ತಾಲಿಬಾನ್ ಬೆದರಿಕೆಯು ನಮ್ಮ ಮನೆ ಬಾಗಿಲಿಗೇ ಬರುತ್ತಿದೆ. ಇಡೀ ವಿಶ್ವವನ್ನೇ ನಡುಗಿಸುತ್ತಿರುವ ಭಯೋತ್ಪಾದನೆಯ ಕೇಂದ್ರ ಬಿಂದುಗಳು ಪಾಕಿಸ್ತಾನದ ಯಾವುದೋ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಇಲ್ಲವೇ ಅಫ್ಘಾನಿಸ್ತಾನದ ಗುಹೆಗಳಲ್ಲಿವೆ ಎಂದುಕೊಂಡು ಸುಮ್ಮನಿರಬೇಕಾಗಿಲ್ಲ. ಅವುಗಳು ಭಾರತದಿಂದ ಕೇವಲ ಆರೆಂಟು ಗಂಟೆಗಳ ರಸ್ತೆಮಾರ್ಗದಷ್ಟೇ ದೂರದಲ್ಲಿದೆ.
ಪಾಕಿಸ್ತಾನವು ಭಾರತದೊಂದಿಗೆ ಸಮರ ಸನ್ನಾಹ ನಡೆಸುತ್ತಾ, ಪಡೆಗಳನ್ನು ಪೂರ್ವಭಾಗದತ್ತಲೇ ಕೇಂದ್ರೀಕರಿಸುತ್ತಿದ್ದರೆ, ಮುಂದೊತ್ತಿ ಬರುತ್ತಿರುವ ತಾಲಿಬಾನ್ ಉಗ್ರಗಾಮಿಗಳನ್ನು ತಡೆಯಲು ವಿಫಲವಾದ ಪರಿಣಾಮ, ತಾಲಿಬಾನಿಗಳು ಯಾವುದೇ ಪ್ರತಿರೋಧ ಇಲ್ಲದೆ, ತಮ್ಮದೇ ನೀತಿ ನಿಯಮಾವಳಿಗಳನ್ನು ಆ ಪ್ರದೇಶದ ಜನತೆಯ ಮೇಲೆ ಹೇರುತ್ತಾ, ತಾಲಿಬಾನೀಕರಣ ಪ್ರಕ್ರಿಯೆಯಲ್ಲಿ ಮುನ್ನುಗ್ಗುತ್ತಿದ್ದಾರೆ.
ಮಹಿಳೆಯರು ಉದ್ಯೋಗ ಮಾಡುವಂತಿಲ್ಲ, ಹುಡುಗಿಯರು ಶಿಕ್ಷಣ ಪಡೆಯುವಂತಿಲ್ಲ ಮುಂತಾದ ನಿರ್ಬಂಧಗಳನ್ನೇ ಹೇರಿಕೊಂಡು ಅಫ್ಘಾನಿಸ್ತಾನದಲ್ಲಿ ತಾಲಿಬಾನೀಕರಣಗೊಂಡಿರುವ ಪ್ರದೇಶದ ವಿಸ್ತಾರ ಹೆಚ್ಚಾಗುತ್ತಲೇ ಇದ್ದು, ಭಾರತದ ವಾಘಾ ಗಡಿಯಿಂದ ಕೇವಲ 430 ಕಿ.ಮೀ. ದೂರದಲ್ಲಿರುವ ಪುಟ್ಟ ಪಟ್ಟಣ ಬುನೇರ್‌ವರೆಗೂ ಈ 'ತಾಲಿಬಾನಿಸ್ತಾನ್' ವಿಸ್ತರಣೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಂದರೆ ಇದು ದೆಹಲಿ-ಲಖ್ನೋ ನಡುವಿರುವ ದೂರಕ್ಕಿಂತಲೂ ಕಡಿಮೆ. ಈ ಕುರಿತು ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಪೂರ್ಣ ಚಿತ್ರಣ ನೀಡಲಾಗಿದೆ.
