ಪರಮಹಂಸ ನಿತ್ಯಾನಂದ ಸ್ವಾಮಿ ಮತ್ತು ತಮಿಳು ನಟಿಯೊಂದಿಗಿನ ಕಾಮಕಾಂಡ ಬಹಿರಂಗವಾಗುತ್ತಿದ್ದಂತೆ ಈ ಧಾರ್ಮಿಕ ಗುರುವಿನ ಮಲೇಷಿಯಾದಲ್ಲಿನ ಆಧ್ಯಾತ್ಮಿಕ ಕೇಂದ್ರ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.
ಮಲೇಷಿಯಾ ಹಿಂದೂ ಸಂಘದ ಸಲಹೆ ಹಿನ್ನೆಲೆಯಲ್ಲಿ ನಾವು ಎಲ್ಲಾ ಚಟುವಟಿಕೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಈ ಕೇಂದ್ರದ ವಕ್ತಾರರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆಂದು ವರದಿಯಾಗಿದೆ.
ಭಾರತದಲ್ಲಿ ಪ್ರಧಾನ ಆಶ್ರಮದಲ್ಲಿ ಲೈಂಗಿಕ ಹಗರಣ ನಡೆದಿರುವುದು ಮಾಧ್ಯಮಗಳಲ್ಲಿ ಬಯಲಾಗುತ್ತಿದ್ದಂತೆ ಭಕ್ತರು ಮತ್ತು ಅನುಯಾಯಿಗಳು ಮಲೇಷಿಯಾದ ಕೇಂದ್ರಕ್ಕೆ ತಂಡೋಪತಂಡವಾಗಿ ಬರಲಾರಂಭಿಸಿದ್ದರು. ಅಲ್ಲದೆ ಭಾರೀ ಸಂಖ್ಯೆಯಲ್ಲಿ ದೂರವಾಣಿ ಕರೆಗಳು ಕೂಡ ಬರುತ್ತಿದ್ದವು ಎಂದು ಹೇಳಲಾಗಿದೆ.
ತಮಿಳು ನಟಿ ರಂಜಿತಾ ಎಂದು ಹೇಳಲಾಗಿರುವ ಮಹಿಳೆಯೊಂದಿಗೆ ಅಶ್ಲೀಲ ಭಂಗಿಗಳೊಂದಿಗೆ ಕಾಣಿಸಿಕೊಂಡಿದ್ದ ವೀಡಿಯೋ ತುಣುಕನ್ನು ಸನ್ ಟೀವಿ ಪ್ರಸಾರ ಮಾಡಿದ ಬಳಿಕ ನಿತ್ಯಾನಂದ ಸ್ವಾಮಿ ಭೂಗತರಾಗಿದ್ದು, ಹಲವಾರು ಪ್ರಕರಣಗಳು ಅವರ ಮೇಲೆ ದಾಖಲಾಗಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಆಶ್ರಮದ ವಕ್ತಾರ, ಎರಡು ವರ್ಷಗಳ ಹಿಂದಷ್ಟೇ ಚಿಕಿತ್ಸಾ (ಹೀಲಿಂಗ್) ಕೇಂದ್ರವನ್ನು ಆರಂಭಿಸಲಾಗಿತ್ತು ಮತ್ತು ಇಂತಹ ಕೇಂದ್ರ ಮಲೇಷಿಯಾದಲ್ಲಿ ಇದೊಂದೇ ಎಂದು ತಿಳಿಸಿದ್ದಾರೆ.
ನಾವು ಮಲೇಷಿಯಾದ ತಮನ್ ದೇಸಾ ಗಾಂಬಾಕ್ ಎಂಬಲ್ಲಿ ಮಾತ್ರ ನಿತ್ಯಾನಂದ ಆಶ್ರಮದ ಶಾಖೆಯನ್ನು ಹೊಂದಿದ್ದೇವೆ. ದೇಶದ ಇತರ ಯಾವುದೇ ಭಾಗದಲ್ಲಿ ನಮ್ಮ ಕೇಂದ್ರವಿಲ್ಲ. ಹೆಚ್ಚು ಹೀಲಿಂಗ್ ಪಡೆಯುವವರನ್ನೂ ನಾವು ಹೊಂದಿಲ್ಲ. ಬಹುಶಃ ನಮ್ಮಿಂದ ಸುಮಾರು 400ರಷ್ಟು ಚಿಕಿತ್ಸೆ ಪಡೆಯುವವರು ಈ ದೇಶದಲ್ಲಿದ್ದಾರೆ ಎಂದು ಈ ವಕ್ತಾರ ಹೇಳಿದ್ದಾರೆ.