ಪಾಕಿಸ್ತಾನದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಯಾವುದೇ ಸಾಧ್ಯತೆ ಇಲ್ಲ ಎಂದು ತಿಳಿಸಿರುವ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ, ಪಿಪಿಪಿ ಆಡಳಿತಾರೂಢ ಮೈತ್ರಿ ಸರ್ಕಾರ ಐದು ವರ್ಷಗಳನ್ನು ಪೂರ್ಣವಾಗಿ ಪೂರೈಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ನೂತನವಾಗಿ ನಿರ್ಮಿಸಲ್ಪಟ್ಟ ಕೆಡೆಟ್ ಕಾಲೇಜನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈ ದಾಳಿ ಕುರಿತು ಬೇಜಬ್ದಾರಿ ಹೇಳಿಕೆ ನೀಡಿ ವಜಾಗೊಂಡಿರುವ ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ದುರಾನಿ ಅವರ ಮರು ನೇಮಕಕ್ಕೆ ಅಂತಾರಾಷ್ಟ್ರೀಯ ಒತ್ತಡ ಇದೆ ಎಂಬ ವರದಿಯನ್ನು ಈ ಸಂದರ್ಭದಲ್ಲಿ ನಿರಾಕರಿಸಿದರು.
ಮುಂಬೈ ಭಯೋತ್ಪಾದನಾ ದಾಳಿ ಕುರಿತು ಪಾಕಿಸ್ತಾನ ಉಗ್ರರು ಶಾಮೀಲಾಗಿರುವ ಬಗ್ಗೆ ಭಾರತ ನೀಡಿರುವ ಪುರಾವೆಯನ್ನು ತಮ್ಮದೇ ಕಾನೂನಿನ್ವಯ ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಗಿಲಾನಿ ಸ್ಪಷ್ಟಪಡಿಸಿದ್ದಾರೆ.
ಆದರೆ ದೇಶದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಯನ್ನು ಬಲವಾಗಿ ತಳ್ಳಿಹಾಕಿದ ಅವರು, ಸರ್ಕಾರ ಭದ್ರವಾಗಿದ್ದು, ವಿವಾದಗಳನ್ನು ಬಗೆಹರಿಸಿ ಮುನ್ನಡೆಯುವ ವಿಶ್ವಾಸ ಇರುವುದಾಗಿ ಹೇಳಿದರು.
|