ಬಾಂಗ್ಲಾದೇಶದ ನೂತನ ಪ್ರಧಾನ ಮಂತ್ರಿಯಾಗಿ ಶೇಕ್ ಹಸೀನಾ ಮಂಗಳವಾರ ಪ್ರಮಾಣ ವಚನವನ್ನು ಸ್ವೀಕರಿಸಿದರು. ಈ ಮೂಲಕ ಎರಡು ವರ್ಷ ಕಾಲದ ಸೇನಾಡಳಿತ ಕೊನೆಗೊಳ್ಳುವ ಮೂಲಕ ಬಾಂಗ್ಲಾದಲ್ಲಿ ಮತ್ತೆ ಪ್ರಜಾಪ್ರಭುತ್ವ ಸರಕಾರ ಅಧಿಕಾರಕ್ಕೆ ಬಂದಿದೆ. ಕಳೆದ ತಿಂಗಳು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೇಕ್ ಹಸೀನಾರ ಅವಾಮಿ ಲೀಗ್ ಪಕ್ಷವು ಭರ್ಜರಿ ವಿಜಯ ದಾಖಲಿಸುವ ಮೂಲಕ ಸ್ವತಂತ್ರ ಹಾಗೂ ನ್ಯಾಯಯುತವಾದ ಚುನಾವಣಾ ಫಲಿತಾಂಶಕ್ಕೆ ಎಡೆಮಾಡಿಕೊಂಡಿತ್ತು.ಈ ಹಿಂದೆ ಬಾಂಗ್ಲಾದೇಶದಲ್ಲಿ ಸೃಷ್ಟಿಯಾದ ಅರಾಜಕತೆಯಿಂದಾಗಿ ಅಧ್ಯಕ್ಷರು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಈತನಕ ಬಾಂಗ್ಲಾದಲ್ಲಿ ತಾತ್ಕಾಲಿಕವಾಗಿ ಸೇನಾಡಳಿತವು ಅಧಿಕಾರದಲ್ಲಿತ್ತು.ಚುನಾವಣೆಯಲ್ಲಿ 61ರ ಹರೆಯದ ಶೇಕ್ ಹಸೀನಾರ ಅವಾಮಿ ಲೀಗ್ 230 ಸೀಟುಗಳಲ್ಲಿ ವಿಜಯವನ್ನು ದಾಖಲಿಸಿತ್ತು. ಆದರೆ ಸರಕಾರ ರಚನೆಯಾಗಲು 300 ಸೀಟುಗಳ ಅವಶ್ಯಕತೆಯಿದ್ದು, ಇದರಿಂದಾಗಿ ಇತರ ಪಕ್ಷಗಳ ಬೆಂಬಲ ಪಡೆದ ಹಸೀನಾರ ಅವಾಮಿ ಲೀಗ್ ಪಕ್ಷವು ಸಮ್ಮಿಶ್ರ ಸರಕಾರವನ್ನು ರಚಿಸಿದೆ.ಶೇಕ್ ಹಸೀನಾ ಇದೀಗ ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದು, ಈ ಹಿಂದೆ 1996- 2001ರ ಕಾಲಘಟ್ಟದಲ್ಲಿ ಬಾಂಗ್ಲಾ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು." ಪ್ರಜಾಪ್ರಭುತ್ವ ಸರಕಾರದ ಯಶಸ್ವಿಗೆ ಎಲ್ಲರ ಸಹಕರಣೆ ಅಗತ್ಯವಿದ್ದು, ಎಲ್ಲರೊಂದಿಗೆ ಸಹಕರಿಸಲು ಪ್ರವರ್ತಿಸಲು ನಾನು ತಯಾರಾಗಿದ್ದೇನೆ" ಎಂದು ಚುನಾವಣೆಯಲ್ಲಿ ವಿಜಯಿಯಾದಾಗ ಹಸೀನಾ ಅಭಿಪ್ರಾಯ ವ್ಯಕ್ತಪಡಿಸಿದ್ದರು. |