ಮಂಗಳವಾರ 85 ವರ್ಷ ಪೂರ್ಣಗೊಳಿಸಿದ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರಿಗೆ ತಮಿಳುನಾಡಿನ ಹೋಟೆಲ್ ಮಾಲೀಕರು ಉಡುಗೊರೆ ನೀಡಿದ್ದಾರೆ. ಅದೇನು ಗೊತ್ತೇ? ಇಡ್ಲಿ, ದೋಸೆ, ಪೊಂಗಲ್ ಮುಂತಾದ ಖಾದ್ಯಗಳ ಬೆಲೆಯನ್ನು ಶೇ.10ರಿಂದ 15ರಷ್ಟು ಇಳಿಕೆ ಮಾಡುವ ಮೂಲಕ!
ತಮಿಳುನಾಡು ವಿಧಾನಸಭಾ ಕಚೇರಿಯಲ್ಲಿ ಆಹಾರ ಸಚಿವ ಇ.ವಿ.ವೇಲು ಅವರನ್ನು ವಸಂತ ಭವನ ಗ್ರೂಪ್‌ನ ಎಂ.ರವಿ ನೇತೃತ್ವದಲ್ಲಿ ಭೇಟಿಯಾದ ಹೋಟೆಲ್ ಮಾಲೀಕರು, ಇಡ್ಲಿ, ದೋಸೆ, ಪೊಂಗಲ್, ಕಿಚರಿ, ವಡಾ ಮತ್ತು ಕಾಫಿಯ ಬೆಲೆ ಇಳಿಸಲು ಒಪ್ಪಿಗೆ ಸೂಚಿಸಿದರು.
ಸದ್ಯಕ್ಕೆ ಮಧ್ಯಮ ದರ್ಜೆಯ ಹೋಟೆಲುಗಳಲ್ಲಿ ಒಂದು ಪ್ಲೇಟ್ ಇಡ್ಲಿಗೆ 8 ರೂ., ದೋಸೆಗೆ 15 ರೂ., ವಡೆಗೆ 8 ರೂ., ಪೊಂಗಲ್‌ಗೆ 15 ರೂ., ಕಿಚಡಿಗೆ 15 ರೂ. ಮತ್ತು ಒಂದು ಕಪ್ ಕಾಫಿಗೆ 8 ರೂ. ಇದೆ. ಬೇರೆ ಹೋಟೆಲ್‌ಗಳಲ್ಲಿ ಹೆಚ್ಚು ದರದಲ್ಲಿ ಮಾರಾಟವಾಗುತ್ತಿದ್ದ ಇದೇ ತಿಂಡಿಗಳ ಬೆಲೆಯನ್ನು ಶೇ.10ರಿಂದ ಶೇ.15ರವರೆಗೆ ಇಳಿಸಲಾಗುತ್ತಿದ್ದು, ಇದು ಮಂಗಳವಾರದಿಂದ ಜಾರಿಗೆ ಬರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
250 ಗ್ರಾಂ ಅನ್ನದ ಸೀಮಿತ ಊಟವು 20 ರೂ.ಗೆ ದೊರೆಯಲಿದೆ. ಬೆಲೆ ಇಳಿಸಿದ ಹೊರತಾಗಿಯೂ, ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಣದುಬ್ಬರದ ಹಿನ್ನೆಲೆಯಲ್ಲಿ ಹೋಟೆಲ್‌ಗಳು ಆಹಾರದ ಬೆಲೆಯನ್ನು ಏರಿಸಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರವು, ಜನಸಾಮಾನ್ಯರು ದಿನಂಪ್ರತಿ ಸೇವಿಸುವ ಆಹಾರಕ್ಕೆ ಸಮಸ್ಯೆ ಎದುರಿಸಬೇಕಾಗಿದ್ದರಿಂದ ಹೋಟೆಲ್ ಮಾಲೀಕರೊಂದಿಗೆ ಮಾತುಕತೆ ನಡೆಸಿ, ಬೆಲೆ ತಗ್ಗಿಸುವಂತೆ ಕೋರಿತ್ತು.
|