ಮುಂಬೈ ದಾಳಿಗೆ ಸಂಬಂಧಿಸಿದಂತೆ ಪುರಾವೆಗಳನ್ನು ಭಾರತ ಪಾಕಿಸ್ತಾನಕ್ಕೆ ಹಸ್ತಾಂತರಿಸಿದ ಬಳಿಕ ಅದಕ್ಕೆ ಪ್ರತಿಕ್ರಿಯಿಸಿ, ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ ಪ್ರತ್ಯುತ್ತರ ನೀಡಲಾಗುವುದು ಎಂದು ಪಾಕಿಸ್ತಾನ ಸೋಮವಾರ ಅಮೆರಿಕಕ್ಕೆ ಭರವಸೆ ನೀಡಿದೆ.
ಪಾಕಿಸ್ತಾನಕ್ಕೆ ಆಗಮಿಸಿದ್ದ ಅಮೆರಿಕದ ವಿದೇಶಾಂಗ ಸಹಾಯಕ ಕಾರ್ಯದರ್ಶಿ ರಿಚರ್ಡ್ ಬೌಚರ್ ಅವರಿಗೆ ಪಾಕಿಸ್ತಾನ ಈ ಭರವಸೆ ನೀಡಿರುವುದಾಗಿ ತಿಳಿಸಿದೆ.
ದೇಶದ ವಾಣಿಜ್ಯ ನಗರಿಯಾದ ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯಲ್ಲಿ ಪಾಕ್ ಮೂಲದ ಪಾತಕಿಗಳು ಶಾಮೀಲಾಗಿರುವ ಬಗ್ಗೆ ಭಾರತ ಪಾಕ್‌ಗೆ ಸೋಮವಾರ ಬಲವಾದ ಪುರಾವೆಗಳನ್ನು ನೀಡಿತ್ತು. ಈ ದಾಳಿಯಲ್ಲಿ ವಿದೇಶಿಯರು ಸೇರಿದಂತೆ 180ಮಂದಿ ಸಾವನ್ನಪ್ಪಿದ್ದರು.
ಪಾಕ್ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಮತ್ತು ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರೊಂದಿಗೆ ಬೌಚರ್ ನಡೆಸಿದ ಮಾತುಕತೆ ಕುರಿತು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ, ಆದರೆ ಟಿವಿ ಚಾನೆಲ್‌ಗಳ ವರದಿ ಪ್ರಕಾರ, ಭಾರತ ನೀಡಿರುವ ಸಾಕ್ಷಿಯನ್ನು ಪರಿಶೀಲಿಸಿದ ನಂತರ ಉತ್ತರ ನೀಡುವುದಾಗಿ ಭರವಸೆ ನೀಡಿದೆ ಎಂದು ತಿಳಿಸಿದೆ. |