ಆಲ್ಪ್ಸ್ ಪರ್ವತದ ತಪ್ಪಲಿನಲ್ಲಿ ಖಾಸಗಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಪೈಲಟ್ ಮತ್ತು 6 ಮಂದಿ ಅಮ‌್ಯೂಸ್‌ಮೆಂಟ್ ಪಾರ್ಕ್ ನೌಕರರು ಅಸುನೀಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಲಿಬಿ ಮನರಂಜನೆ ಪಾರ್ಕ್‌ನ್ನು ಸೋಮವಾರ ಮುಚ್ಚಲಾಗಿದ್ದು, ಐನ್ ಪ್ರದೇಶದ ಬ್ರೆಗ್ನಿಯರ್ ಕಾರ್ಡನ್ ಗ್ರಾಮದ ಸಮೀಪದ ಹುಲ್ಲುಗಾವಲಿನ ಬಳಿ ನಡೆದ ಅಪಘಾತಕ್ಕೆ ಕಾರಣವನ್ನು ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಹೆಲಿಕಾಪ್ಟರ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳದಿದ್ದರೂ ಅದರಲ್ಲಿದ್ದ ಎಲ್ಲರೂ ತಕ್ಷಣವೇ ಅಸುನೀಗಿದ್ದಾರೆಂದು ಪ್ರಾದೇಶಿಕ ಅಧಿಕಾರಿ ತಿಳಿಸಿದ್ದಾರೆ. ಅಝುರ್ ಹೆಲಿಕಾಪ್ಟರ್ ಎಂಬ ಖಾಸಗಿ ಕಂಪೆನಿಯು ನಿರ್ವಹಿಸುತ್ತಿದ್ದ ಎಕುರಿಲ್ ಹೆಲಿಕಾಪ್ಟರ್‌ನಲ್ಲಿದ್ದ 6 ಮನರಂಜನೆ ಪಾರ್ಕ್ ಸಿಬ್ಬಂದಿ ಸುತ್ತಮುತ್ತಲಿನ ಹಳ್ಳಿಗಾಡಿನ ಪ್ರವಾಸ ತೆರಳಿದ್ದಾಗ ಈ ದುರಂತ ಸಂಭವಿಸಿದೆ.
ಹೆಲಿಕಾಪ್ಟರ್ ಕಣ್ಮರೆಯಾಗುವುದಕ್ಕಿಂತ ಮುಂಚೆ ಕೆಳಕ್ಕೆ ಹಾರುತ್ತಿದ್ದು, ಆ ಪ್ರದೇಶದಲ್ಲಿ ಸೀಮೆಎಣ್ಣೆಯ ವಾಸನೆ ಮೂಗಿಗೆ ಬಡಿಯಿತೆಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾಗಿ ಪ್ರಾದೇಶಿಕ ರಕ್ಷಣೆ ಮತ್ತು ಅಗ್ನಿಶಾಮಕ ಸೇವೆಯ ಫ್ರೆಡರಿಕ್ ಬರ್ಟಿನ್ ತಿಳಿಸಿದ್ದಾರೆ. |