ವಿಶ್ವದಲ್ಲಿ ಮುಸ್ಲಿಮೇತರರಿಗೆ ಹೋಲಿಸಿದರೆ ಮುಸ್ಲಿಮರ ಜನಸಂಖ್ಯೆಯು ದುಪ್ಪಟ್ಟು ವೇಗದಲ್ಲಿ ಬೆಳೆಯಲಿದ್ದು, ಮುಂದಿನ ಇಪ್ಪತ್ತು ವರ್ಷಗಳಲ್ಲಿ ಜಗತ್ತಿನಲ್ಲಿ ಶೇ. 25ರಷ್ಟು ಮುಸ್ಲಿಮರೇ ಇರುತ್ತಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಜನನ, ಮರಣ ಪ್ರಮಾಣ ಮತ್ತು ವಲಸೆ ಪ್ರಮಾಣಗಳನ್ನು ಗಣನೆಗೆ ತೆಗೆದುಕೊಂಡು ಧಾರ್ಮಿಕ ಮತ್ತು ಸಾರ್ವಜನಿಕ ಜೀವನದ ಪ್ಯು (Pew) ಫೋರಂ ನಡೆಸಿದ ಸಮೀಕ್ಷೆಯ ಪ್ರಕಾರ, ಮುಂದಿನ ಎರಡು ದಶಕಗಳಲ್ಲಿ ಮುಸ್ಲಿಮರ ಜನಸಂಖ್ಯೆಯು ಶೇ.1.5 ಪ್ರಮಾಣದಲ್ಲಿ ವೃದ್ಧಿಯಾಗಲಿದ್ದರೆ, ಮುಸ್ಲಿಮತೇರರ ಜನಸಂಖ್ಯೆ ವೃದ್ಧಿಯು ಶೇ.0.7 ಮಾತ್ರ.
"ಜಾಗತಿಕ ಮುಸ್ಲಿಂ ಜನಸಂಖ್ಯೆಯ ಭವಿಷ್ಯ" ಹೆಸರಿನ ಅಧ್ಯಯನದ ಪ್ರಕಾರ, 2030ರ ವೇಳೆಗೆ ಜಗತ್ತಿನ ಜನಸಂಖ್ಯೆಯಲ್ಲಿ ಶೇ.26.4ರಷ್ಟು ಮುಸ್ಲಿಮರಿರುತ್ತಾರೆ. ಅಂದರೆ ಅ ಅವಧಿಯಲ್ಲಿ ಮುಸ್ಲಿಮರ ಜಾಗತಿಕ ಜನಸಂಖ್ಯೆ 830 ಕೋಟಿ ಆಗಲಿದೆ.
ಅಂದರೆ ಈಗ ಇರುವ ಶೇ.23.4ರಷ್ಟು (690 ಕೋಟಿ ) ಮುಸ್ಲಿಮರ ಜನಸಂಖ್ಯೆಯೊಂದಿಗೆ, ಇನ್ನೆರಡು ದಶಕಗಳಲ್ಲಿ ಅವರ ಜನಸಂಖ್ಯೆಯು ಶೇ.3 ಹೆಚ್ಚಳವಾಗಲಿದೆ.
ಅದರಲ್ಲೂ, 10ರಲ್ಲಿ ಆರಕ್ಕೂ ಹೆಚ್ಚು ಮಂದಿ ಮುಸ್ಲಿಮರು ಏಷ್ಯಾ-ಪೆಸಿಫಿಕ್ ವಲಯದಲ್ಲೇ ಇರುತ್ತಾರೆ. ಇತ್ತೀಚೆಗೆ ಇಸ್ಲಾಮಿಕ್ ಮೂಲಭೂತವಾದಿಗಳ ಸಂಖ್ಯೆ ಹೆಚ್ಚಳ ಕಂಡಿರುವ ಪಾಕಿಸ್ತಾನವು, ಅತ್ಯಂತ ಹೆಚ್ಚು ಮುಸ್ಲಿಂ ಜನಸಾಂದ್ರತೆಯ ಎಂಬ ಹೆಸರು ಪಡೆದಿರುವ ಇಂಡೋನೇಷ್ಯಾವನ್ನು ಹಿಂದಿಕ್ಕಲಿದೆ.