ಭಾರತದ ಮೇಲೆ ಆಗಾಗ್ಗೆ ದಾಳಿ ನಡೆಸುತ್ತಿರುವ ಲಷ್ಕರೆ ತೋಯ್ಬಾದ ಆತ್ಮಾಹುತಿ ಬಾಂಬರ್‌ಗಳು ತಾಲಿಬಾನ್ ಮತ್ತು ಅಲ್ ಖಾಯಿದಾದ ಜಾಗತಿಕ ಭಯೋತ್ಪಾದನೆ ಪರಿಕಲ್ಪನೆಯ ಕೂಸುಗಳು. ವಾಯುವ್ಯ ಫ್ರಾಂಟಿಯರ್ ಪ್ರಾಂತ್ಯ (ಎನ್‌ಡಬ್ಲ್ಯುಎಫ್‌ಪಿ)ದಲ್ಲಿ ಅಲ್ಲಿನ ದುರ್ಬಲ ಸರಕಾರದ ಬೆಂಬಲದೊಂದಿಗೆ ಈ ಸಂಘಟನೆಗಳು ಸಂಪೂರ್ಣವಾಗಿ ಚಟುವಟಿಕೆಯಲ್ಲಿ ತೊಡಗಿಕೊಂಡಿವೆ. ಅಲ್ಲಿನ ಅತಿದೊಡ್ಡ ಪಟ್ಟಣವಾಗಿರುವ ಕ್ವೆಟ್ಟಾ, ತಾಲಿಬಾನ್‌ನ ಪ್ರಮುಖ ಅಡಗುದಾಣವಾಗಿದ್ದು, ತಾಲಿಬಾನ್ ಮುಖ್ಯಸ್ಥ ಮುಲ್ಲಾ ಒಮರ್ ಕೂಡ ಅಲ್ಲೇ ಇದ್ದಾನೆಂದು ಹೇಳಲಾಗುತ್ತಿದೆ. ಪೇಶಾವರದ ಬೀದಿಗಳಲ್ಲಿಯೂ ಮಹಿಳೆಯರು ಕಂಡುಬರುತ್ತಿಲ್ಲ. ಈ ಕಾರಣಕ್ಕೆ ಅದು ಕೂಡ ನಿಧಾನವಾಗಿ ತಾಲಿಬಾನೀಕರಣಕ್ಕೊಳಗಾಗುತ್ತಿದೆ ಎಂಬ ಆತಂಕವಿದೆ. ಇಷ್ಟು ಮಾತ್ರವಲ್ಲ, ಪಾಕಿಸ್ತಾನದ ಬಂದರು ನಗರಿ ಕರಾಚಿಯಲ್ಲಿ ಕೂಡ ತಾಲಿಬಾನ್‌ನ ಫಲಕಗಳು ಗೋಚರಿಸತೊಡಗಿದ್ದು, ಮಹತ್ವ ಪಡೆದುಕೊಳ್ಳುತ್ತಿದೆ.
ಒಟ್ಟಿನಲ್ಲಿ ಹೇಳುವುದಾದರೆ, ತಾಲಿಬಾನೀಕರಣ ಎಂಬುದು ಭಾರತಕ್ಕೆ ತುಂಬಾ ದೂರದಲ್ಲಿರುವ ಬೆದರಿಕೆಯಾಗಿ ಉಳಿದಿಲ್ಲ. ತಾಲಿಬಾನ್ ನಿಯಂತ್ರಣದಲ್ಲಿರುವ ಎಲ್ಲ ಪ್ರದೇಶಗಳಲ್ಲಿ ಬಾಲಕಿಯರ ಶಾಲೆಗಳಿಗೆ ಬೀಗ ಜಡಿಯಲಾಗಿದೆ. ಬೀದಿಗಳಲ್ಲಿ ಮಹಿಳೆಯರು ಸಂಚರಿಸುತ್ತಿಲ್ಲ, ಮುಸ್ಲಿಮರನ್ನು ಸಂತಾನಹೀನರಾಗಿರುವ ಪಾಶ್ಚಾತ್ಯರ ಸಂಚು ಎಂಬ ಕಾರಣಕ್ಕೆ ಪೋಲಿಯೋ ಲಸಿಕೆಗೂ ನಿಷೇಧ ಹೇರಲಾಗಿದೆ. ಗಡ್ಡ ಕಡ್ಡಾಯವಾಗಿದೆ. ಮೂಢ ನಂಬಿಕೆಗಳನ್ನು ಹೇರಲಾಗುತ್ತಿದೆ.
ಈ ಕುರಿತು ನ್ಯೂಸ್ ಇಂಟರ್‌ನ್ಯಾಷನಲ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ, ಈ ಪ್ರದೇಶದ ಜನತೆ ಸರಕಾರಕ್ಕಿಂತಲೂ ತಾಲಿಬಾನ್‌ಗೆ ಹೆದರುತ್ತಾರೆ. ಯಾಕೆಂದರೆ ತಾಲಿಬಾನ್ ಉಗ್ರರು ಅಷ್ಟು ಬಲಾಢ್ಯರಾಗಿದ್ದಾರೆ. |