವಾಗುತ್ತದೆ. ಲಂಡನ್, ನ್ಯೂಯಾರ್ಕ್ ಮತ್ತು ಮುಂಬೈ ನನ್ನ ಇಷ್ಟದ ನಗರಗಳು. ಉಗ್ರರ ದಾಳಿಯನ್ನು ಬ್ರಿಟನ್ ಕಠಿಣವಾಗಿ ಪರಿಗಣಿಸಬೇಕಿದ್ದು, ಪಾಕ್ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಅವರು ಒತ್ತಾಯಿಸಿದರು.
ತನ್ನ 'ಮಿಡ್‌ನೈಟ್ಸ್ ಚಿಲ್ಡ್ರನ್' ಪುಸ್ತಕ ಭಾರೀ ಜನಪ್ರಿಯತೆ ಗಳಿಸುತ್ತಿರುವಂತೆಯೇ ಮತ್ತೊಂದು ಪುಸ್ತಕ ಬರೆಯುತ್ತಿರುವುದಾಗಿ ರಶ್ದೀ ತಿಳಿಸಿದರು. "ಆದರೆ ಅದರ ವಸ್ತು ಭಯೋತ್ಪಾದನೆಯಲ್ಲಿ. ಅದು ಮಕ್ಕಳ ಪುಸ್ತಕ. ನನ್ನ ದೊಡ್ಡ ಮಗನಿಗೆ 11 ವರ್ಷವಾಗಿದ್ದಾಗ ಇದೇ ರೀತಿ ಮಕ್ಕಳ ಪುಸ್ತವೊಂದನ್ನು ಬರೆದಿದ್ದೆ. ಈಗ ಆತನಿಗೆ 29 ವರ್ಷ. ನನ್ನ ಮತ್ತೊಬ್ಬ ಮಗನಿಗೀಗ 11 ವರ್ಷ ಮತ್ತು ಆತನಿಗೂ ಪುಸ್ತಕ ಬೇಕಾಗಿದೆ. ಮೊದಲ 15 ಪುಟಗಳನ್ನು ಓದಿ ಹೇಳಿದಾಗ ಆತ ಇಷ್ಟಪಟ್ಟಿದ್ದಾನೆ" ಎಂದರು.
|