ಪಾಕಿಸ್ತಾನದ ಜೈಲುಗಳಲ್ಲಿ ಪ್ರಸಕ್ತ ಕೊಳೆಯುತ್ತಿರುವ 585 ಭಾರತೀಯ ಕೈದಿಗಳ ಪಟ್ಟಿಯನ್ನು ಪಾಕಿಸ್ತಾನ ಸರ್ಕಾರ ಗುರುವಾರ ಭಾರತಕ್ಕೆ ಹಸ್ತಾಂತರಿಸಿದೆ. ಮೀನುಗಾರರು ಸೇರಿದಂತೆ ಭಾರತೀಯ ಕೈದಿಗಳ ಪಟ್ಟಿಯನ್ನು ಭಾರತೀಯ ಹೈಕಮೀಷನ್ ಅಧಿಕಾರಿಯೊಬ್ಬರಿಗೆ ಹಸ್ತಾಂತರಿಸಲಾಯಿತು ಎಂದು ವಿದೇಶಾಂಗ ಕಚೇರಿ ಹೇಳಿಕೆ ತಿಳಿಸಿದೆ.
ಪಾಕಿಸ್ತಾನದ ಸರ್ಕಾರದ ಪಟ್ಟಿಯಲ್ಲಿ 535 ಮೀನುಗಾರರು, 41 ಇತರೆ ಕೈದಿಗಳು ಮತ್ತು 9 ಬಾಲಾಪರಾಧಿ ಕೈದಿಗಳು ಸೇರಿದ್ದಾರೆಂದು ರಾಜತಾಂತ್ರಿಕ ಮೂಲಗಳು ತಿಳಿಸಿದ್ದು,ಪಾಕಿಸ್ತಾನ ಜೈಲಿನಲ್ಲಿರುವ ಭಾರತೀಯ ಕೈದಿಗಳ ಒಟ್ಟು ಸಂಖ್ಯೆಯನ್ನು ಮಾತ್ರ ಹೇಳಿಕೆಯಲ್ಲಿ ನೀಡಲಿಲ್ಲವೆನ್ನಲಾಗಿದೆ.
ಕಳೆದ ವರ್ಷದ ಮೇನಲ್ಲಿ ಉಭಯ ರಾಷ್ಟ್ರಗಳು ಸಹಿ ಮಾಡಿರುವ ಒಪ್ಪಂದದ ನಿಯಮಗಳಂತೆ ಪ್ರತಿವರ್ಷದ ಜ.1ರಂದು ಮತ್ತು ಜು.1ರಂದು ಪರಸ್ಪರರ ಜೈಲಿನಲ್ಲಿರುವ ಕೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳುವುದು ಅಗತ್ಯವಾಗಿದೆ. |