ಗಾಜಾ ಮೇಲೆ ಭಾನುವಾರವೂ ಇಸ್ರೇಸ್ ಸೇನೆ ತನ್ನ ದಾಳಿಯನ್ನು ಮುಂದುವರಿಸಿದ್ದು, ಹಮಾಸ್ ಉಗ್ರರನ್ನು ಗುರಿಯಾಗಿಸಿ ಹತ್ತಾರು ರಾಕೆಟ್‌ಗಳನ್ನು ಉಡಾಯಿಸಲಾಗಿದೆ. ದಾಳಿಗೆ 25ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಉಗ್ರರ ನೆಲೆಗಳನ್ನು ಗುರುತಿಸಿ ಅವರ ಶಸ್ತ್ರಾಸ್ತ್ರ ಕೋಟೆಗಳಿಗೆ ಇಸ್ರೇಲ್ ಭೂಸೇನೆಯೂ ಲಗ್ಗೆ ಹಾಕುತ್ತಿದೆ. ಒಟ್ಟಾರೆ ಇದುವರೆಗೆ ಸುಮಾರು 800ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
ಭಾನುವಾರ ಇಸ್ರೇಲ್ ಭೂಸೇನೆ ನಡೆಸಿದ ದಾಳಿಯಲ್ಲಿ 14 ಪಾಲಿಸ್ತೇನಿ ಗೆರಿಲ್ಲಾಗಳು ಹಾಗೂ 12 ನಾಗರಿಕರು ಸಾವನ್ನಪ್ಪಿದ್ದು, ಸೇನೆಯು ಗಾಜಾ ಪಟ್ಟಿಯ ಸನಿಹದಲ್ಲಿದೆ ಎನ್ನಲಾಗಿದೆ. ಈ ಪ್ರದೇಶದಲ್ಲಿನ ದಾಳಿಗಳು ಇನ್ನೂ ಹೆಚ್ಚಲಿವೆ ಎಂದು ಗಾಜಾ ಪಟ್ಟಿಯ ನಿವಾಸಿಗಳಿಗೆ ಇಸ್ರೇಲ್ ಕರಪತ್ರಗಳನ್ನು ಹಂಚಿದೆ ಎಂಬ ವರದಿಗಳೂ ಬಂದಿವೆ.
ಇಸ್ರೇಲ್ ರಕ್ಷಣಾ ಪಡೆಗಳು ಗಾಜಾ ಪಟ್ಟಿಯಲ್ಲಿ ದಾಳಿಯ ತೀವ್ರತೆಯನ್ನು ಹೆಚ್ಚಿಸುವ ಬಗ್ಗೆ ಕರಪತ್ರಗಳನ್ನು ಉದುರಿಸಿರುವುದು ನಿಜ ಎಂದು ಅರೆಬಿಕ್ ತಿಳಿಸಿದೆ.
"ಇಸ್ರೇಲ್ ಸೇನೆಯು ಗಾಜಾ ನಿವಾಸಿಗಳಿಗೆ ತೊಂದರೆ ಮಾಡಲು ಬಯಸುತ್ತಿಲ್ಲ. ನಮ್ಮ ಹೋರಾಟ ಹಮಾಸ್ ಮತ್ತು ಉಗ್ರರನ್ನು ದಮನಗೊಳಿಸುವುದು ಮಾತ್ರ. ನಮ್ಮ ಆದೇಶಗಳನ್ನು ಪರಿಗಣಿಸಿ ಸುರಕ್ಷಿತವಾಗಿರಿ" ಎಂದು ಕರಪತ್ರದಲ್ಲಿ ಬರೆಯಲಾಗಿದೆ. ಅಲ್ಲದೆ ಹಮಾಸ್ ಉಗ್ರರಿಗೆ ಯಾವುದೇ ಸಹಾಯ ಮಾಡಬೇಡಿ ಎಂದೂ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಅದೇ ಹೊತ್ತಿಗೆ ಹಮಾಸ್ ಕಡೆಯಿಂದ ದಕ್ಷಿಣ ಇಸ್ರೇಲ್ ಕಡೆಗೆ 15 ರಾಕೆಟ್‌ಗಳನ್ನು ಶನಿವಾರ ಉಡಾಯಿಸಲಾಗಿದೆ. ಇದರಿಂದಾಗಿ ನೂರಾರು ಇಸ್ರೇಲಿಗಳು ಕೂಡ ನಿರಾಶ್ರಿತರಾಗಿದ್ದು, ಮೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
|