ಮುಂಬೈ ದಾಳಿಗೆ ಸಂಬಂಧಿಸಿದಂತೆ 'ಸಾಕಷ್ಟು' ಸಾಕ್ಷ್ಯಗಳನ್ನು ಒದಗಿಸಿದಲ್ಲಿ ಶಂಕಿತರ ವಿಚಾರಣೆಗಾಗಿ ಭಾರತಕ್ಕೆ ಪಾಕಿಸ್ತಾನದಲ್ಲಿ ಅವಕಾಶ ಕೊಡಲಾಗುತ್ತದೆ. ಆದರೆ ಪಾಕಿಸ್ತಾನ ಪ್ರಜೆಗಳನ್ನು ನವದೆಹಲಿಗೆ ಹಸ್ತಾಂತರಿಸುವುದಿಲ್ಲ ಎಂದು ಪಾಕಿಸ್ತಾನದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮ ವರದಿಗಳು ತಿಳಿಸಿವೆ.
ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂದು ನವದೆಹಲಿ ಪದೇ ಪದೇ ಗಂಭೀರ ಆರೋಪ ಮಾಡಿದ ನಂತರ ಪಾಕಿಸ್ತಾನದ ವಶದಲ್ಲಿರುವ ಆರೋಪಿಗಳನ್ನು ಭಾರತದ ತನಿಖಾದಳಗಳು ವಿಚಾರಣೆ ನಡೆಸಲು ಅವಕಾಶ ನೀಡುವ ಸಾಧ್ಯತೆಯಿದೆ. ಈ ಪ್ರಕ್ರಿಯೆಗೆ ಈಗ ನೀಡಿರುವ ಸಾಕ್ಷ್ಯಗಳು ಸಾಲದು. ದೃಢೀಕರಿಸುವ ಪುರಾವೆಗಳನ್ನೊದಗಿಸಿದಲ್ಲಿ ಮಾತ್ರ ಇದು ಸಾಧ್ಯ. ಆದರೆ ಯಾವುದೇ ಕಾರಣಕ್ಕೂ ಪಾಕ್ ಪ್ರಜೆಗಳನ್ನು ಭಾರತಕ್ಕೆ ಹಸ್ತಾಂತರಿಸುವುದಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಪಾಕಿಸ್ತಾನಿ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು 'ದಿ ನೇಷನ್' ಪತ್ರಿಕೆ ವರದಿ ಮಾಡಿದೆ.
ಮುಂಬೈ ದಾಳಿ ಶಂಕಿತ ರೂವಾರಿ ಲಷ್ಕರ್ ಇ ತೊಯ್ಬಾ ಕಮಾಂಡರ್ ಝಕೀರ್ ರೆಹಮಾನ್ ಲಖ್ವಿ ಮತ್ತು ಝರಾರ್ ಶಾ ಮುಂತಾದವರನ್ನು ಪಾಕಿಸ್ತಾನವು ಬಂಧಿಸಿದೆ. ಇವರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂಬುದು ಭಾರತದ ಒತ್ತಾಯ. ಆದರೆ ಪಾಕಿಸ್ತಾನವು ಈ ಸಂಬಂಧ ಸೂಕ್ತ ದಾಖಲೆಗಳನ್ನು ಕೊಡುವಂತೆ ಒತ್ತಾಯಿಸುತ್ತಾ, ಭಾರತ ನೀಡಿರುವ ದಾಖಲೆಗಳು ಸಾಕಾಗುವುದಿಲ್ಲ ಎಂಬ ಮಾತುಗಳನ್ನು ಪುನರುಚ್ಛರಿಸುತ್ತಿದೆ.
ಭಾರತವು ತನ್ನ ಆರೋಪವನ್ನು ನಿಲ್ಲಿಸಿ ಮುಂಬೈ ದಾಳಿಗೆ ಸಂಬಂಧಿಸಿದಂತೆ ನಂಬಲರ್ಹ ಸಾಕ್ಷ್ಯಗಳನ್ನು ಒದಗಿಸಲಿ. ಮುಂಬೈ ದಾಳಿಯ ಹಿಂದೆ ಲಖ್ವಿ, ಶಾ ಅಥವಾ ಇನ್ನ್ಯಾರಿದ್ದಾರೆ ಎಂಬ ಬಗ್ಗೆ ಪುರಾವೆಗಳನ್ನು ಒದಗಿಸಿದಲ್ಲಿ ಭಾರತದ ತನಿಖಾದಳವನ್ನು ಪಾಕಿಸ್ತಾನದ ನೆಲಕ್ಕೆ ಬರಲು ಅವಕಾಶ ನೀಡುತ್ತೇವೆ ಎಂದು ಪಾಕ್ ಉನ್ನತಾಧಿಕಾರಿಯೊಬ್ಬರು ಪತ್ರಿಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
|