ಆಸ್ಟ್ರೇಲಿಯದಲ್ಲಿ ಬಹುತೇಕ ಭಾರತೀಯರಿಂದ ಕೂಡಿದ 54 ವಿದೇಶಿ ವಿದ್ಯಾರ್ಥಿಗಳು ಕಳೆದ ವರ್ಷ ಮೃತಪಟ್ಟಿದ್ದಾರೆ ಮತ್ತು ಆಸ್ಟ್ರೇಲಿಯದ ತನಿಖಾಧಿಕಾರಿಗಳು ವಿದೇಶಿ ವಿದ್ಯಾರ್ಥಿಗಳ ಸಾವಿನ ವಿವರಗಳನ್ನು ಮುಚ್ಚಿಡಲು ಯತ್ತಿಸುತ್ತಿದ್ದಾರೆಂದು ಆಸ್ಟ್ರೇಲಿಯ ಮಾಧ್ಯಮಗಳು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ದ್ವಿಪಕ್ಷೀಯ ಭೇಟಿಗಾಗಿ ಆಸ್ಟ್ರೇಲಿಯಕ್ಕೆ ಪ್ರಯಾಣಿಸುತ್ತಿದ್ದಾರೆ. ಕಳೆದ ತಿಂಗಳು ಭಾರತೀಯ ವಿದ್ಯಾರ್ಥಿಗಳ ಮೇಲೆ ವ್ಯಾಪಕ ಪ್ರಮಾಣದ ಜನಾಂಗೀಯ ದಾಳಿಗಳು ನಡೆದಿವೆ. ಆದರೆ ಬಹುತೇಕ ಭಾರತೀಯ ವಿದ್ಯಾರ್ಥಿಗಳಿಂದ ಕೂಡಿದ 54 ವಿದೇಶಿ ವಿದ್ಯಾರ್ಥಿಗಳ ಸಾವಿನ ವಿವರಗಳನ್ನು ಆಸ್ಟ್ರೇಲಿಯದ ತನಿಖಾಧಿಕಾರಿಗಳು ಮುಚ್ಚಿಡುತ್ತಿದ್ದಾರೆಂದು ಆಸ್ಟ್ರೇಲಿಯ ಪ್ರಮುಖ ದಿನಪತ್ರಿಕೆಗಳು ವರದಿ ಮಾಡಿತ್ತು. ಆಸ್ಟ್ರೇಲಿಯ ಸರ್ಕಾರ ಒಪ್ಪಿಕೊಂಡಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ವಿದ್ಯಾರ್ಥಿಗಳು ಸತ್ತಿರುವ ಬಗ್ಗೆ ಸಾಕ್ಷ್ಯಾಧಾರಗಳಿವೆಯೆಂದು ವರದಿಯಲ್ಲಿ ಹೇಳಲಾಗಿದೆ.2008 ರಲ್ಲಿ 51 ವಿದೇಶಿ ವಿದ್ಯಾರ್ಥಿಗಳು ಅಸುನೀಗಿದ್ದು, ಅವರಲ್ಲಿ 34 ಮಂದಿ ಅಜ್ಞಾತ ಕಾರಣಗಳಿಗಾಗಿ ಮೃತಪಟ್ಟಿದ್ದಾರೆಂದು ಸರ್ಕಾರ ಕಳೆದ ಫೆಬ್ರವರಿಯಲ್ಲಿ ಸಂಸತ್ತಿಗೆ ತಿಳಿಸಿತ್ತು. 14 ಪ್ರಕರಣಗಳು ಅಪಘಾತದಿಂದ ಮತ್ತು ಮೂರು ಪ್ರಕರಣಗಳು ಕಾಯಿಲೆಯಿಂದ ಸಾವಪ್ಪಿದ್ದಾಗಿ ವರದಿ ತಿಳಿಸಿತ್ತು. ಆದರೆ ಸಾವಪ್ಪಿದವರ ಸಂಖ್ಯೆ ಸರ್ಕಾರ ಹೇಳಿದ್ದಕ್ಕಿಂತ ಹೆಚ್ಚಿಗೆಯಿದ್ದು, ಭಾರತ, ಕೊರಿಯ ಮತ್ತು ಚೀನಾದ ಬಹುತೇಕ ವಿದ್ಯಾರ್ಥಿಗಳು ಸೇರಿದಂತೆ 54 ಮಂದಿ ಸತ್ತಿದ್ದಾರೆಂದು ವರದಿ ತಿಳಿಸಿದೆ.ವೈದ್ಯಕೀಯ ದಾಖಲೆಗಳನ್ನು ನೀಡಲು ಸಂಬಂಧಿಸಿದ ಅಧಿಕಾರಿಗಳು ನಿರಾಕರಿಸಿದ್ದರೆಂದು ವರದಿ ತಿಳಿಸಿದೆ. ಆದರೆ ವರದಿಯಲ್ಲಿ ಮಾಡಿರುವ ಆರೋಪಗಳನ್ನು ಆಸ್ಟ್ರೇಲಿಯ ಸರ್ಕಾರ ನಿರಾಕರಿಸಿದೆ. ಆಸ್ಟ್ರೇಲಿಯದ ಸುದ್ದಿಪತ್ರಿಕೆಗಳ ಲೇಖನಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ಸಾವಿನ ಬಗ್ಗೆ ನಿಖರ ಸಂಖ್ಯೆಯನ್ನು ಕೊಟ್ಟಿಲ್ಲವೆಂದು ಆಸ್ಟ್ರೇಲಿಯ ಹೈಕಮೀಷನ್ ಪ್ರಕಟಣೆಯಲ್ಲಿ ತಿಳಿಸಿದೆ. |