ಖ್ಯಾತ ಪಾಪ್ ತಾರೆ ಮೈಕೆಲ್ ಜಾಕ್ಸನ್ ತಮ್ಮ ಮರಣಪತ್ರದಲ್ಲಿ ತಮ್ಮ ಇಡೀ ಎಸ್ಟೇಟನ್ನು ಕುಟುಂಬದ ಟ್ರಸ್ಟ್‌ಗೆ ನೀಡಿರುವುದಾಗಿ ಬರೆದಿದ್ದಾರೆ. ತಮ್ಮ ಮಾಜಿ ಪತ್ನಿ ಡೆಬ್ಬಿ ರೋವ್ ಅವರ ಹೆಸರನ್ನು ಮರಣಪತ್ರದಲ್ಲಿ ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದಾರೆ. ಜಾಕ್ಸನ್ ಅವರ ಮೂರು ಮಕ್ಕಳ ಆರೈಕೆ ಮಾಡಲು ಜಾಕ್ಸನ್ ತಾಯಿ ಅಸಮರ್ಥರಾದರೆ ಸುದೀರ್ಘಕಾಲದ ಸ್ನೇಹಿತೆ ಮತ್ತು ಹಾಡುಗಾರ್ತಿ ಡಯಾನ ರೋಸ್ ಅವರನ್ನು ತಮ್ಮ ಮೂರು ಮಕ್ಕಳ ಪೋಷಕರೆಂದು ಜಾಕ್ಸನ್ ಹೆಸರಿಸಿದ್ದಾರೆ.
ಜಾಕ್ಸನ್ ಅವರ ಮರಣಪತ್ರ 2002ರ ಜು.7ರ ದಿನಾಂಕದ್ದಾಗಿದ್ದು, ಅವರ ಎಸ್ಟೇಟ್ 500 ಮಿಲಿಯನ್ ಡಾಲರ್ ಮೌಲ್ಯವುಳ್ಳದ್ದಾಗಿದೆ. ಡೆಬ್ಬಿ ರೋವ್ ಜಾಕ್ಸನ್ ಅವರನ್ನು 1996ರಲ್ಲಿ ವಿವಾಹವಾಗಿ 1999ರಲ್ಲಿ ವಿಚ್ಛೇದನ ನೀಡಿದ್ದರು. ಮಕ್ಕಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಹಕ್ಕನ್ನು ಕೈಬಿಟ್ಟ ಅವರು ಅದಕ್ಕಾಗಿ 2003ರಲ್ಲಿ ಪುನಃ ಪ್ರಯತ್ನಿಸಿದರು. 2006ರಲ್ಲಿ ಜಾಕ್ಸನ್ ಮತ್ತು ರೋವ್ ಒಪ್ಪಂದ ಮಾಡಿಕೊಂಡಿದ್ದು, ಒಪ್ಪಂದದ ಷರತ್ತುಗಳು ಬಯಲಾಗಿಲ್ಲ.
ಜಾಕ್ಸನ್ ಕಿರಿಯ ಪುತ್ರ 7 ವರ್ಷ ವಯಸ್ಸಿನ ಪ್ರಿನ್ಸ್ ಮೈಕೇಲ್ ಬಾಡಿಗೆ ತಾಯಿಗೆ ಜನಿಸಿದ್ದು, ಬಾಡಿಗೆ ತಾಯಿಯ ಗುರುತು ಬಹಿರಂಗಪಡಿಸಿಲ್ಲ. ಮೈಕೆಲ್ ತಾಯಿ ಕ್ಯಾಥರೀನ್ ಜಾಕ್ಸನ್ ಅವರಿಗೆ ಜಾಕ್ಸನ್ ಮೂರು ಮಕ್ಕಳನ್ನು ನೋಡಿಕೊಳ್ಳುವ ತಾತ್ಕಾಲಿಕ ಪೋಷಕ ಜವಾಬ್ದಾರಿ ವಹಿಸಲಾಗಿದ್ದು, ಮಕ್ಕಳ ಕಾನೂನುಬದ್ಧ ಪೋಷಕರು ಯಾರೆಂದು ಕೋರ್ಟ್ ನಿರ್ಧರಿಸಲಿದೆ. |