ಮುಂಬೈ ಭಯೋತ್ಪಾದನಾ ದಾಳಿ(25/11)ಯಲ್ಲಿ ಪಾಕ್ ಮೂಲದ ಉಗ್ರಗಾಮಿ ಸಂಘಟನೆ ಭಾಗಿಯಾಗಿರುವ ಕುರಿತು ಅಮೆರಿಕದ ಎಫ್‌ಬಿಐ ಪಾಕಿಸ್ತಾನಕ್ಕೆ ಪುರಾವೆಯನ್ನು ಒದಗಿಸಿರುವುದಾಗಿ ಲಂಡನ್‌ನ ಮಾಧ್ಯಮ ವರದಿಗಳು ತಿಳಿಸಿವೆ.
ಪಾಕ್ ಮೂಲದ ಲಷ್ಕರ್ ಇ ತೊಯ್ಬಾ ಸಂಘಟನೆ ದಾಳಿಕೋರರಿಗೆ ಸಂದೇಶ ರವಾನಿಸುತ್ತಿರುವುದನ್ನು ಟಿವಿಯಲ್ಲಿ ಲೈವ್ ಆಗಿ ಚಿತ್ರಣಗೊಂಡಿರುವುದಾಗಿ ಎಫ್‌ಬಿಐ ತಿಳಿಸಿದ್ದು, ಆ ನಿಟ್ಟಿನಲ್ಲಿ ಲಷ್ಕರ್ ಶಾಮೀಲಾತಿ ಸ್ಪಷ್ಟಗೊಂಡಿರುವುದಾಗಿ ಹೇಳಿದೆ.
ಪೂರ್ಣಪ್ರಮಾಣದ ತನಿಖೆಯಿಂದ ಮುಂಬೈ ದಾಳಿಯ ಹಿಂದೆ ಪಾಕಿಸ್ತಾನ್ ಉಗ್ರರ ಕೈವಾಡ ಇರುವುದಕ್ಕೆ ಸ್ಪಷ್ಟ ಸಾಕ್ಷಿ ದೊರೆತಿರುವುದಾಗಿ ದಿ ಸಂಡೆ ಟೈಮ್ಸ್ ವರದಿ ವಿವರಿಸಿದೆ.
ಮುಂಬೈಯ ದಾಳಿಯ ಸಮಯದಲ್ಲಿ ಲಷ್ಕರ್ ಇ ತೊಯ್ಬಾದ ಪ್ರಮುಖ ಸಂಪರ್ಕಾಧಿಕಾರಿ ಜರಾರ್ ಶಾ,ಸೆಟಲೈಟ್ ಫೋನ್ ಮೂಲಕ ಸಂವಹನ ನಡೆಸುತ್ತಿರುವ ಅಂಶ ತನಿಖೆಯಿಂದ ಖಚಿತಪಡಿಸಿಕೊಂಡಿರುವುದಾಗಿ ಎಫ್‌ಬಿಐ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ದಾಳಿಯ ಲೈವ್ ಕವರೇಜ್ ಅನ್ನು ಪಾಕಿಸ್ತಾನದಲ್ಲೇ ಕುಳಿತು ವೀಕ್ಷಿಸುತ್ತಿದ್ದ ಉಗ್ರರು, ಶಸ್ತ್ರಾಸ್ತ್ರಾಧಾರಿ ಉಗ್ರರಿಗೆ ಭಾರತದ ಕಮಾಂಡೋ ಒಬ್ಬರು ಆಗಮಿಸಿದಾಗ, ಆತನನ್ನು ಹೊಡೆದುರುಳಿಸಿ ಎಂಬ ಆದೇಶವನ್ನು ನೀಡುತ್ತಿರುವ ಅಂಶ ಬಯಲಾಗಿದೆ ಎಂದು ತಿಳಿಸಿದೆ. |