ಇಸ್ರೇಲ್ ಹಾಗೂ ಪ್ಯಾಲೇಸ್ತಿನ್ ಚಳವಳಿಯ ಹಮಾಸ್ ತಕ್ಷಣವೇ ಗಾಜಾಪಟ್ಟಿಯಲ್ಲಿ ನಡೆಸುತ್ತಿರುವ ಯುದ್ದವನ್ನು ನಿಲ್ಲಿಸಬೇಕೆಂದು ವಿಶ್ವಸಂಸ್ಥೆ ವರಿಷ್ಠ ಬಾನ್ ಕಿ ಮೂನ್ ಆಗ್ರಹಿಸಿದ್ದು, ದಾಳಿಯನ್ನು ಮುಂದುವರಿಸುವ ಮೂಲಕ ಮತ್ತಷ್ಟು ಮುಗ್ದರ ಜನರ ಬಲಿ ತೆಗೆದುಕೊಳ್ಳುವುದು ಬೇಡ ಎಂದು ಆಗ್ರಹಿಸಿದ್ದಾರೆ.
ಎರಡೂ ಕಡೆಗಳಿಂದಲೂ ದಾಳಿಯನ್ನು ಮೊದಲು ನಿಲ್ಲಿಸಿ, ನಾನು ನಿಮ್ಮಲ್ಲಿ ಆಗ್ರಹಿಸುತ್ತಿದ್ದೇನೆ. ದಾಳಿ ನಿಲ್ಲಿಸಿ ಹಾಗೂ ಮತ್ತಷ್ಟು ಜನರು ಸಾವಿಗೀಡಾಗುವುದನ್ನು ತಪ್ಪಿಸಿ ಎಂದು ಬಾನ್ ಒತ್ತಾಯಿಸಿದ್ದಾರೆ.
ಏತನ್ಮಧ್ಯೆ ವಿಶ್ವಸಂಸ್ಥೆಯ ಬೆದರಿಕೆಗೂ ಜಗ್ಗದ ಇಸ್ರೇಲ್ ಇದೀಗ ರಾಜತಾಂತ್ರಿಕ ಮಾತುಕತೆ ವೇಳೆ ವಿಶ್ವ ಸಮುದಾಯದ ಛೀಮಾರಿ ಎದುರಿಸುವ ಭೀತಿಯಿಂದ ಗಾಜಾನಗರದ ಜನನಿಬಿಡ ಪ್ರದೇಶಗಳು ದಾಳಿಗೆ ತುತ್ತಾಗದಂತೆ ಇಸ್ರೇಲ್ ಮಂಗಳವಾರವೂ ದಾಳಿಯನ್ನು ಮುಂದುವರಿಸಿದೆ.
ಇಸ್ರೇಲ್ ವಾಯುಪಡೆ ಉಗ್ರರ ಮನೆಗಳ ಮೇಲೆ ಬಾಂಬ್ ದಾಳಿ ನಡೆಸಿದರೆ.ಭೂ ಸೇನೆ ಗಾಜಾ ನಗರದ ಹೊರವಲಯದಲ್ಲಿ ಕಾದಾಡುತ್ತಿದೆ. ತನ್ನ ಮೀಸಲು ಪಡೆಯನ್ನು ಇಸ್ರೇಲ್ ಗಾಜಾದತ್ತ ರವಾನಿಸಿದೆ. ಇದಕ್ಕೆ ಪ್ರತ್ಯುತ್ತರವಾಗಿ ಹಮಾಸ್ ಉಗ್ರರು ಕೂಡ ರಾಕೆಟ್ ದಾಳಿ ನಡೆಸುತ್ತಿದ್ದಾರೆ. ಕಳೆದ 18ದಿನಗಳಿಂದ ನಡೆಯುತ್ತಿರುವ ಯುದ್ದದಲ್ಲಿ 900ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. |