ಅಲ್ ಖಾಯಿದಾ ಪಾಕಿಸ್ತಾನದ ಅಣ್ವಸ್ತ್ರಗಳನ್ನು ಕೈವಶ ಮಾಡಿಕೊಂಡು ಅದನ್ನು ಬಳಸುವ ಸ್ಥಿತಿಯಲ್ಲಿದ್ದರೆ ಅಮೆರಿಕದ ವಿರುದ್ಧ ಹೋರಾಟದಲ್ಲಿ ಪ್ರಯೋಗಿಸುವುದಾಗಿ ಭಾನುವಾರ ಸಂಘಟನೆಯ ಉನ್ನತ ಮುಖಂಡ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಕಳೆದ ಏಪ್ರಿಲ್‌ನಲ್ಲಿ ಪಾಕ್ ರಾಜಧಾನಿಯ ವಾಯವ್ಯಕ್ಕೆ 100 ಕಿಮೀ. ವ್ಯಾಪ್ತಿಯವರೆಗೆ ಅಲ್ ಖಾಯಿದಾದ ಮಿತ್ರಕೂಟ ತಾಲಿಬಾನ್ ಒತ್ತುವರಿ ಮಾಡಿದ್ದರಿಂದ ಅಣ್ವಸ್ತ್ರಸಜ್ಜಿತ ರಾಷ್ಟ್ರವು ಉಗ್ರಗಾಮಿಗಳ ಕೈಗೆ ಬೀಳುವುದೆಂಬ ಆತಂಕದ ಕಾರ್ಮೋಡ ಕವಿದ ಬಳಿಕ, ಪಾಕಿಸ್ತಾನವು ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ವಿರುದ್ಧ ಕಾರ್ಯಾಚರಣೆ ಆರಂಭಿಸಿತ್ತು.
'ದೇವರ ದಯೆಯಿದ್ದರೆ ಅಣ್ವಸ್ತ್ರಗಳು ಅಮೆರಿಕನ್ನರ ಕೈಗೆ ಸಿಗದೇ ಮುಜಾಹಿದ್ದೀನ್ ಸ್ವಾಧೀನಕ್ಕೆ ತೆಗೆದುಕೊಂಡು ಅಮೆರಿಕನ್ನರ ವಿರುದ್ಧ ಬಳಸುತ್ತದೆಂದು' ಆಫ್ಘಾನಿಸ್ತಾನದಲ್ಲಿ ಅಲ್ ಖಾಯಿದಾ ನಾಯಕ ಮುಸ್ತಾಫಾ ಅಬು ಅಲ್ ಯಾಜಿದ್ ಟೆಲಿವಿಷನ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಆಶಿಸಿದ್ದಾನೆ.
ಇಸ್ಲಾಮಿಕ್ ಹೋರಾಟಗಾರರು ಪಾಕಿಸ್ತಾನದ ಅಣ್ವಸ್ತ್ರಗಳನ್ನು ಕೈವಶ ಮಾಡಿಕೊಳ್ಳುವ ಸಮೀಪಕ್ಕೆ ಬಂದರೆ ಅಣ್ವಸ್ತ್ರಗಳ ಮೇಲೆ ನಿಯಂತ್ರಣ ಹೊಂದುವುದಕ್ಕೆ ಅಮೆರಿಕದ ಸುರಕ್ಷತಾ ಕ್ರಮಗಳನ್ನು ಕುರಿತ ಪ್ರಶ್ನೆಯೊಂದಕ್ಕೆ ಅಬು ಅಲ್-ಯಾಜಿದ್ ಉತ್ತರಿಸುತ್ತಿದ್ದನು.
ದೇವರ ಇಚ್ಛೆಯಿದ್ದರೆ ಪಾಕಿಸ್ತಾನ ಸೇನೆಯನ್ನು ಸ್ವಾತ್ ಕಣಿವೆಯಲ್ಲಿ ಸೋಲಿಸುತ್ತೇವೆ ಮತ್ತು ಎಲ್ಲ ಕಡೆಯೂ ಅದನ್ನು ಕೊನೆಗಾಣಿಸುತ್ತೇವೆ ಎಂದು ಅವನು ಹೇಳಿದ್ದಾನೆ. ಸಂಘಟನೆಯ ಯೋಜನೆ ಕುರಿತು ವಿವರಣೆ ನೀಡಿದ ಈಜಿಪ್ಟಿನ ಉಗ್ರಗಾಮಿ ಮುಖಂಡ, ಹಿಂದಿನ ಅವಧಿಯಲ್ಲಿದ್ದಂತೆ ಮುಂದಿನ ಅವಧಿಯಲ್ಲೂ ಅಲ್ ಖಾಯಿದಾ ಸಂಘಟನೆಯ ಕಾರ್ಯತಂತ್ರ ಒಂದೇ ತೆರನಾಗಿದ್ದು, ಹಾವಿನ ತಲೆಗೆ ಅರ್ಥಾತ್ ಅಮೆರಿಕದ ದಬ್ಬಾಳಿಕೆಯ ತಲೆಗೆ ಬಡಿಯುವುದೇ ಅಲ್ ಖಾಯಿದಾ ಯೋಜನೆಯಾಗಿದೆ ಎಂದು ಹೇಳಿದ್ದಾನೆ.
ಅರೇಬಿಯ ಪರ್ಯಾಯ ದ್ವೀಪದಲ್ಲಿ ಸಂಘಟನೆಯ ಘಟಕಕ್ಕೆ ಅಬು ಬಸೀರ್ ಅಲ್ ವಹಾಯಿಶಿಯನ್ನು ನೂತನ ನಾಯಕನೆಂದು ಹೆಸರಿಸುವ ಮೂಲಕ ವಿಶ್ವದ ಉನ್ನತ ತೈಲರಫ್ತು ರಾಷ್ಟ್ರದಲ್ಲಿ ಹೋರಾಟಕ್ಕೆ ಚೈತನ್ಯ ಮೂಡಿಸಲಿದೆಯೆಂದು ಅವನು ಆಶಿಸಿದ್ದಾನೆ. ಮುಜಾಹಿದ್ದೀನ್ ಮತ್ತು ಮುಸ್ಲಿಮರ ಮೇಲೆ ದಾಳಿಗೆ ತೈಲನೆಲೆಗಳನ್ನು ಕದಿಯುತ್ತಿರುವ ಅಮೆರಿಕನ್ನರ ಮೇಲೆ ದಾಳಿ ಮಾಡವುದು ನಮ್ಮ ಗುರಿ ಎಂದು ಅವನು ಹೇಳಿದ್ದಾನೆ. |