ಜಮಾತ್ ಉದ್ ದವಾ ಸಂಘಟನೆ ಮೇಲೆ ವಿಶ್ವಸಂಸ್ಥೆ ನಿಷೇಧ ಹೇರಿದ್ದು, ಪಾಕ್ ಕೂಡ ಅದನ್ನು ಜಾರಿಗೊಳಿಸುವುದಾಗಿ ಹೇಳಿಕೆ ನೀಡಿತ್ತಾದರೂ, ಇದೀಗ ಜಮಾತ್ ಹೊಸ ಹೆಸರಿನೊಂದಿಗೆ ತನ್ನ ಆರ್ಭಟ ವ್ಯಕ್ತಪಡಿಸುತ್ತಿರುವುದಾಗಿ ಟೈಮ್ಸ್ ನೌ ಚಾನೆಲ್ ವರದಿ ತಿಳಿಸಿದೆ.
ಲಷ್ಕರ್ ಇ ತೊಯ್ಬಾದ ಸಹವರ್ತಿ ಸಂಘಟನೆ ತೆಹ್ರೀಕ್ ಇ ತಾಫುಜ್ ಕ್ವಿಬ್ಲಾ ಅವಾಲ್ ಹೆಸರಿನಲ್ಲಿ ಅವತರಿಸಿರುವುದಕ್ಕೆ ಬಲವಾದ ಪುರಾವೆಗಳಿದೆ ಎಂದು ಹೇಳಿದೆ.
ಅದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ಲಾಹೋರ್‌ನಲ್ಲಿ ತೆಹ್ರೀಕ್ ಬೃಹತ್ ರಾಲಿಯನ್ನು ಸಂಘಟಿಸಿದ್ದು, ಅದರಲ್ಲಿ ಜಮಾತ್ ಮತ್ತು ಲಷ್ಕರ್ ಸಂಘಟನೆಯ ಪ್ರಮುಖರು ಭಾಗವಹಿಸಿರುವ ವೀಡಿಯೋ ಚಿತ್ರಣವನ್ನು ಟೈಮ್ಸ್ ಬಿತ್ತರಿಸಿದೆ.
ಇಸ್ರೇಲ್ ವೈಮಾನಿಕ ದಾಳಿಯನ್ನು ಖಂಡಿಸಿ ನಡೆಸುತ್ತಿರುವ ಪ್ರತಿಭಟನೆಗಾಗಿ ತೆಹ್ರೀಕ್ ಕಾರ್ಯಕರ್ತರು ಕರೆ ನೀಡಿರುವ ರಾಲಿಯಲ್ಲಿ ಜಮಾತ್ ಮತ್ತು ಲಷ್ಕರ್ ಪ್ರಮುಖರು ಭಾಗವಹಿಸಿದ್ದರು ಎಂದು ವರದಿ ವಿವರಿಸಿದೆ. ಅಲ್ಲದೇ ಜಮಾತ್‌ನ ಕಪ್ಪು-ಬಿಳುಪು ಬಾವುಟ ಆ ರಾಲಿಯಲ್ಲಿ ರಾರಾಜಿಸುತ್ತಿತ್ತು, ಆ ನಿಟ್ಟಿನಲ್ಲಿ ಜಮಾತ್ ಪಾಕ್‌ನಲ್ಲಿ ಸಕ್ರಿಯವಾಗಿ ತನ್ನ ಕಾರ್ಯಚಟುವಟಿಕೆ ನಡೆಸುತ್ತಿರುವುದಾಗಿ ವರದಿ ತಿಳಿಸಿದ್ದು, ಪಾಕ್ ಮಾತ್ರ ಸುಳ್ಳಿನ ಹೇಳಿಕೆ ನೀಡಿ ದಿಕ್ಕು ತಪ್ಪಿಸುತ್ತಿದೆ ಎಂದಿದೆ. |